ನಟಿ ಜಾನ್ಹವಿ ಕಪೂರ್ (Janhvi Kapoor) ಈಗ ಬಾಲಿವುಡ್ಗಿಂತಲೂ ಹೆಚ್ಚು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅದರಲ್ಲಿಯೂ ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಒಂದರ ಮೇಲೊಂದು ಅವಕಾಶಗಳು ಜಾನ್ಹವಿ ಕಪೂರ್ ಅವರನ್ನು ಅರಸಿ ಬರುತ್ತಿವೆ. ಈಗಾಗಲೇ ಎರಡು ಭಾರಿ ದೊಡ್ಡ ಸಿನಿಮಾಗಳಲ್ಲಿ ಜಾನ್ಹವಿ ಕಪೂರ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅದರ ಬೆನ್ನಲ್ಲೆ ಈಗ ಮತ್ತೊಂದು ಬಹು ದೊಡ್ಡ ಅವಕಾಶ ಜಾನ್ಹವಿ ಕಪೂರ್ಗೆ ಲಭಿಸಿದೆ. ವಿಶೇಷವೆಂದರೆ ಆ ಅವಕಾಶ ಈ ಮೊದಲು ಕನ್ನಡದ ನಟಿ ಶ್ರೀಲೀಲಾಗೆ ಸಿಕ್ಕಿತ್ತು. ಆದರೆ ಶ್ರೀಲೀಲಾ ಅವಕಾಶವನ್ನು ನಿರಾಕರಿಸಿದರು.
‘ಬಾಹುಬಲಿ’ ಮಾದರಿಯಲ್ಲಿಯೇ ಮೊದಲ ಸಿನಿಮಾದ ಬಳಿಕ ಎರಡನೇ ಭಾಗಕ್ಕೆ ಭಾರಿ ಕ್ರೇಜ್ ಹುಟ್ಟಿಸಿರುವ ತೆಲುಗು ಸಿನಿಮಾ ಎಂದರೆ ಅದು ‘ಪುಷ್ಪ 2’. ಅಲ್ಲು ಅರ್ಜುನ್ ನಟನೆಯ ಈ ಸೀಕ್ವೆಲ್ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳಿವೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಸಿನಿಮಾದ ವಿಶೇಷ ಹಾಡಿನಲ್ಲಿ ಕುಣಿಯುವ ಅವಕಾಶ ಈಗ ಜಾನ್ಹವಿ ಕಪೂರ್ಗೆ ಲಭಿಸಿದೆ ಎನ್ನಲಾಗುತ್ತಿದೆ.
‘ಪುಷ್ಪ’ ಸಿನಿಮಾದ ಐಟಂ ಹಾಡಾಗಿದ್ದ ‘ಊ ಅಂಟಾವ ಊಹುಂ ಅಂಟಾವ’ ಹಾಡು ಭಾರಿ ದೊಡ್ಡ ಹಿಟ್ ಆಗಿತ್ತು. ಆ ಹಾಡಿಗೆ ಸಮಂತಾ ಸ್ಟೆಪ್ ಹಾಕಿದ್ದರು. ಸಮಂತಾಗೆ ಅದುವೇ ಮೊಟ್ಟ ಮೊದಲ ಐಟಂ ಹಾಡಾಗಿತ್ತು. ಈಗ ಎರಡನೇ ಭಾಗದಲ್ಲಿಯೂ ಭರ್ಜರಿಯಾಗಿ ಐಟಂ ಹಾಡನ್ನು ಚಿತ್ರೀಕರಿಸಲು ಚಿತ್ರತಂಡ ರೆಡಿಯಾಗಿದ್ದು, ಐಟಂ ಹಾಡಿಗೆ ಹೆಜ್ಜೆ ಹಾಕಲು ದೊಡ್ಡ ನಟಿಯನ್ನೇ ಎಳೆದು ತರಲು ಯೋಜಿಸಿದೆ. ಇದೇ ಕಾರಣಕ್ಕೆ, ಶ್ರೀಲೀಲಾ, ಕಿಯಾರಾ ಅಡ್ವಾಣಿ ಈಗ ಜಾನ್ಹವಿ ಕಪೂರ್ ಅವರುಗಳಿಗೆ ಆಫರ್ ನೀಡಲಾಗಿದೆ.
ಇದನ್ನೂ ಓದಿ:ಶಿವರಾಜ್ ಕುಮಾರ್ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ: ಯಾವುದು ಆ ಸಿನಿಮಾ?
ಜಾನ್ಹವಿ ಕಪೂರ್ ಈಗಾಗಲೇ ಜೂ ಎನ್ಟಿಆರ್ ನಟನೆಯ ‘ದೇವರ’ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ರಾಮ್ ಚರಣ್ ನಟನೆಯ ಹೊಸ ಸಿನಿಮಾದಲ್ಲಿಯೂ ನಾಯಕಿಯಾಗಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಸುಕುಮಾರ್ ಶಿಷ್ಯ ಬುಚ್ಚಿಬಾಬು ಸನಾ ನಿರ್ದೇಶನ ಮಾಡಲಿದ್ದಾರೆ. ಈ ಎರಡು ಸಿನಿಮಾಗಳ ಜೊತೆಗೆ ತಮಿಳಿನಲ್ಲಿಯೂ ಒಂದು ದೊಡ್ಡ ಸಿನಿಮಾ ಒಪ್ಪಿಕೊಂಡಿದ್ದಾರೆ. ಈಗ ‘ಪುಷ್ಪ 2’ ಸಿನಿಮಾದ ಐಟಂ ಹಾಡಿನ ಅವಕಾಶವೂ ಅರಸಿ ಬಂದಿದೆ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು ಜಾನ್ಹವಿಗೆ ಹೊಸತಲ್ಲ, ಹಾಗಾಗಿ ‘ಪುಷ್ಪ 2’ ಸಿನಿಮಾದ ಅವಕಾಶವನ್ನು ಜಾನ್ಹವಿ ಒಪ್ಪಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಅಂದಹಾಗೆ ‘ಪುಷ್ಪ 2’ ಸಿನಿಮಾದ ಐಟಂ ಹಾಡಿಗೆ ಡ್ಯಾನ್ಸ್ ಮಾಡುವ ಅವಕಾಶ ಕನ್ನಡತಿ ಶ್ರೀಲೀಲಾಗೆ ದೊರಕಿತ್ತು. ಆದರೆ ಶ್ರೀಲೀಲಾ, ತಾವು ನಾಯಕಿಯಾಗಿ ಸಖತ್ ಬ್ಯುಸಿಯಾಗಿರುವ ಈ ಸಮಯದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕುವುದು ಬೇಡ ಎಂಬ ನಿರ್ಣಯ ತೆಗೆದುಕೊಂಡು ಅದರಿಂದ ದೂರ ಉಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ