ಬಿಗ್ ಬಾಸ್: ಈ ವೀಕೆಂಡ್ನಲ್ಲಿ ಇರಲ್ಲ ಕಿಚ್ಚನ ನಿರೂಪಣೆ; ವೇದಿಕೆ ಮೇಲೆ ಘೋಷಿಸಿದ ಸುದೀಪ್
ಕಿಚ್ಚ ಸುದೀಪ್ ಈ ವಾರ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಡಿಸೆಂಬರ್ 25ರಂದು ಬಿಡುಗಡೆಯಾಗಲಿರುವ ತಮ್ಮ 'ಮಾರ್ಕ್' ಚಿತ್ರದ ಪ್ರಚಾರದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಮುಖ್ಯವಾದರೂ, ತಂಡಕ್ಕೆ ಈ ಸಂದರ್ಭದಲ್ಲಿ ತಮ್ಮ ಅಗತ್ಯವಿದೆ ಎಂದು ಸುದೀಪ್ ತಿಳಿಸಿದ್ದಾರೆ. ಈ ನಿರ್ಧಾರ ಬಿಗ್ ಬಾಸ್ ಪ್ರಿಯರಿಗೆ ನಿರಾಸೆ ಮೂಡಿಸಿದೆ.

ಕಿಚ್ಚ ಸುದೀಪ್ (Sudeep) ಅವರು ಬಿಗ್ ಬಾಸ್ನ ಸಾಕಷ್ಟು ಪ್ರೀತಿ ಮಾಡುತ್ತಾರೆ. ಪ್ರತಿ ಶನಿವಾರ ಹಾಗೂ ಭಾನುವಾರ ಸುದೀಪ್ ಅವರು ಬಿಗ್ ಬಾಸ್ನ ಉತ್ತಮವಾಗಿ ನಿರೂಪಣೆ ಮಾಡುತ್ತಾರೆ. ಆ ವಾರ ನಡೆದ ಪ್ರತಿ ವಿಷಯಕ್ಕೂ ಸ್ಪಷ್ಟನೆ ನೀಡುತ್ತಾರೆ. ಪಂಚಾಯ್ತಿ ಮಾಡಿ ನ್ಯಾಯ ಒದಗಿಸುತ್ತಾರೆ. ಆದರೆ, ಈ ವಾರ ಕಿಚ್ಚ ಸುದೀಪ್ ಅವರ ನಿರೂಪಣೆ ಇರುವುದಿಲ್ಲ. ಈ ಬಗ್ಗೆ ಸುದೀಪ್ ಅವರು ಘೋಷಣೆ ಮಾಡಿದ್ದಾರೆ. ಭಾನುವಾರದ (ಡಿಸೆಂಬರ್ 21) ಎಪಿಸೋಡ್ ಕೊನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸುದೀಪ್ ಬ್ಯುಸಿ ಇದ್ದಾರೆ. ಇದರ ಮಧ್ಯೆಯೂ ಅವರು ಕಳೆದ ವಾರ ಬಿಗ್ ಬಾಸ್ ನಿರೂಪಣೆ ಮಾಡಿದ್ದರು. ಸಾಮಾನ್ಯವಾಗಿ ಬಿಗ್ ಬಾಸ್ ಎಪಿಸೋಡ್ ಶನಿವಾರ ಶೂಟ್ ಆಗುತ್ತದೆ. ಆದರೆ ಕಳೆದ ವಾರ ‘ಮಾರ್ಕ್’ ಪ್ರೀ ರಿಲೀಸ್ ಈವೆಂಟ್ನಲ್ಲಿ ಭಾಗಿ ಆಗಬೇಕಿರುವ ಕಾರಣ ಶುಕ್ರವಾರವೇ ಬಿಗ್ ಬಾಸ್ ಎಪಿಸೋಡ್ ಚಿತ್ರೀಕರಣ ನಡೆದಿತ್ತು. ಈ ವಾರ ಅವರು ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇರುವುದರಿಂದ ಬಿಗ್ ಬಾಸ್ ನಿರೂಪಣೆ ಮಾಡುತ್ತಿಲ್ಲ.
‘ನನ್ನ ಸಿನಿಮಾ ರಿಲೀಸ್ ಇರುವುದರಿಂದ, ನಾನು ಪ್ರಮೋಷನ್ ಅಲ್ಲಿ ಬ್ಯುಸಿ ಇರ್ತೀನಿ. ಬಿಗ್ ಬಾಸ್ ಹೇಗೆ ಮುಖ್ಯವೋ ನಾನು ಮಾಡಿದ ಸಿನಿಮಾ ಕೂಡ ಮುಖ್ಯ. ನನ್ನ ತಂಡಕ್ಕೆ ನನ್ನ ಅಗತ್ಯವಿದೆ. ಹೀಗಾಗಿ, ಮುಂದಿನ ವಾರ (ಡಿಸೆಂಬರ್ 27-28) ನಾನು ಬಿಗ್ ಬಾಸ್ ನಡೆಸಿಕೊಡುತ್ತಿಲ್ಲ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸುದೀಪ್ ‘ಮಾರ್ಕ್’ ಸಿನಿಮಾ ತುಳಿಯಲು ‘ಟಿವಿ9 ಕನ್ನಡ’ ಹೆಸರು ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು
‘ಮಾರ್ಕ್’ ಸಿನಿಮಾ ಜೊತೆ ‘45’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಕಠಿಣ ಸ್ಪರ್ಧೆ ಇರುವುದರಿಂದ ದೊಡ್ಡ ಮಟ್ಟದಲ್ಲಿ ಪ್ರಚಾರದ ಅಗತ್ಯವಿದೆ. ಈಗಾಗಲೇ ಚೆನ್ನೈಗೆ ತೆರಳಿ ತಂಡ ಸಿನಿಮಾ ಪ್ರಚಾರ ಮಾಡಿದೆ. ಸಿನಿಮಾ ರಿಲೀಸ್ ಆದ ಬಳಿಕ ಸುದೀಪ್ ಥಿಯೇಟರ್ ವಿಸಿಟ್ ಪ್ಲ್ಯಾನ್ ಮಾಡಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಇತ್ತೀಚೆಗೆ ಅದ್ದೂರಿಯಾಗಿ ಹುಬ್ಬಳ್ಳಿಯಲ್ಲಿ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




