ರಾಜಮೌಳಿ- ವರ್ತಮಾನದ ಶ್ರೇಷ್ಠ ನಿರ್ದೇಶಕರ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಹೆಸರು. ತಮ್ಮ ಸಾಲು ಸಾಲು ಹಿಟ್ ಸಿನಿಮಾಗಳಿಂದ ಭಾರತವಲ್ಲದೇ ವಿಶ್ವದ ಪ್ರೇಕ್ಷಕರನ್ನು ತಮ್ಮತ್ತ ತಿರುಗುವಂತೆ ಮಾಡಿದವರು ಅವರು. ಅವರ ಈ ಹಿಂದಿನ ಚಿತ್ರ ಬಾಹುಬಲಿ ಎರಡು ಭಾಗಗಳಲ್ಲಿ ಬಂದು ಬಹುದೊಡ್ಡ ಯಶಸ್ಸನ್ನು ಕಂಡಿತು. ಅಷ್ಟೇ ಅಲ್ಲದೇ ದಕ್ಷಿಣ ಭಾರತದ ಸಿನಿಮಾಗಳಿಗೆ ಬಹುದೊಡ್ಡ ವೇದಿಕೆಯನ್ನು ಅದು ಕಲ್ಪಿಸಿಕೊಟ್ಟಿತು. ಚಿತ್ರರಂಗದ ಹೊಸ ಹೊಸ ಪ್ರಯೋಗಗಳಿಗೂ ಬಾಹುಬಲಿ ಮುನ್ನುಡಿ ಬರೆಯಿತು. ಇದೀಗ ರಾಜಮೌಳಿ ‘ಆರ್‌ಆರ್‌ಆರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಹೊಸ ಚಿತ್ರದ ಕುರಿತ ಮಾಹಿತಿಗಳು ಸುದ್ದಿ ಮಾಡುತ್ತಿವೆ.
ರಾಜಮೌಳಿಯ ಮುಂದಿನ ಚಿತ್ರಕ್ಕೆ ಸಂಬಂಧಿಸಿದ ಒಂದು ಕುತೂಹಲಕಾರಿ ಸುದ್ದಿ ಇದೀಗ ವೈರಲ್ ಆಗುತ್ತಿದೆ. ಟಾಲಿವುಡ್ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಮೈತ್ರೀ ಮೂವಿ ಮೇಕರ್ಸ್’ ರಾಜಮೌಳಿಯವರೊಂದಿಗೆ ಒಂದು ಬಿಗ್ ಬಜೆಟ್ ಚಲನಚಿತ್ರಕ್ಕೆ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಈ ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಬಜೆಟ್ನ ಚಿತ್ರವಾಗಿರಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಚಿತ್ರದಲ್ಲಿ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಜೊತೆಗೆ ಚಿತ್ರದ ಕಥೆಯ ಬಗ್ಗೆ ಕೂಡ ಇನ್ನೂ ಸ್ಪಷ್ಟತೆ ಇಲ್ಲ. ರಾಜಮೌಳಿಯವರ ಬಹುತೇಕ ಚಿತ್ರಗಳಿಗೆ ಅವರ ತಂದೆ ವಿಜಯೇಂದ್ರ ಪ್ರಸಾದ್ ಕತೆ ಬರೆಯುತ್ತಾರೆ. ಮುಂದಿನ ಚಿತ್ರಕ್ಕೂ ಅವರೇ ಬರೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಪೂರ್ಣ ಪ್ರಮಾಣದ ಚರ್ಚೆಗಳ ನಂತರ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಬರುವ ಸಾಧ್ಯತೆಯಿದೆ.
ಏತನ್ಮಧ್ಯೆ, ‘ಆರ್‌ಆರ್‌ಆರ್’ ಚಿತ್ರದ ನಂತರ ರಾಜಮೌಳಿ ಮಹೇಶ್ ಬಾಬು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಮಹೇಶ್ ಬಾಬು ಅವರೇ ‘ಮೈತ್ರಿ’ ನಿರ್ಮಾಣ ಮಾಡಲಿರುವ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆಯೇ? ಅಥವಾ ನಿರ್ಮಾಣ ಕಂಪನಿಯು ಮತ್ತೊಂದು ಹೊಸ ಚಿತ್ರಕ್ಕಾಗಿ ಮಾತುಕತೆ ನಡೆಸುತ್ತಿದೆಯೇ? ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದ್ದು, ಇದಕ್ಕಾಗಿ ಅಭಿಮಾನಿಗಳು ಕಾಯಲೇ ಬೇಕಾಗಿದೆ.
ಪ್ರಸ್ತುತ ‘ಆರ್‌ಆರ್‌ಆರ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ರಾಜಮೌಳಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಚಿತ್ರೀಕರಣವನ್ನು ಪೂರ್ಣಗೊಳಿಸಿತ್ತು. ಕೊರೊನಾ ಕಾರಣದಿಂದ ಈ ಹಿಂದೆ ನಿಗದಿಯಾಗಿದ್ದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಜಾಗತಿಕವಾಗಿ ಪರಿಸ್ಥಿತಿ ಸರಿಯಾದ ನಂತರ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ಈ ಹಿಂದೆ ಟ್ವೀಟ್ ಮೂಲಕ ತಿಳಿಸಿತ್ತು.
ಇದನ್ನೂ ಓದಿ:
Big Breaking: ಸೋನು ಸೂದ್ಗೆ ಸಂಕಷ್ಟ?; ನಟನಿಗೆ ಸೇರಿದ ಆರು ಜಾಗಗಳಲ್ಲಿ ಐಟಿ ಅಧಿಕಾರಿಗಳ ಸರ್ವೇ
ಪ್ರಶಾಂತ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಚಕ್ರವರ್ತಿ ಚಂದ್ರಚೂಡ್; ಸಂಬರಗಿಗೆ ಆರಂಭವಾಯ್ತು ಕಷ್ಟ ಕಾಲ?
(Is S S Rajamouli planning to make a India’s highest budget film?)
Published On - 5:01 pm, Wed, 15 September 21