ಮತ್ತೊಂದು ತೆಲುಗು ಸಿನಿಮಾದಲ್ಲಿ ಜಾನ್ಹವಿ ಕಪೂರ್, ಅಮ್ಮನಂತೆ ದಕ್ಷಿಣದ ಸ್ಟಾರ್ ನಟಿ ಆಗ್ತಾರಾ?

|

Updated on: Apr 30, 2023 | 6:51 PM

Janhvi Kapoor: ಬಾಲಿವುಡ್ ಸ್ಟಾರ್ ಯುವನಟಿ ಜಾನ್ಹವಿ ಕಪೂರ್ ಈಗಾಗಲೇ ಒಂದು ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಇದೀಗ ಮತ್ತೊಂದು ತೆಲುಗು ಸಿನಿಮಾವನ್ನು ಒಪ್ಪಿಕೊಂಡಿದ್ದಾರಂತೆ.

ಮತ್ತೊಂದು ತೆಲುಗು ಸಿನಿಮಾದಲ್ಲಿ ಜಾನ್ಹವಿ ಕಪೂರ್, ಅಮ್ಮನಂತೆ ದಕ್ಷಿಣದ ಸ್ಟಾರ್ ನಟಿ ಆಗ್ತಾರಾ?
ಜಾನ್ಹವಿ ಕಪೂರ್
Follow us on

ದಕ್ಷಿಣ ಭಾರತದ (South Indian movie) ಸಿನಿಮಾಗಳು ಬಾಲಿವುಡ್ (Bollywood) ಅನ್ನು ಮೀರಿ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ಬೆನ್ನಲ್ಲೆ, ಬಾಲಿವುಡ್​ನ ತಾರಾ ನಟರುಗಳು ಸಹ ದಕ್ಷಿಣದ ಸಿನಿಮಾಗಳ ಭಾಗವಾಗಲು ತರಾತುರಿಯಲ್ಲಿದ್ದಾರೆ. ಬಾಲಿವುಡ್ ನಟಿಯರು (Bollywood Heroiens) ಮೊದಲಿನಿಂದಲೂ ಆಗೊಮ್ಮೆ ಈಗೊಮ್ಮೆ ದಕ್ಷಿಣದ ಸಿನಿಮಾಗಳಲ್ಲಿ ನಟಿಸುತ್ತಲೇ ಬರುತ್ತಿದ್ದಾರಾದರೂ ದಕ್ಷಿಣದ ಬಗ್ಗೆ ಒಂದು ನಿರ್ಲಕ್ಷ್ಯ ಮೊದಲಿನಿಂದಲೂ ಇತ್ತು. ಆದರೆ ಇತ್ತೀಚೆಗೆ ಅದು ಬದಲಾಗಿದೆ. ಮುಂಚೆ ಕೇವಲ ದೊಡ್ಡ ಸಂಭಾವನೆಗಾಗಿ ಅಷ್ಟೆ ದಕ್ಷಿಣದ ಬರುತ್ತಿದ್ದ ನಟಿಯರು ಈಗ ಉತ್ತಮ ಪಾತ್ರಗಳು, ದೊಡ್ಡ ಎಕ್ಸ್​ಫೋಷರ್​ ಸಿಗುವ ಹಂಬಲದಿಂದ ದಕ್ಷಿಣದತ್ತ ಮುಖ ಮಾಡಿದ್ದಾರೆ ಅದರಲ್ಲಿ ಜಾನ್ಹವಿ ಕಪೂರ್ (Janhvi Kapoor) ಸಹ ಒಬ್ಬರು.

ಶ್ರೀದೇವಿಯ (Sridevi) ಪುತ್ರಿ ಜಾನ್ಹವಿ ಕಪೂರ್ ಬಾಲಿವುಡ್​ನ ಸ್ಟಾರ್ ಯುವನಟಿ. ಗ್ಲಾಮರಸ್ ಪಾತ್ರಗಳ ಜೊತೆಗೆ ಚಾಲೆಂಜಿಂಗ್ ಮಿಲಿ, ಗುಡ್​ ಲಕ್ ಜೆರ್ರಿ ಅಂಥಹಾ ಪಾತ್ರಗಳಲ್ಲಿಯೂ ನಟಿ ಸೈ ಎನಿಸಿಕೊಂಡಿದ್ದಾರೆ. ಇದೀಗ ದಕ್ಷಿಣ ಭಾರತಕ್ಕೆ ಜಾನ್ಹವಿ ಪದಾರ್ಪಣೆ ಮಾಡಿದ್ದು, ಮೊದಲ ಸಿನಿಮಾದಲ್ಲಿಯೇ ತಾರಾ ನಟ ಜೂ ಎನ್​ಟಿಆರ್ ಜೊತೆಗೆ ಕೈಜೋಡಿಸಿದ್ದಾರೆ. ಆದರೆ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿರುವಾಗಲೇ ಮತ್ತೊಂದು ತೆಲುಗು ಸಿನಿಮಾ ಆಫರ್ ಅನ್ನು ಜಾನ್ಹವಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ತೆಲುಗಿನ ಸ್ಟಾರ್ ಯುವನಟನ ಮುಂದಿನ ಸಿನಿಮಾದಲ್ಲಿ ಜಾನ್ಹವಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ನಾಗಾರ್ಜುನ-ಅಮಲಾ ಪುತ್ರ ಅಖಿಲ್ ಅಕ್ಕಿನೇನಿಯ ಮುಂದಿನ ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿಯಂತೆ. ಈ ಸಿನಿಮಾವನ್ನು ಯುವನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಪ್ರಭಾಸ್ ನಟಿಸಿರುವ ಸಾಹೋ ಸಿನಿಮಾಕ್ಕೆ ಅನಿಲ್ ಕುಮಾರ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈಗ ಅವರೇ ಮೊದಲ ಬಾರಿಗೆ ಸ್ವತಂತ್ರ್ಯ ನಿರ್ದೇಶಕರಾಗುತ್ತಿದ್ದು ಅಖಿಲ್ ಹಾಗೂ ಜಾನ್ಹವಿಯನ್ನು ಫೈನಲ್ ಮಾಡಿದ್ದಾರೆ.

ಜಾನ್ಹವಿ ಕಪೂರ್, ತಮ್ಮ ಮೊದಲ ದಕ್ಷಿಣ ಭಾರತದ ಸಿನಿಮಾ ಆಗಿ ಜೂ ಎನ್​ಟಿಆರ್ ಸಿನಿಮಾವನ್ನು ಆರಿಸಿಕೊಂಡಿದ್ದಾರೆ. ಜೂ ಎನ್​ಟಿಆರ್ ನಟನೆಯ ಮೂವತ್ತನೇ ಸಿನಿಮಾದಲ್ಲಿ ಜಾನ್ಹವಿ ನಾಯಕಿಯಾಗಿದ್ದು, ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಭಾರಿ ದೊಡ್ಡ ಮೊತ್ತದ ಸಂಭಾವನೆಯನ್ನೇ ಜಾನ್ಹವಿ ಪಡೆದಿದ್ದಾರೆ. ಕೆಲವೇ ದಿನಗಳ ಚಿತ್ರೀಕರಣಕ್ಕಾಗಿ ಬರೋಬ್ಬರಿ ನಾಲ್ಕು ಕೋಟಿ ಸಂಭಾವನೆಯನ್ನು ಜಾನ್ಹವಿ ಪಡೆದಿದ್ದಾರಂತೆ.

ಜಾನ್ಹವಿಯ ತಾಯಿ ಶ್ರೀದೇವಿ ಸಹ ಬಹುಭಾಷಾ ನಟಿಯಾಗಿದ್ದರು, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ಶ್ರೀದೇವಿ ನಟಿಸಿ ಎಲ್ಲೆಡೆಯು ಸ್ಟಾರ್ ಎನಿಸಿಕೊಂಡಿದ್ದರು. ಇದೀಗ ಜಾನ್ಹವಿ ಸಹ ಇದೇ ಹಾದಿ ಹಿಡಿದಂತಿದ್ದಾರೆ. ತೆಲುಗಿನಲ್ಲಿ ಎರಡು ಸಿನಿಮಾಗಳ ಜೊತೆಗೆ ಹಿಂದಿಯಲ್ಲಿಯೂ ಜಾನ್ಹವಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಬವಾಲ್ ಹಾಗೂ ಮಿಸ್ಟರ್ ಆಂಡ್ ಮಿಸಸ್ ಭವಿ ಹೆಸರಿನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವುಗಳ ಬಳಿಕ ಅವರ ತಂದೆ ಬೋನಿ ಕಪೂರ್ ನಿರ್ಮಾಣದ ತಮಿಳು ಸಿನಿಮಾ ಒಂದರಲ್ಲಿಯೂ ನಟಿಸುವ ಸಾಧ್ಯತೆ ಇದೆ ಜಾನ್ಹವಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ