ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ಥವ್ಯಸ್ಥವಾಗಿದೆ. ಎರಡು ರಾಜ್ಯಗಳಲ್ಲಿ ಈವರೆಗೆ ಸುಮಾರು 40 ಮಂದಿ ಮಳೆಗೆ ಆಹುತಿಯಾಗಿದ್ದಾರೆ ಎನ್ನಲಾಗಿದ್ದು, ನೂರಾರು ಮಂದಿ ಮನೆ, ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಎರಡೂ ಸರ್ಕಾರಗಳು ಸಂತ್ರಸ್ತರ ನೆರವಿಗೆ ಪ್ರಯತ್ನಿಸುತ್ತಿದ್ದು, ಇದೀಗ ಸಿನಿಮಾ ನಟರು ಸಹ ಸಂತ್ರಸ್ತರ ಸಹಾಯಕ್ಕೆ ಧಾವಿಸಿದ್ದಾರೆ. ನಟ ಜೂ ಎನ್ಟಿಆರ್ ಎರಡೂ ರಾಜ್ಯಗಳಿಗೆ ಒಂದು ಕೋಟಿ ರೂಪಾಯಿ ನೆರವು ಘೋಷಿಸಿದ್ದಾರೆ.
ಕರ್ನಾಟಕ ಪ್ರವಾಸದಲ್ಲಿದ್ದ ನಟ ಜೂ ಎನ್ಟಿಆರ್, ಮಳೆಯಿಂದ ಹಾನಿಗೊಳಗಾದವರ ನೆರವಿಗೆಂದು ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳ ಸಹಾಯ ನಿಧಿಗೆ ತಲಾ ಐವತ್ತು ಲಕ್ಷ ರೂಪಾಯಿ ನೆರವು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜೂ ಎನ್ಟಿಆರ್, ‘ಭಾರೀ ಮಳೆಯಿಂದಾಗಿ ಎರಡು ತೆಲುಗು ರಾಜ್ಯಗಳಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಆಗಿರುವ ಅನಾಹುತದಿಂದ ನಾನು ತೀವ್ರವಾಗಿ ಮನನೊಂದಿದ್ದೇನೆ. ಈ ದುರಂತದಿಂದ ತೆಲುಗು ಜನರು ಬೇಗ ಚೇತರಿಸಿಕೊಳ್ಳಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ:ಕೊಲ್ಲೂರು ಮೂಕಾಂಬಿಕೆ ದರ್ಶನ್ ಮಾಡಿದ ಜೂ ಎನ್ಟಿಆರ್
ಮುಂದುವರೆದು, ‘ನನ್ನ ಕಡೆಯಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎರಡು ತೆಲುಗು ರಾಜ್ಯಗಳ ಸರ್ಕಾರಗಳು ಪ್ರವಾಹ ವಿಕೋಪದಿಂದ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳಿಗೆ ಸಹಾಯ ಮಾಡಲು ತಲಾ 50 ಲಕ್ಷ ದೇಣಿಗೆಯನ್ನು ಘೋಷಿಸುತ್ತಿದ್ದೇನೆ’ ಎಂದಿದ್ದಾರೆ. ಆ ಮೂಲಕ ಆಂಧ್ರ-ತೆಲಂಗಾಣ ಜನರ ನೆರವಿಗೆ ಬಂದ ಮೊದಲ ನಟ ಎನಿಸಿಕೊಂಡಿದ್ದಾರೆ. ‘ಕಲ್ಕಿ’ ಸಿನಿಮಾ ತಂಡವೂ ಸಹ ತಲಾ 25 ಲಕ್ಷ ರೂಪಾಯಿಗಳ ನೆರವು ಘೋಷಣೆ ಮಾಡಿದೆ. ಜೂ ಎನ್ಟಿಆರ್ ಬಳಿಕ ಇನ್ನಷ್ಟು ನಟರು ನೆರವು ಘೋಷಿಸುವ ಸಾಧ್ಯತೆ ಇದೆ.
ಜೂ ಎನ್ಟಿಆರ್ ಕಳೆದ ಕೆಲ ದಿನಗಳಿಂದಲೂ ಕರ್ನಾಟಕದಲ್ಲಿ ವಾಸ್ತವ್ಯ ಹೂಡಿದ್ದರು. ತಾಯಿ, ಪತ್ನಿಯೊಂದಿಗೆ ಕರ್ನಾಟಕಕ್ಕೆ ಬಂದಿದ್ದ ಜೂ ಎನ್ಟಿಆರ್, ತಾಯಿಯ ಆಸೆಯಂತೆ ಅವರ ಹುಟ್ಟೂರಾದ ಕುಂದಾಪುರ, ಉಡುಪಿ ಕೃಷ್ಣನ ದರ್ಶನವನ್ನು ಮಾಡಿಸಿದರು. ಈ ವೇಳೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ಜೊತೆಗಿದ್ದರು. ಅದಾದ ಬಳಿಕ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಪ್ರಶಾಂತ್ ನೀಲ್ ಇನ್ನಿತರರ ಜೊತೆಗೆ ಕರಾವಳಿಯ ಕೆಲವು ಸುಂದರ ತಾಣಗಳಲ್ಲಿ ಜೂ ಎನ್ಟಿಆರ್ ಸುತ್ತಾಡಿದ್ದಾರೆ. ಬಸ್ರೂರು ಮ್ಯೂಸಿಕ್ ಸ್ಟುಡಿಯೋಗೆ ಸಹ ಭೇಟಿ ನೀಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Tue, 3 September 24