
ಪ್ರಭಾಸ್ಗಿಂತಲೂ (Prabhas ) ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ಇಲ್ಲವೇನೋ. ‘ಬಾಹುಬಲಿ’ ಸಿನಿಮಾಗಳ ಬಳಿಕ ಪ್ರಭಾಸ್ ಗ್ಲೋಬಲ್ ಸ್ಟಾರ್ ಸಹ ಆಗಿದ್ದಾರೆ. ಅವರ ಸಿನಿಮಾಗಳು ಬಿಡುಗಡೆ ಆದ ದಿನವೇ 30-40 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತವೆ. ಪ್ರಭಾಸ್ ಸಿನಿಮಾಕ್ಕೆ ಹಣ ಹಾಕಿದರೆ ನಷ್ಟವೆಂಬ ಮಾತೇ ಇಲ್ಲ ಎಂಬಂತಾಗಿದೆ. ಪ್ರಭಾಸ್ ಅವರ ಕಳಪೆ ಸಿನಿಮಾಗಳೂ ಸಹ 150-200 ಕೋಟಿ ಕಲೆಕ್ಷನ್ ಮಾಡುತ್ತಿವೆ. ಇಂಥಹಾ ಪ್ಯಾನ್ ಇಂಡಿಯಾ ಸ್ಟಾರ್ಗೆ ಮೊಟ್ಟ ಮೊದಲ ಅವಕಾಶ ಕೊಟ್ಟಿದ್ದು ಕರ್ನಾಟಕ ಮೂಲದವರು. ಆಗ ಪ್ರಭಾಸ್ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತೆ?
ಪ್ರಭಾಸ್ ಮೊದಲ ಸಿನಿಮಾ ‘ಈಶ್ವರ್’. ಈ ಸಿನಿಮಾ ನಿರ್ದೇಶನ ಮಾಡಿದ್ದು ಕರ್ನಾಟಕ ಮೂಲದವರಾಗಿರುವ ಜಯಂತ್ ಸಿ ಪರಾಂಜೆ. ಬೆಂಗಳೂರಿನವರಾದ ಜಯಂತ್, ಕಾಲೇಜು ಶಿಕ್ಷಣದ ಸಮಯದಲ್ಲಿ ಹೈದರಾಬಾದ್ಗೆ ಶಿಫ್ಟ್ ಆಗಿ, ಅಲ್ಲಿ ಇಂಗ್ಲೀಷ್ ನಾಟಕಗಳನ್ನು ನಿರ್ದೇಶಿಸುತ್ತಿದ್ದರು. ಹಾಗೆಯೇ ಸಿನಿಮಾಗಳ ಮೇಲೆ ಆಸಕ್ತಿ ಬೆಳೆದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ತೆಲುಗಿಗೆ ಕೆಲವು ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ.
ಜಯಂತ್ ಅವರು ಮಹೇಶ್ ಬಾಬು ನಟನೆಯ ಕೌ ಬಾಯ್ ರೀತಿಯ ಸಿನಿಮಾ ‘ಟಕ್ಕರಿ ದೊಂಗ’ ನಿರ್ದೇಶನ ಮಾಡಬೇಕಾದರೆ, ನಿರ್ಮಾಪಕ ಅಶೋಕ್ ಕುಮಾರ್ ಅವರು, ತಮಗಾಗಿ ಒಂದು ಸಿನಿಮಾ ಮಾಡಿಕೊಡುವಂತೆ ಕೇಳಿದರಂತೆ. ಅದರಂತೆ ಜಯಂತ್ ಅವರು ಆಕ್ಷನ್ ಮಿಶ್ರಿತ ಪ್ರೇಮಕತೆಯನ್ನು ರೆಡಿ ಮಾಡಿಕೊಂಡರಂತೆ. ಬಜೆಟ್ ಹಾಗೂ ಇನ್ನಿತರೆ ಕಾರಣಗಳಿಗಾಗಿ ಹೊಸ ಹೀರೋ ಅನ್ನು ತೆಗೆದುಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ.
ಇದನ್ನೂ ಓದಿ:ಪ್ರಭಾಸ್ ಸಿನಿಮಾನಲ್ಲಿ ಮೆಗಾಸ್ಟಾರ್ ಚಿರಂಜೀವಿ: ಸಂದೀಪ್ ರೆಡ್ಡಿ ವಂಗಾ ಹೇಳಿದ್ದೇನು?
ಅದೇ ಸಮಯದಲ್ಲಿ ಸ್ಟಾರ್ ನಟ ಕೃಷ್ಣಂರಾಜು ಅವರ ಸಹೋದರನ ಮಗ ಪ್ರಭಾಸ್ ನಟನಾ ತರಬೇತಿ ಪಡೆಯುತ್ತಿರುವುದು ತಿಳಿದು ಬಂದಿದೆ. ಅವರ ಫೋಟೊಗಳನ್ನು ತರಿಸಿಕೊಂಡು ನೋಡಿದಾಗ ಜಯಂತ್ಗೆ ಇಷ್ಟವಾಗಿ, ಈತನೇ ಸಿನಿಮಾದ ಹೀರೋ ಎಂದಿದ್ದಾರೆ. ಆದರೆ ಕೃಷ್ಣಂರಾಜು, ಪ್ರಭಾಸ್ ಇನ್ನೂ ತರಬೇತಿ ಪಡೆಯುತ್ತಿದ್ದಾರೆ. ಇನ್ನೂ ಕೆಲ ತಿಂಗಳುಗಳು ಕಳೆಯಲಿ, ತರಬೇತಿ ಪೂರ್ತಿ ಆಗಲಿ ಅಂದರಂತೆ. ಆದರೆ ಜಯಂತ್, ಒಪ್ಪದೆ, ಕ್ಯಾಮೆರಾ ಮುಂದೆಯೇ ಕಲಿಯಲಿ ಎಂದು, ಪ್ರಭಾಸ್ ಅವರನ್ನು ಕರೆತಂದರಂತೆ.
‘ಈಶ್ವರ್’ ಸಿನಿಮಾ 2002 ರಲ್ಲಿ ಬಿಡುಗಡೆ ಆಯ್ತು. ಮೊದಲ ಸಿನಿಮಾನಲ್ಲೇ ಪ್ರಭಾಸ್ ಸೂಪರ್ ಹಿಟ್ ನೀಡಿದರು. ಸಿನಿಮಾ ಆಗಿನ ಕಾಲಕ್ಕೆ 3.50 ಕೋಟಿ ರೂಪಾಯಿ ಹಣ ಗಳಿಸಿತು. ಸಿನಿಮಾ ನಿರ್ಮಾಣಕ್ಕೆ ಸುಮಾರು ಒಂದು ಕೋಟಿ ರೂಪಾಯಿಗಳನ್ನು ನಿರ್ಮಾಪಕರು ಖರ್ಚು ಮಾಡಿದ್ದರು. ತಮ್ಮ ಮೊದಲ ಸಿನಿಮಾಕ್ಕೆ ಪ್ರಭಾಸ್ ಪಡೆದ ಸಂಭಾವನೆ ಕೇವಲ ನಾಲ್ಕು ಲಕ್ಷ ರೂಪಾಯಿಗಳು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ