ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್ ಹೊಸ ಸಿನಿಮಾ ‘ಪಾರು ಪಾರ್ವತಿ’
‘ಪಾರು ಪಾರ್ವತಿ’ ಸಿನಿಮಾಗೆ ರೋಹಿತ್ ಕೀರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಪಿ.ಬಿ. ಪ್ರೇಮನಾಥ್ ಅವರು ಬಂಡವಾಳ ಹೂಡಿದ್ದಾರೆ. ಖ್ಯಾತ ನಟಿ ದೀಪಿಕಾ ದಾಸ್ ಅವರಿಗೆ ಈ ಚಿತ್ರದಲ್ಲಿ ಡಿಫರೆಂಟ್ ಪಾತ್ರವಿದೆ. ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ ಇತ್ತೀಚೆಗೆ ಟೈಟಲ್ ಲಾಂಚ್ ಮಾಡಿದೆ. ಬಳಿಕ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.
ನಟಿ ದೀಪಿಕಾ ದಾಸ್ ಅವರು ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 7’ ಶೋನಲ್ಲಿ ಸ್ಪರ್ಧಿಸಿಯೂ ಅವರು ಸಖತ್ ಹೆಸರು ಮಾಡಿದರು. ಅಷ್ಟೇ ಅಲ್ಲದೇ, ಸಿನಿಮಾಗಳಲ್ಲೂ ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ದೀಪಿಕಾ ದಾಸ್ ಅವರು ಈಗ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ‘EIGHTEEN THIRTY SIX Pictures’ ಸಂಸ್ಥೆಯ ಮೂಲಕ ಪಿ.ಬಿ. ಪ್ರೇಮನಾಥ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಪಾರು ಪಾರ್ವತಿ’ ಎಂದು ಶೀರ್ಷಿಕೆ ಇಡಲಾಗಿದೆ.
‘ಪಾರು ಪಾರ್ವತಿ’ ಸಿನಿಮಾಗೆ ರೋಹಿತ್ ಕೀರ್ತಿ ನಿರ್ದೇಶನ ಮಾಡುತ್ತಿದ್ದಾರೆ. ದೀಪಿಕಾ ದಾಸ್ ಜೊತೆ ಪೂನಂ ಸರ್ ನಾಯಕ್, ಫವಾಜ್ ಅಶ್ರಫ್ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೈಟಲ್ ಲಾಂಚ್ ಮಾಡಲಾಯಿತು. ಇದೇ ಸಂದರ್ಭದಲ್ಲಿ ‘EIGHTEEN THIRTY SIX Pictures’ ನಿರ್ಮಾಣ ಸಂಸ್ಥೆಯ ಉದ್ಘಾಟನೆಗೆ ಕೂಡ ನಡೆಯಿತು.
‘ಮೊದಲಿನಿಂದಲೂ ನನಗೆ ಪ್ರವಾಸ ಮತ್ತು ಅಡ್ವೆಂಚರ್ನಲ್ಲಿ ಆಸಕ್ತಿ. ಈ ಸಿನಿಮಾದಲ್ಲಿ ನಾನು ಏಕಾಂಗಿ ಸಂಚಾರಿ ಆಗಿರುತ್ತೇನೆ. ಪಾಯಲ್ ಎಂಬುದು ನನ್ನ ಪಾತ್ರದ ಹೆಸರು. ಪ್ರಯಾಣದಲ್ಲೇ ಸಿನಿಮಾದ ಕಥೆ ಸಾಗುತ್ತದೆ. ಈ ಸಿನಿಮಾಗಾಗಿ ನಾನು 1 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಉದ್ದವಾದ ಕೂದಲಿಗೆ ಕತ್ತರಿ ಹಾಕಿದ್ದೇನೆ. ಪಾತ್ರ ಬಯಸಿದ್ದನ್ನು ನಾನು ಮಾಡಿದ್ದೇನೆ. ನಾವು ಸಂಚರಿಸಿರುವ ಕಾರು ಕೂಡ ಈ ಸಿನಿಮಾದಲ್ಲಿ ನಮ್ಮಷ್ಟೇ ಮುಖ್ಯ ಪಾತ್ರ ವಹಿಸಿದೆ’ ಎಂದು ದೀಪಿಕಾ ದಾಸ್ ಹೇಳಿದ್ದಾರೆ.
ಕಳೆದ 10 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ರೋಹಿತ್ ಕೀರ್ತಿ ಅವರು ‘ಪಾರು ಪಾರ್ವತಿ’ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ‘ಬೆಂಗಳೂರು, ಗೋವಾ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರಕಾಂಡ ಮುಂತಾದೆಡೆ ಚಿತ್ರೀಕರಣ ನಡೆದಿದೆ. 3 ಮುಖ್ಯ ಪಾತ್ರಗಳ ಸುತ್ತವೇ ಸಿನಿಮಾದ ಕಥೆ ಸಾಗುತ್ತದೆ. ದೀಪಿಕಾ ದಾಸ್ ಅವರ ಪಾತ್ರ ಈ ಸಿನಿಮಾದಲ್ಲಿ ಡಿಫರೆಂಟ್ ಆಗಿದೆ. ಚಿತ್ರೀಕರಣ ಮುಗಿದಿದ್ದು, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇವೆ’ ಎಂದಿದ್ದಾರೆ ನಿರ್ದೇಶಕರು.
ನಿರ್ಮಾಪಕ ಪ್ರೇಮನಾಥ್ ಮಾತನಾಡಿ, ‘ನಾನು ಮೂಲತಃ ಐಟಿ ಉದ್ಯೋಗಿ. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ವೀಕ್ಷಿಸುತ್ತಿದ್ದ ನನಗೆ ಸಿನಿಮಾ ನಿರ್ಮಿಸಬೇಕು ಎಂಬ ಕನಸು ಇತ್ತು. ಅದು ಈ ಸಿನಿಮಾ ಮೂಲಕ ಈಡೇರಿದೆ. ನಾನು ಕೆಲಸದ ಸಲುವಾಗಿ ಅನೇಕ ಊರುಗಳಲ್ಲಿ ವಾಸವಾಗಿದ್ದೆ. ಇದು ಕೂಡ ಒಂದು ಪ್ರವಾಸದ ಕಥೆ ಆಗಿರುವುದರಿಂದ ನನಗೆ ಇಷ್ಟವಾಯ್ತು’ ಎಂದು ಹೇಳಿದರು.
ಇದನ್ನೂ ಓದಿ: ‘ಬಿಗ್ ಬಾಸ್ ನಿರೂಪಣೆ ಮಾಡಲ್ಲ’: ಗಟ್ಟಿ ನಿರ್ಧಾರ ತೆಗೆದುಕೊಂಡ ನಟ ಕಮಲ್ ಹಾಸನ್
ಚೇತನ್ ಡಿಸೋಜ ಅವರು ಈ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ರಾಜಾಕೃಷ್ಣನ್ ಆಡಿಯೋಗ್ರಫಿ ಮಾಡಿದ್ದು, ಡಿಸೈನರ್ ಆಗಿ ಮಹಮ್ಮದ್ ಹಮ್ಜ ಕಾರ್ಯ ನಿರ್ವಹಿಸಿದ್ದಾರೆ. ನಟರಾದ ಪೂನಂ ಸರ್ ನಾಯಕ್, ಫವಾಜ್ ಅಶ್ರಫ್, ಸಂಗೀತ ನಿರ್ದೇಶಕ ಹರಿ, ಛಾಯಾಗ್ರಾಹಕ ಅಬಿನ್ ರಾಜೇಶ್, ಸಂಕಲನಕಾರ ಸಿ.ಕೆ. ಕುಮಾರ್, ಕಲಾ ನಿರ್ದೇಶಕ ರಾಘು ಮೈಸೂರು, ಗೀತರಚನಕಾರ ನಾಗಾರ್ಜುನ ಶರ್ಮಾ ಕೂಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.