Viral: ಬ್ರೈನ್‌ ಸರ್ಜರಿ ವೇಳೆ ಜೂನಿಯರ್‌ ಎನ್‌ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ; ವೈರಲ್‌ ಆಯ್ತು ವಿಡಿಯೋ

ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ರೋಗಿಯೊಬ್ಬರು ಗಾಯತ್ರಿ ಮಂತ್ರವನ್ನು ಪಠಿಸಿದಂತಹ ಸುದ್ದಿಯನ್ನು ಕೇಳಿದ್ದೇವೆ. ಇದೀಗ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು ಮಹಿಳಾ ರೋಗಿಯೊಬ್ಬರು ಬ್ರೈನ್‌ ಟ್ಯೂಮರ್‌ ಸರ್ಜರಿಯ ವೇಳೆ ತನ್ನ ನೆಚ್ಚಿನ ನಟನಾದ ಜೂನಿಯರ್‌ ಎನ್‌ಟಿಆರ್‌ ಅವರ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

Viral: ಬ್ರೈನ್‌ ಸರ್ಜರಿ ವೇಳೆ ಜೂನಿಯರ್‌ ಎನ್‌ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ; ವೈರಲ್‌ ಆಯ್ತು ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Sep 19, 2024 | 5:59 PM

ಜೂನಿಯರ್‌ ಎನ್‌ಟಿಆರ್‌ ಅವರ ಅಭಿಯಾನಿಯ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಹೌದು ಈ ಹಿಂದೆ ಬ್ರೈನ್‌ ಸರ್ಜರಿಯ ವೇಳೆ ರೋಗಿಯೊಬ್ಬರು ಗಾಯತ್ರಿ ಮಂತ್ರವನ್ನು ಪಠಿಸಿದಂತೆ, ಬ್ರೈನ್‌ ಟ್ಯೂಮರ್‌ ಸರ್ಜರಿಯ ವೇಳೆ ಜೂನಿಯರ್‌ ಎನ್‌ಟಿಆರ್‌ ಅಭಿಮಾನಿ ತನ್ನ ನೆಚ್ಚಿನ ಅಧರ್ಸ್‌ ಚಲನ ಚಿತ್ರವನ್ನು ವೀಕ್ಷಿಸಿದ್ದಾರೆ. ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರು ರೋಗಿಗೆ ತಮ್ಮಿಷ್ಟದ ಸಿನಿಮಾವನ್ನು ತೋರಿಸಿ ಬ್ರೈನ್‌ ಸರ್ಜರಿ ಮಾಡಿದ್ದು, ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದ್ದು, ಇಲ್ಲಿನ ಕಾಕಿನಾಡದಲ್ಲಿರುವ ಸರ್ಕಾರಿ ಜನರಲ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡವು ರೋಗಿಯೊಬ್ಬರಿಗೆ ಜೂನಿಯರ್‌ ಎನ್‌ಟಿಆರ್‌ ಸಿನಿಮಾವನ್ನು ತೋರಿಸಿ ಯಶಸ್ವಿಯಾಗಿ ಬ್ರೈನ್‌ ಟ್ಯೂಮರ್‌ ಸರ್ಜರಿ ನಡೆಸಿದ್ದಾರೆ. ಕೊತಪಲ್ಲಿಯ ಅನಂತಲಕ್ಷ್ಮಿ ಎಂಬ 55 ವರ್ಷದ ಮಹಿಳೆಗೆ ಕೈಕಾಲು ಮರಕಟ್ಟುವುದು ಮತ್ತು ನಿರಂತರ ತಲೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಬಂದಾಗ ಅವರ ಮಿದುಳಿನ ಎಡಭಾಗದಲ್ಲಿ 3.3×2.7 ಸೆಂ.ಮೀ ಗಾತ್ರದ ಗೆಡ್ಡೆಯಿರುವುದು ಪತ್ತೆಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ವೆಚ್ಚ ತೀರಾ ಹೆಚ್ಚಿರುವುದರಿಂದ ಅನಂತ ಲಕ್ಷ್ಮಿಯವರು ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಲು ನಿರ್ಧರಿಸಿದ್ದಾರೆ.

ಇಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆಗಾಗಿ ʼಅವೇಕ್‌ ಕ್ರ್ಯಾನಿಯೊಟಮಿʼ ಎಂದು ಕರೆಯಲ್ಪಡುವ ನವೀನ ವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದು, ಈ ವಿಧಾನದಲ್ಲಿ ಪ್ರಜ್ಞಾಹೀನ ಅಥವಾ ಅರೆ ಪ್ರಜ್ಞಾ ಸ್ಥಿತಿಗಿಂತ ರೋಗಿಗಳಿಗಳಿಗೆ ಪ್ರಜ್ಞಾ ವ್ಯವಸ್ಥೆಯಲ್ಲಿದ್ದಾಗ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಅದೇ ರೀತಿ ಅನಂತ ಲಕ್ಷ್ಮಿ ಅವರಿಗೂ ಇದೇ ವಿಧಾನದ ಮೂಲಕ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದ್ದು, ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯನ್ನು ಶಾಂತವಾಗಿರಿಸಲು ಹಾಗೂ ಗಮನವನ್ನು ಒಂದೇ ಕಡೆ ಕೇಂದ್ರೀಕರಿಸಲು ಅವರ ನೆಚ್ಚಿನ ಚಲನ ಚಿತ್ರವನ್ನು ವೀಕ್ಷಣೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ವೈದ್ಯರ ಸಲಹೆ ಮೇರೆಗೆ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಅನಂತ ಲಕ್ಷ್ಮಿ ತಮ್ಮ ನೆಚ್ಚಿನ ಸಿನೆಮಾ ʼಅಧೂರ್ಸʼ ಚಿತ್ರವನ್ನು ವೀಕ್ಷಿಸಿದ್ದಾರೆ. ಸತತ ಎರಡುವರೆ ಗಂಟೆಗಳ ಕಾಲ ಸರ್ಜರಿ ಮಾಡಿದ ವೈದ್ಯರು ಗಡ್ಡೆಯನ್ನು ಹೊರ ತೆಗೆದಿದ್ದಾರೆ. ಈ ಕುರಿತ ಪೋಸ್ಟ್‌ ಒಂದನ್ನು TeluguScribe ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಬ್ರೈನ್‌ ಟ್ಯೂಮರ್‌ ಸರ್ಜರಿ ವೇಳೆ ರೋಗಿಯೊಬ್ಬರು ತಮ್ಮ ನೆಚ್ಚಿನ ಸಿನಿಮಾ ವೀಕ್ಷಣೆ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿದ ಇಂಜಿನಿಯರ್, ಕೆಲಸ ಸಿಕ್ಕ ಖುಷಿಯಲ್ಲಿ ಟೆಕ್ಕಿ ಹೇಳಿದ್ದೇನು?

ಸೆಪ್ಟೆಂಬರ್‌ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 12 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವೈದ್ಯರಿಗೆ ಧನ್ಯವಾದಗಳುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅದ್ಭುತʼ ಎಂದು ಕಾಮೆಂಟ್‌ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ