ಮೊದಲು ಅಭಿಮಾನಿಗಳ ಬೈದು ಈಗ ಕೊಂಡಾಡಿದ ಜೂ ಎನ್​ಟಿಆರ್

|

Updated on: Oct 16, 2024 | 2:07 PM

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ನೆಗೆಟಿವ್ ವಿಮರ್ಶೆಗಳ ನಡುವೆಯೂ ಬಾಕ್ಸ್ ಆಫೀಸ್​ನಲ್ಲಿ ಯಶಸ್ವಿಯಾಗಿದೆ. ಕೆಲ ದಿನಗಳ ಹಿಂದಷ್ಟೆ ಸಿನಿಮಾ ಪ್ರೇಮಿಗಳು ‘ನೆಗೆಟಿವ್’ ಆಗಿಬಿಟ್ಟಿದ್ದಾರೆ ಎಂದು ಮೂಗು ಮುರಿದಿದ್ದ ಜೂ ಎನ್​ಟಿಆರ್ ಈಗ ಓಲೈಕೆಯ ‘ಧನ್ಯವಾರ ಪತ್ರ’ ಬರೆದಿದ್ದಾರೆ.

ಮೊದಲು ಅಭಿಮಾನಿಗಳ ಬೈದು ಈಗ ಕೊಂಡಾಡಿದ ಜೂ ಎನ್​ಟಿಆರ್
Follow us on

ಜೂ ಎನ್​​ಟಿಆರ್ ನಟನೆಯ ‘ದೇವರ’ ಸಿನಿಮಾ ಎರಡು ವಾರಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಸಿನಿಮಾದ ಮೇಲೆ ಜೂ ಎನ್​ಟಿಆರ್​ಗೆ ಭಾರಿ ನಿರೀಕ್ಷೆ ಇತ್ತು. ‘ಆರ್​ಆರ್​ಆರ್’ ಸಿನಿಮಾದಿಂದ ಗಳಿಸಿರುವ ಜನಪ್ರಿಯತೆಯನ್ನು ಈ ಸಿನಿಮಾ ದುಪ್ಪಟ್ಟು ಮಾಡುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಸಿನಿಮಾ ಬಿಡುಗಡೆ ಆದ ಮೊದಲ ದಿನವೇ ಸಿನಿಮಾಕ್ಕೆ ನೆಗೆಟಿವ್ ವಿಮರ್ಶೆಗಳು ಕೇಳಿ ಬಂದವು. ಸಿನಿಮಾದ ಕತೆ, ನಿರೂಪಣೆಯನ್ನು ಹಲವರು ಟೀಕೆ ಮಾಡಿದರು. ಆಗ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಜೂ ಎನ್​ಟಿಆರ್, ಸಿನಿಮಾ ಪ್ರೇಮಿಗಳು ಬಹಳ ‘ನೆಗೆಟಿವ್’ ಆಗಿಬಿಟ್ಟಿದ್ದಾರೆ’ ಎಂದಿದ್ದರು. ಸಿನಿಮಾ ಪ್ರೇಮಿಗಳ ಬಗ್ಗೆ, ಅಭಿಮಾನಿಗಳಿಗೆ ಜೂ ಎನ್​ಟಿಆರ್ ಅವರ ಖಾರವಾದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದವು.

ಇದೀಗ ಜೂ ಎನ್​ಟಿಆರ್ ತಮ್ಮ ಅಭಿಮಾನಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ ತಮ್ಮ ಸಿನಿಮಾವನ್ನು ಗೆಲ್ಲಿಸಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಸಹ ಹೇಳಿದ್ದಾರೆ. ಧನ್ಯವಾದ ಪತ್ರ ಬರೆದಿರುವ ಜೂ ಎನ್​ಟಿಆರ್ ಮೊದಲಿಗೆ ‘ದೇವರ’ ಸಿನಿಮಾದಲ್ಲಿ ನಟಿಸಿರುವ ಸೈಫ್ ಅಲಿ ಖಾನ್, ಜಾನ್ಹವಿ ಕಪೂರ್, ಪ್ರಕಾಶ್ ರೈ ಮತ್ತು ಶ್ರೀಕಾಂತ್ ಅವರಿಗೆ ಧನ್ಯವಾದ ಹೇಳಿದ್ದಾರೆ. ‘ದೇವರ’ ಸಿನಿಮಾದಲ್ಲಿ ನಟಿಸಿರುವ ಎಲ್ಲ ನಟಿರಿಗೂ ನನ್ನ ಧನ್ಯವಾದ ಎಂದಿದ್ದಾರೆ ಜೂ ಎನ್​ಟಿಆರ್.

ಬಳಿಕ, ನಿರ್ದೇಶಕ ಕೊರಟಾಲ ಶಿವ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್, ಕ್ಯಾಮೆರಾಮನ್ ರತ್ನಂವೇಲು, ಪ್ರೊಡಕ್ಷನ್ ಡಿಸೈನರ್ ಸಬು, ಎಡಿಟರ್ ಶ್ರೀಕರ್, ವಿಎಫ್​ಎಕ್ಸ್ ಯುಗೇಂಧರ್ ಅವರುಗಳು ಸಿನಿಮಾವನ್ನು ಸುಂದರಗಾಣಿಸಿದ್ದಾರೆ. ‘ದೇವರ’ ಸಿನಿಮಾ ಅತ್ಯುತ್ತಮವಾಗಿ ಮೂಡಿ ಬರುವಂತೆ ಮಾಡಿದ್ದಾರೆ ಅವರಿಗೆ ಧನ್ಯವಾದ ಎಂದಿದ್ದಾರೆ ಎನ್​ಟಿಆರ್.

ಇದನ್ನೂ ಓದಿ:ದೇವರ ಉಡುಗೊರೆ RCB ಅಭಿಮಾನಿಗಳನ್ನು ಹಾಡಿ ಹೊಗಳಿದ ಅಶ್ವಿನ್

ಮುಂದುವರೆದು, ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಹೇಳಿರುವ ಎನ್​ಟಿಆರ್, ‘ನನ್ನ ಅಭಿಮಾನಿಗಳು ಸದಾ ನನ್ನ ಬೆನ್ನಿಗೆ ನಿಂತಿದ್ದಾರೆ. ನನಗೆ ಸ್ಪೂರ್ತಿ ತುಂಬುವ, ಶಕ್ತಿ ತುಂಬುವ ಕೆಲಸ ಮಾಡುತ್ತಲೇ ಬಂದಿದ್ದಾರೆ. ನಿಮ್ಮ ಈ ಅನಿಯಮಿತ ಪ್ರೀತಿಯಿಂದಲೇ ನಾನು ನನ್ನ ಮಿತಿಯ ಗಡಿಯನ್ನು ದಾಟಿ ಹೊಸ ಪ್ರಯತ್ನ ಮಾಡಲು ಸಾಧ್ಯವಾಗುತ್ತಿದೆ. ನೀವು ತುಂಬುತ್ತಿರುವ ಈ ಸ್ಪೂರ್ತಿಯನ್ನು ನಾನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ನೀವು ನನ್ನ ಮೇಲೆ ಇರಿಸಿರುವ ಈ ನಂಬಿಕೆಯೇ ನನಗೆ ಇಷ್ಟು ಶಕ್ತಿ ನೀಡುತ್ತಿದೆ. ನಿಮ್ಮ ಋಣವನ್ನು ನಾನು ಎಂದಿಗೂ ತೀರಿಸಲಾರೆನು. ನಾನು ಈ ಪಯಣದಲ್ಲಿ ಇನ್ನೂ ಮುಂದುವರೆಯುತ್ತಿರುವುದಕ್ಕೆ ನೀವೇ ಕಾರಣ. ‘ದೇವರ’ ಸಿನಿಮಾವನ್ನು ನಿಮ್ಮ ಹೆಗಲ ಮೇಲೆ ಹೊತ್ತುಕೊಂಡು ಅದು ಗೆಲುವನ ದಡ ತಲುಪುವಂತೆ ಮಾಡಿದ್ದಕ್ಕೆ ಧನ್ಯವಾದ’ ಎಂದಿದ್ದಾರೆ ಜೂ ಎನ್​ಟಿಆರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ