ನಿರ್ದೇಶಕ ರಾಜಮೌಳಿ ಅವರ ಹವಾ ಏನೆಂಬುದು ಎಲ್ಲರಿಗೂ ಗೊತ್ತು. ಭಾರತೀಯ ಚಿತ್ರರಂಗವೇ ನಿಬ್ಬೆರಗಾಗುವಂತಹ ಸೂಪರ್ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ‘ಬಾಹುಬಲಿ’ ಮಾಡಿದ ಸಾಧನೆಯನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಹಾಗಾಗಿ ಅವರ ಜೊತೆ ಕೆಲಸ ಮಾಡಬೇಕು ಎಂದು ಅನೇಕ ಕಲಾವಿದರು ತುದಿಗಾಲಿನಲ್ಲಿ ನಿಂತು ಕಾಯುತ್ತಾರೆ. ಆದರೆ ರಾಜಮೌಳಿ ಜೊತೆ ಸಿನಿಮಾ ಮಾಡಿ ಒಮ್ಮೆ ಗೆಲ್ಲುವ ಸ್ಟಾರ್ಗಳು, ಮುಂದಿನ ಸಿನಿಮಾದಲ್ಲಿ ಬೇರೆ ನಿರ್ದೇಶಕರ ಜೊತೆ ಕೆಲಸ ಮಾಡಿದರೆ ಹೀನಾಯವಾಗಿ ಸೋಲುತ್ತಾರೆ ಎಂಬ ನಂಬಿಕೆ ಟಾಲಿವುಡ್ನಲ್ಲಿದೆ. ಅದು ಪದೇಪದೇ ಸಾಬೀತಾಗಿದೆ ಕೂಡ.
2001ರಲ್ಲಿ ರಾಜಮೌಳಿ ನಿರ್ದೇಶಿಸಿದ ‘ಸ್ಟೂಡೆಂಟ್ ನಂಬರ್ 1’ ಚಿತ್ರಕ್ಕೆ ಜ್ಯೂ. ಎನ್ಟಿಆರ್ ಹೀರೋ ಆಗಿದ್ದರು. ಆ ಸಿನಿಮಾದಲ್ಲಿ ಜ್ಯೂ. ಎನ್ಟಿಆರ್ಗೆ ದೊಡ್ಡ ಗೆಲುವು ಸಿಕ್ಕಿತು. ಆದರೆ ನಂತರ ಅವರು ನಟಿಸಿದ ‘ಸುಬ್ಬ’ ಸಿನಿಮಾ ಫ್ಲಾಪ್ ಆಯಿತು. ಬಳಿಕ ರಾಜಮೌಳಿ ಮತ್ತು ಜ್ಯೂ. ಎನ್ಟಿಆರ್ ಜೊತೆಯಾಗಿ ‘ಸಿಂಹಾದ್ರಿ’ ಸಿನಿಮಾ ಮಾಡಿ ಯಶಸ್ಸು ಕಂಡರು. ಆ ಬಳಿಕ ಜ್ಯೂ. ಎನ್ಟಿಆರ್ ನಟಿಸಿದ ‘ಆಂಧ್ರಾವಾಲ’ ಸೋತು ಸುಣ್ಣವಾಯಿತು.
ರಾಜಮೌಳಿ ಜೊತೆ ‘ಮಗಧೀರ’ ಚಿತ್ರ ಮಾಡಿ ಗೆದ್ದಿದ್ದ ರಾಮ್ ಚರಣ್ ಅವರು ನಂತರ ‘ಆರಂಜ್’ ಸಿನಿಮಾದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದರು. ಪ್ರಭಾಸ್ ವಿಚಾರದಲ್ಲೂ ಈ ನಂಬಿಕೆ ನಿಜವಾಗಿದೆ. ರಾಜಮೌಳಿ ನಿರ್ದೇಶಿಸಿದ ‘ಚತ್ರಪತಿ’ ಸಿನಿಮಾದಲ್ಲಿ ಪ್ರಭಾಸ್ಗೆ ಗೆಲುವು ಸಿಕ್ಕಿತ್ತು. ನಂತರ ಮಾಡಿದ ‘ಪೌರ್ಣಮಿ’ ಚಿತ್ರದಲ್ಲಿ ಅವರು ಸೋಲು ಕಂಡರು. ‘ಬಾಹುಬಲಿ’ ಬಳಿಕ ಪ್ರಭಾಸ್ ನಟಿಸಿದ ‘ಸಾಹೋ’ ಚಿತ್ರ ಫ್ಲಾಪ್ ಆಯಿತು.
ಈ ಇತಿಹಾಸ ಗಮನಿಸಿದ ಬಳಿಕ ರಾಮ್ ಚರಣ್ ಮತ್ತು ಜ್ಯೂ ಎನ್ಟಿಆರ್ ಫ್ಯಾನ್ಸ್ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈಗ ರಾಜಮೌಳಿ ಜೊತೆ ಈ ಸ್ಟಾರ್ ನಟರಿಬ್ಬರು ‘ಆರ್ಆರ್ಆರ್’ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾ ಖಂಡಿತವಾಗಿ ಗೆಲ್ಲಲಿದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ಆದರೆ ಆ ಬಳಿಕ ರಾಮ್ ಚರಣ್ ನಟಿಸಲಿರುವ 15ನೇ ಸಿನಿಮಾ ಹಾಗೂ ಜ್ಯೂ. ಎನ್ಟಿಆರ್ ನಟಿಸಲಿರುವ 30ನೇ ಚಿತ್ರ ಫ್ಲಾಪ್ ಆಗಲಿದೆ ಎಂಬ ಭಯ ಈಗಲೇ ಕಾಡಲು ಆರಂಭಿಸಿದೆ.
ಒಂದಲ್ಲ ಎರಡಲ್ಲ, ಅನೇಕ ಬಾರಿ ಈ ನಂಬಿಕೆ ನಿಜವಾಗಿದೆ. ಹಾಗಂತ ಒಂದು ಸಿನಿಮಾದ ಸೋಲನ್ನು ಸಂಬಂಧವೇ ಇಲ್ಲದ ರಾಜಮೌಳಿ ತಲೆಗೆ ಕಟ್ಟಿದರೆ ಅದಕ್ಕೆ ಮೂಢನಂಬಿಕೆ ಎನ್ನಲೇಬೇಕು.
ಇದನ್ನೂ ಓದಿ:
ರಾಜಮೌಳಿ ವಿರುದ್ಧ ಸಿಡಿದೆದ್ದ ಶ್ವಾನಪ್ರಿಯರು; ಅಸಲಿಗೆ ಇಲ್ಲಿ ತಪ್ಪು ಯಾರದ್ದು?
‘ಅವರನ್ನು ನೆಲದಲ್ಲಿ ಕೂರಿಸಿದ್ರು, ಬೀದಿ ನಾಯಿ ತೋರಿಸಿದ್ರು’; ನಿರ್ದೇಶಕ ರಾಜಮೌಳಿ ತೀವ್ರ ಬೇಸರ