ಜೂನಿಯರ್ ಎನ್ಟಿಆರ್ ನಟನೆಯ ‘ದೇವರ: ಪಾರ್ಟ್ 1’ ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಉಳಿದಿವೆ. ಈ ಸಿನಿಮಾ ಮೇಲೆ ಅವರ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಆರ್ಆರ್ಆರ್’ ಸಿನಿಮಾದ ಬಳಿಕ ಜೂನಿಯರ್ ಎನ್ಟಿಆರ್ ನಟಿಸಿದ ಸಿನಿಮಾ ಎಂಬ ಕಾರಣದಿಂದಲೂ ನಿರೀಕ್ಷೆ ಜಾಸ್ತಿ ಇದೆ. ಸೆಪ್ಟೆಂಬರ್ 27ರಂದು ‘ದೇವರ’ ಸಿನಿಮಾ ರಿಲೀಸ್ ಆಗಲಿದೆ. ಈಗ ಸಿನಿಮಾದ ಹೊಸ ಟ್ರೇಲರ್ ಅನಾವರಣ ಮಾಡಲಾಗಿದೆ. ಜನರಿಂದ ಈ ಟ್ರೇಲರ್ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.
ಸಾಮಾನ್ಯವಾಗಿ ಎಲ್ಲ ಸಿನಿಮಾ ತಂಡಗಳು ಒಂದು ಟ್ರೇಲರ್ ಬಿಡುಗಡೆ ಮಾಡುತ್ತವೆ. ಆದರೆ ‘ದೇವರ’ ತಂಡ 2 ಟ್ರೇಲರ್ ರಿಲೀಸ್ ಮಾಡಿದೆ. ಕೆಲವೇ ದಿನಗಳ ಹಿಂದೆ ಮೊದಲ ಟ್ರೇಲರ್ ಅನಾವರಣ ಆಗಿತ್ತು. ಇಂದು (ಸೆಪ್ಟೆಂಬರ್ 22) ಎರಡನೇ ಟ್ರೇಲರ್ ಹೊರಬಂದಿದೆ. ಮೊದಲ ಟ್ರೇಲರ್ ನೋಡಿದ್ದ ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದರು. ಎರಡನೇ ಟ್ರೇಲರ್ ಕೂಡ ಅದೇ ರೀತಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಜೂ. ಎನ್ಟಿಆರ್-ಜಾನ್ವಿ ನಡುವೆ 14 ವರ್ಷ ವಯಸ್ಸಿನ ಅಂತರ; ಟ್ರೋಲ್ ಆಯ್ತು ರೊಮ್ಯಾನ್ಸ್
ಕೊರಟಾಲ ಶಿವ ಅವರು ‘ದೇವರ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳು ಇರಲಿವೆ ಎಂಬುದನ್ನು ಎರಡೂ ಟ್ರೇಲರ್ಗಳು ಒತ್ತಿ ಹೇಳುತ್ತಿವೆ. ಜೂನಿಯರ್ ಎನ್ಟಿಆರ್ ಅವರನ್ನು ಆ್ಯಕ್ಷನ್ ಅವತಾರದಲ್ಲಿ ನೋಡಲು ಇಷ್ಟಪಡುವ ಅಭಿಮಾನಿಗಳಿಗೆ ‘ದೇವರ’ ಸಿನಿಮಾ ಮೇಲೆ ಭರವಸೆ ಮೂಡಿದೆ. ಸೆಪ್ಟೆಂಬರ್ 27ಕ್ಕೆ ಸಿನಿಮಾ ತೆರೆಕಾಣಲಿದ್ದು ಮೊದಲ ದಿನ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ಕಾದು ನೋಡಬೇಕು.
‘ದೇವರ: ಪಾರ್ಟ್ 1’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ತೆಲುಗಿನ ಈ ಸಿನಿಮಾ ಕನ್ನಡ, ಹಿಂದಿ, ತಮಿಳು ಮುಂತಾದ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಲಿದೆ. ‘ಆರ್ಆರ್ಆರ್’ ಬಳಿಕ ಜೂನಿಯರ್ ಎನ್ಟಿಆರ್ ಅವರಿಗೆ ಹಿಂದಿ ಪ್ರೇಕ್ಷಕರ ವಲಯದಲ್ಲಿ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಉತ್ತರ ಭಾರತದ ಪ್ರೇಕ್ಷಕರನ್ನು ಸೆಳೆಯಲು ಬಾಲಿವುಡ್ ಕಲಾವಿದರನ್ನು ಈ ಸಿನಿಮಾದ ಪಾತ್ರವರ್ಗಕ್ಕೆ ಸೇರಿಸಿಕೊಳ್ಳಲಾಗಿದೆ. ನಾಯಕಿಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.