AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಂಬಳ ಕಾಯಿ ಕಳ್ಳ ಅಂದ್ರೆ..; ಸುದೀಪ್ ಹೇಳಿಕೆಯ ಅಸಲಿ ಅರ್ಥ ಹೇಳಿದ ಚಕ್ರವರ್ತಿ

'ಯುದ್ಧಕ್ಕೆ ಒಂದು ಪಡೆ ಸಿದ್ಧವಾಗಿದೆ' ಎಂಬ ಸುದೀಪ್ ಹೇಳಿಕೆ ಚಿತ್ರರಂಗದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ದರ್ಶನ್ ಅಭಿಮಾನಿಗಳು ಹಾಗೂ ವಿಜಯಲಕ್ಷ್ಮೀ ಅವರ ಪ್ರತಿಕ್ರಿಯೆ ಬಳಿಕ, ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್ ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಮಾತಿನ ಅಸಲಿ ಅರ್ಥ ಪೈರಸಿ ಮಾಡುವವರ ವಿರುದ್ಧದ ಹೋರಾಟವೇ ಹೊರತು ಯಾವುದೇ ನಟರ ಅಥವಾ ಅಭಿಮಾನಿಗಳ ವಿರುದ್ಧ ಅಲ್ಲ ಎಂದು ಚಕ್ರವರ್ತಿ ತಿಳಿಸಿದ್ದಾರೆ. ಪೈರಸಿ ಕನ್ನಡ ಚಿತ್ರರಂಗ ಎದುರಿಸುತ್ತಿರುವ ದೊಡ್ಡ ಸವಾಲು ಎಂದಿದ್ದಾರೆ.

ಕುಂಬಳ ಕಾಯಿ ಕಳ್ಳ ಅಂದ್ರೆ..; ಸುದೀಪ್ ಹೇಳಿಕೆಯ ಅಸಲಿ ಅರ್ಥ ಹೇಳಿದ ಚಕ್ರವರ್ತಿ
ಚಕ್ರವರ್ತಿ-ಸುದೀಪ್
ರಾಜೇಶ್ ದುಗ್ಗುಮನೆ
|

Updated on:Dec 22, 2025 | 12:58 PM

Share

‘ನಮ್ಮ ಸಿನಿಮಾ ರಿಲೀಸ್ ಆಗುವಾಗ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗುತ್ತಿದೆ’ ಎಂದಿದ್ದರು. ಈ ವಾರ್​ಗೆ ತಾವು ರೆಡಿ ಎಂದು ಕೂಡ ಹೇಳಿದ್ದರು. ಈ ಹೇಳಿಕೆ ಚಿತ್ರರಂಗದಲ್ಲಿ ದೊಡ್ಡ ಕಾಡ್ಗಿಚ್ಚನ್ನೇ ಹಬ್ಬಿಸಿದೆ. ದರ್ಶನ್ (Darshan) ಅಭಿಮಾನಿಗಳು ಇದು ದರ್ಶನ್ ಬಗ್ಗೆ ಹೇಳಿದ್ದು ಎಂದು ಅರ್ಥೈಸಿಕೊಂಡರು. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸುದೀಪ್​​ಗೆ (Sudeep) ಕೌಂಟರ್ ಕೊಟ್ಟಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್ ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಆಡಿದ ಮಾತು ಪೈರಸಿ ಮಾಡುವವರ ಬಗ್ಗೆ ಎಂದಿದ್ದಾರೆ.

‘ಸುದೀಪ್ ಹೇಳಿಕೆ ಬಳಿಕ ಕನ್ನಡ ಚಿತ್ರರಂಗದಲ್ಲಿ ಫ್ಯಾನ್ ವಾರ್, ಸ್ಟಾರ್ ವಾರ್ ನಡೀತಾ ಇದೆ ಎಂದು ಹೇಳುತ್ತಾ ಇದಾರೆ. ಮತ್ತೊಂದು ಪಡೆಗೆ ಟಾಂಗ್ ಕೊಟ್ಟಿದ್ದಾರೆ ಎಂದಿದ್ದಾರೆ. ಭಾರತದ ಸಿನಿಮಾಗಳು ರಿಲೀಸ್ ಆದಾಗ ಅದನ್ನು ನಾಶ ಮಾಡಲು ಸಾಕಷ್ಟು ಪ್ರಯತ್ನ ನಡೆಯುತ್ತವೆ. ಒಂದು ಪಡೆ ಸಿನಿಮಾ ಭಯೋತ್ಪಾದಕರ ರೀತಿ ವರ್ತಿಸುತ್ತದೆ. ಸುದೀಪ್ ಸೇರಿದಂತೆ ಎಲ್ಲರೂ ಅದರ ವಿರುದ್ಧ ಹೋರಾಡಬೇಕಿದೆ. ಸುದೀಪ್ ಅವರು ಹೇಳಿದ್ದು ಇದನ್ನೇ’ ಎಂದಿದ್ದಾರೆ ಕಿಚ್ಚನ ಆಪ್ತ ಚಕ್ರರ್ತಿ.

‘ಪೈರಸಿ ಮಾಡಲು 22ಕ್ಕೂ ಹೆಚ್ಚು ಆ್ಯಪ್​​ಗಳು ಇವೆ. ಕ್ಷಣಮಾತ್ರದಲ್ಲಿ ಸಿನಿಮಾ ಡೌನ್​​ಲೋಡ್ ಆಗುತ್ತದೆ. ಮೊದಲ ಶೋ ಮುಗಿಯುತ್ತಿದ್ದಂತೆ ಸಿನಿಮಾ ಲೀಕ್ ಆಗುತ್ತದೆ. ಮ್ಯಾಕ್ಸ್ ಸಿನಿಮಾ ಸಂದರ್ಭದಲ್ಲಿ ಸಾವಿರಾರು ಲಿಂಕ್​​ಗಳನ್ನು ನಾನು ಡಿಲೀಟ್ ಮಾಡಿಸಿದ್ದೇನೆ. ಸಿನಿಮಾನ ಕಷ್ಟಪಟ್ಟು ಮಾಡಬೇಕು. ಸಿನಿಮಾ ರಿಲೀಸ್ ಆದಮೇಲೆಯೂ ಯುದ್ಧ ಮಾಡೋದು ಕಲಾ ಲೋಕಕ್ಕೆ ಬಂದ ಶಾಪ. ಇದರ ವಿರುದ್ಧ ಸಿಎಂ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ’ ಎಂದಿದ್ದಾರೆ ಚಕ್ರವರ್ತಿ.

ಚಕ್ರವರ್ತಿ ವಿಡಿಯೋ

‘ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡಿದ ಎಲ್ಲರೂ ಸಿನಿಮಾನ ಅಥವಾ ಆ ಕೃತಿಯನ್ನು ವಿಮರ್ಶೆ ಮಾಡುವ ಹಕ್ಕಿರುತ್ತದೆ. ಆದರೆ, ವಿಮರ್ಶೆ ಹೆಸರಲ್ಲಿ ಸಿನಿಮಾನ ಸಾಯಿಸಲಾಗುತ್ತಿದೆ. ಇದಕ್ಕೆ ಒಂದು ಪಡೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಹರಿಬಿಡಲು ಒಂದು ಪಡೆ ಇದೆ. ಈ ರೀತಿಯ ಪಡೆಗಳ ವಿರುದ್ಧ ಯುದ್ಧ ಮಾಡುತ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಇದು ತಪ್ಪಾ? ಕುಂಬಳ ಕಾಯಿ ಕಳ್ಳ ಎಂದರೆ ಹೆಗಲುಮುಟ್ಟಿಕೊಳ್ಳಬಾರದು’ ಎಂದಿದ್ದಾರೆ ಚಕ್ರವರ್ತಿ.

ಇದನ್ನೂ ಓದಿ: ನಾನು ಬಾಯಿ ಮುಚ್ಕೊಂಡು ಇದ್ದೆ, ಯಾಕಂದ್ರೆ; ಹುಬ್ಬಳಿಯಿಂದ ಇಡೀ ರಾಜ್ಯಕ್ಕೆ ಸುದೀಪ್ ಖಡಕ್ ಸಂದೇಶ ‘ಪೈರಸಿ ಎಂಬುದು 45, ಮಾರ್ಕ್​​ಗೆ ಇರುವ ಸವಾಲು. ಡೆವಿಲ್ ಸಿನಿಮಾಗೂ ಇದೇ ಸಮಸ್ಯೆ ಇದೆ. ಅವರಿಗೂ ಪೈರಸಿ ಕಾಟ ತಟ್ಟಿದೆ. ಸುದೀಪ್ ಅವರು ಎಂದಿಗೂ ಒಳ್ಳೆಯದನ್ನು ಬಯಸಿದ್ದಾರೆ’ ಎಂದಿದ್ದಾರೆ ಚಕ್ರವರ್ತಿ. ಈ ಮೂಲಕ ಅದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:56 pm, Mon, 22 December 25