‘ಜನ ನಾಯಗನ್’ಗೆ ಮತ್ತೆ ಹಿನ್ನಡೆ: ಸಿನಿಮಾ ಬಿಡುಗಡೆ ಇನ್ನಷ್ಟು ವಿಳಂಬ
Jana Nayagan vs CBFC: ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಲು ನಿರಾಕರಿಸಿರುವ ವಿಷಯವಾಗಿ ಇಂದು ಮದ್ರಾಸ್ ಹೈಕೋರ್ಟ್ ಆದೇಶ ಪ್ರಕಟಿಸಿದೆ. ಆದರೆ ಆದೇಶವು ‘ಜನ ನಾಯಗನ್’ ಸಿನಿಮಾ ಬಿಡುಗಡೆಯನ್ನು ಮತ್ತಷ್ಟು ವಿಳಂಬ ಮಾಡುವಂತಿದೆ.

ದಳಪತಿ ವಿಜಯ್ (Thalapathy Vijay) ನಟನೆಯ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ಗೆ ಹಿನ್ನಡೆಯ ಮೇಲೆ ಹಿನ್ನಡೆ ಆಗುತ್ತಿದೆ. ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆಗಿರುವ ‘ಜನ ನಾಯಗನ್’ ಜನವರಿ 10 ರಂದು ಬಿಡುಗಡೆ ಆಗಬೇಕಿತ್ತು, ಆದರೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಸಿಬಿಎಫ್ಸಿ ವಿರುದ್ಧ ನಿರ್ಮಾಪಕರು ಹೈಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್ ಮೊದಲಿಗೆ ಪ್ರಮಾಣ ಪತ್ರ ನೀಡುವಂತೆ ಹೇಳಿತ್ತಾದರೂ ಬಳಿಕ ತನ್ನದೇ ಆದೇಶಕ್ಕೆ ತಾನೇ ತಡೆ ನೀಡಿತು. ಇಂದು ಮತ್ತೆ ಇದೇ ವಿಚಾರವಾಗಿ ಆದೇಶ ಹೊರಡಿಸಿರುವ ಮದ್ರಾಸ್ ಹೈಕೋರ್ಟ್, ಪ್ರಕರಣವನ್ನು ಸಿಂಗಲ್ ಬೆಂಚ್ಗೆ ವರ್ಗಾವಣೆ ಮಾಡಿದೆ.
ಇಂದು ಆದೇಶ ಪ್ರಕಟಿಸಿದ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು ಮತ್ತೆ ಏಕಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಿದೆ. ಎರಡೂ ಪಕ್ಷದವರಿಗೆ (ಸಿಬಿಎಫ್ಸಿ ಮತ್ತು ಸಿನಿಮಾ ನಿರ್ಮಾಪಕ) ಇಬ್ಬರಿಗೂ ವಾದಕ್ಕೆ ಸೂಕ್ತ ಅವಕಾಶ ನೀಡಿದ ನಂತರ ವಿಷಯವನ್ನು ತ್ವರಿತವಾಗಿ ನಿರ್ಧರಿಸಲು ಏಕ ನ್ಯಾಯಾಧೀಶರಿಗೆ ಸೂಚಿಸಲಾಗಿದೆ. ಅಲ್ಲದೆ, ಸಿನಿಮಾ ನಿರ್ಮಾಪಕರು, ಸಿಬಿಎಫ್ಸಿ ಚೇರ್ಮನ್ ಅವರ ನಿರ್ಧಾರಕ್ಕೆ ಸವಾಲಾಗಿ ಮತ್ತೊಂದು ಅರ್ಜಿಯನ್ನು ಸಲ್ಲಿಸುವಂತೆಯೂ ಸೂಚಿಸಿದೆ.
ಆದೇಶ ಪ್ರಕಟಣಗೂ ಮುನ್ನ, ಈ ಹಿಂದೆ ಸಿಂಗಲ್ ಜಡ್ಜ್ ಬೆಂಚ್ ನೀಡಿದ್ದ ಆದೇಶವನ್ನು ನಿರ್ಲಕ್ಷ್ಯ ಮಾಡಬೇಕು ಎಂದು ಸಹ ಹೈಕೋರ್ಟ್ ಹೇಳಿದೆ ಹಾಗೂ ಆ ಆದೇಶದಲ್ಲಿ ಸಿಬಿಎಫ್ಸಿಗೆ ವಾದ ಮಂಡನೆಗೆ ಸೂಕ್ತ ಅವಕಾಶ ನೀಡಲಾಗಿರಲಿಲ್ಲ ಎಂದು ಗುರುತಿಸಿದೆ. ಇದೀಗ ಪ್ರಕರಣ ಮತ್ತೆ ಹೈಕೋರ್ಟ್ನ ಏಕಸದಸ್ಯ ಪೀಠಕ್ಕೆ ವರ್ಗಾವಣೆ ಆಗಿದ್ದು, ಮೊದಲಿನಿಂದ ಮತ್ತೆ ವಾದ-ಪ್ರತಿವಾದಗಳು ನಡೆಯಲಿದೆ.
ಇದನ್ನೂ ಓದಿ:ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ
‘ಜನ ನಾಯಗನ್’ ಸಿನಿಮಾಕ್ಕೆ ಸುಮಾರು 13 ಕಟ್ಗಳನ್ನು ಸಿಬಿಎಫ್ಸಿ ಸೂಚಿಸಿತ್ತು. ಎಲ್ಲದಕ್ಕೂ ನಿರ್ಮಾಪಕರು ಒಪ್ಪಿಕೊಂಡಿದ್ದರು. ಆದರೂ ಸಹ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಲು ಸಿಬಿಎಫ್ಸಿ ಚೇರ್ಮನ್ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರು. ಸಿನಿಮಾ ರಿವ್ಯೂ ಕಮಿಟಿಗೆ ಹೋದರೆ ಬಿಡುಗಡೆ ತಡವಾಗುತ್ತದೆ ಎಂಬ ಉದ್ದೇಶದಿಂದ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲಿಯೂ ಸಹ ನ್ಯಾಯ ವಿಳಂಬ ಆಗುತ್ತಿದೆ.
‘ಜನ ನಾಯಗನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಮಮಿತಾ ಬಿಜು, ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾದ ವಿಲನ್ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




