ಟಾಲಿವುಡ್ (Tollywood) ನಟ ಜೂ ಎನ್ಟಿಆರ್ (Jr NTR), ತಾವಾಯ್ತು, ತಮ್ಮ ಸಿನಿಮಾ ಆಯ್ತೆಯಂದು ತಮ್ಮ ಪಾಡಿಗೆ ತಾವಿದ್ದಾರೆ. ಚುನಾವಣೆಗಳಲ್ಲಿ ತಮ್ಮ ಕುಟುಂಬದ ಟಿಡಿಪಿ ಪಕ್ಷದ ಪರವಾಗಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗುತ್ತಿದ್ದ ಜೂ ಎನ್ಟಿಆರ್, ಈ ಬಾರಿ ಚುನಾವಣೆಯಿಂದ ಬಹು ದೂರ ಉಳಿದಿಬಿಟ್ಟಿದ್ದರು. ಆದರೆ ವಿವಾದ ಎಂಬುದು ಜೂ ಎನ್ಟಿಆರ್ ಅವರನ್ನು ಹುಡುಕಿ ಬಂದಂತಿದೆ. 21 ವರ್ಷದ ಹಿಂದೆ ಖರೀದಿಸಿದ್ದ ಜಾಗದ ವಿಷಯವಾಗಿ ವಿವಾದವೊಂದು ಸೃಷ್ಟಿಯಾಗಿದ್ದು, ಪ್ರಕರಣ ಸಂಬಂಧವಾಗಿ ಜೂ ಎನ್ಟಿಆರ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಜೂ ಎನ್ಟಿಆರ್ ಅವರು 2003 ರಲ್ಲಿ ಹೈದರಾಬಾದ್ನ ಜೂಬ್ಲಿ ಹಿಲ್ಸ್ನಲ್ಲಿ 6165 ಚದರ ಅಡಿಯ ಜಾಗವನ್ನು 34 ಲಕ್ಷ ರೂಪಾಯಿ ನೀಡಿ ಸುಂಕು ಗೀತಾ ಲಕ್ಷ್ಮಿ ಎಂಬುವರಿಂದ ಖರೀದಿ ಮಾಡಿದ್ದರು. ಆ ಜಮೀನಿನ ಈಗಿನ ಮೌಲ್ಯ ಸುಮಾರು 24 ಕೋಟಿ ರೂಪಾಯಿಗಳು. ಖರೀದಿಸಿದ್ದ ಜಾಗದಲ್ಲಿ ಜೂನ ಎನ್ಟಿಆರ್ ಅದ್ಧೂರಿಯಾಗಿ ಮನೆಯನ್ನು ಸಹ ನಿರ್ಮಿಸಿದ್ದಾರೆ. ಈಗ ಈ ಜಮೀನು ವಿವಾದಕ್ಕೆ ಕಾರಣಾಗಿದೆ.
1996 ರಲ್ಲಿ ಜಮೀನನ್ನು ಅಡಮಾನವಿಟ್ಟು ಸಾಲ ಪಡೆಯಲಾಗಿತ್ತು. ಸಾಲದ ಪ್ರತಿಯಾಗಿ ಒತ್ತೆಯಿಡಲಾಗಿರುವ ಜಮೀನನ್ನು ವಶಪಡಿಸಿಕೊಳ್ಳಲು ಅನುಮತಿಗಾಗಿ ನಾಲ್ಕು ಬ್ಯಾಂಕ್ಗಳು ಡೆಟ್ ರಿಕವರಿ ಟ್ರಿಬ್ಯುನಲ್ ಗೆ ಮನವಿ ಮಾಡಿತ್ತು. ವಿಚಾರಣೆ ಆಲಿಸಿದ ಟ್ರಿಬ್ಯೂನಲ್ ಈಗ ಬ್ಯಾಂಕ್ಗಳ ಪರವಾಗಿ ಆದೇಶ ನೀಡಿದೆ. ಬಳಿಕ ಬ್ಯಾಂಕ್ನವರು ಜೂ ಎನ್ಟಿಆರ್ ಈಗ ವಾಸವಿರುವ ಜಮೀನನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ನೊಟೀಸ್ ನೀಡಿದ್ದಾರೆ. ತಮ್ಮ ಬಳಿ ಇರುವ ಜಮೀನಿನ ದಾಖಲೆಗಳನ್ನು ಸಹ ನೀಡಿದ್ದಾರೆ.
ಇದನ್ನೂ ಓದಿ:ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಇದೇ ಪ್ರಕರಣವಾಗಿ ತೆಲಂಗಾಣ ಹೈಕೋರ್ಟ್ಗೆ ಮನವಿ ಸಲ್ಲಿಸಿರುವ ಜೂ ಎನ್ಟಿಆರ್, ತಮ್ಮ ಬಳಿ ಇರುವ ಹಾಗೂ ಬ್ಯಾಂಕ್ನವರು ಸಲ್ಲಿಸಿರುವ ದಾಖಲೆಗಳನ್ನು ಫೊರೆನ್ಸಿಕ್ ಪರೀಕ್ಷೆಗೆ ಕಳಿಸಲಾಗಿದ್ದು, ನನ್ನ ಬಳಿ ಇರುವ ದಾಖಲೆಗಳು ಒರಿಜಿನಲ್ ಎಂದು ವರದಿ ಬಂದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜೂ ಎನ್ಟಿಆರ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ‘ಜೂ ಎನ್ಟಿಆರ್ ಏಕೆ ಈ ವಿಷಯವನ್ನು ಹೈಕೋರ್ಟ್ಗೆ ತಂದರು, ಡೆಟ್ ರಿಕವರಿ ಟ್ರಿಬ್ಯುನಲ್ಗೆ ಏಕೆ ಮನವಿ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಆದರೆ ಜೂ ಎನ್ಟಿಆರ್ ಪರ ವಕೀಲರು ಡಿಆರ್ಟಿಯ ಆದೇಶದಲ್ಲಿರುವ ಒಂದು ತಾಂತ್ರಿಕ ಸಮಸ್ಯೆ ಬಗ್ಗೆ ಗಮನ ಸೆಳೆದು ಈ ಕಾರಣಕ್ಕಾಗಿ ನಾವು ಹೈಕೋರ್ಟ್ಗೆ ಮನವಿ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಪ್ರಕರಣವನ್ನು ಜೂನ್ 6 ಕ್ಕೆ ಮುಂದೂಡಲಾಗಿದೆ.
2003 ರಲ್ಲಿ ಜಮೀನು ಖರೀದಿಸಿದ ಜೂ ಎನ್ಟಿಆರ್, 2007ರಲ್ಲಿ ಅದೇ ಜಮೀನಿನಲ್ಲಿ ಅದ್ಧೂರಿಯಾಗಿ ಮನೆ ಸಹ ನಿರ್ಮಿಸಿದರು. ಈಗಲೂ ಅವರು ಅದೇ ಮನೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದಾರೆ. ಜೂ ಎನ್ಟಿಆರ್ ಸಾಕಷ್ಟು ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಮಾಡಿದ್ದಾರೆ. ಆಂಧ್ರ, ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಜೂಎನ್ಟಿಆರ್ ಜಮೀನು ಹೊಂದಿದ್ದಾರೆ. ಕೆಲವು ಕಮರ್ಶಿಯಲ್ ಬಿಲ್ಡಿಂಗ್ಗಳನ್ನು ಸಹ ಅವರು ಹೊಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ