ಆಂಧ್ರಪ್ರದೇಶ ರಾಜಕೀಯ ಹಾಗೂ ಚಿತ್ರರಂಗ (Sandalwood) ಎರಡರಲ್ಲೂ ನಂದಮೂರಿ ಕುಟುಂಬದ್ದು ದಶಕಗಳಿಂದಲೂ ಪ್ರಾಬಲ್ಯ ಇದೆ. ನಂದಮೂರಿ ಕುಟುಂಬದಲ್ಲಿ ಹಲವು ಸ್ಟಾರ್ ನಟರು, ಪ್ರಮುಖ ರಾಜಕಾರಣಿಗಳೂ ಇದ್ದಾರೆ. ಆದರೆ ಇತ್ತೀಚೆಗೆ ನಂದಮೂರಿ ಕುಟುಂಬದಲ್ಲಿ ಬಿರುಕು ಮೂಡಿದೆ. ಜೂ ಎನ್ಟಿಆರ್ (Jr NTR) ಹಾಗೂ ಅವರ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಈ ಇಬ್ಬರು ಬಹಿರಂಗವಾಗಿ ಮಾತನಾಡಿಲ್ಲವಾದರೂ ಕೋಲ್ಡ್ ವಾರ್ ಚಾಲ್ತಿಯಲ್ಲಿದೆ. ಇದೀಗ ಬಾಲಕೃಷ್ಣ ಹಾಗೂ ಜೂ ಎನ್ಟಿಆರ್ ನೇರವಾಗಿ ಎದುರು-ಬದುರು ಯುದ್ಧಕ್ಕೆ ನಿಂತಿದ್ದಾರೆ. ಅದು ಬಾಕ್ಸ್ ಆಫೀಸ್ನಲ್ಲಿ.
ನಂದಮೂರಿ ಕುಟುಂಬದ ನಟರ ಸಿನಿಮಾಗಳು ಪರಸ್ಪರ ಎದುರು ಬದುರು ಬಾಕ್ಸ್ ಆಫೀಸ್ನಲ್ಲಿ ಫೈಟ್ ಮಾಡಿದ್ದಿಲ್ಲ. ಪರಸ್ಪರರ ಮೇಲೆ ಬಾಕ್ಸ್ ಆಫೀಸ್ನಲ್ಲಿ ಫೈಟ್ ಆಗಿಲ್ಲ. ಆದರೆ ಈಗ ಜೂ ಎನ್ಟಿಆರ್ ಅವರ ಸಿನಿಮಾ ಹಾಗೂ ಬಾಲಕೃಷ್ಣ ಅವರ ಸಿನಿಮಾಗಳು ಬಾಕ್ಸ್ ಆಫೀಸ್ ಫೈಟ್ಗೆ ಸಜ್ಜಾಗುತ್ತಿವೆ. ಜೂ ಎನ್ಟಿಆರ್ ಪ್ರಸ್ತುತ ‘ದೇವರ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಜೋರಾಗಿ ನಡೆದಿದೆ. ಸಿನಿಮಾವನ್ನು ಭಾರಿ ಬಜೆಟ್ನಲ್ಲಿ, ದೊಡ್ಡ ದೊಡ್ಡ ನಟರು, ಹಾಲಿವುಡ್ ತಂತ್ರಜ್ಞರನ್ನು ಬಳಸಿ ನಿರ್ಮಿಸಲಾಗುತ್ತಿದೆ. ಈ ಸಿನಿಮಾದ ಬಿಡುಗಡೆ, ಬಾಲಕೃಷ್ಣರ ಹೊಸ ಸಿನಿಮಾದ ಬಿಡುಗಡೆಯೊಟ್ಟಿಗೆ ಕ್ಲ್ಯಾಷ್ ಆಗಲಿದೆ.
ಬಾಲಕೃಷ್ಣ ನಟನೆಯ ‘ಭಗವಂತ್ ಕೇಸರಿ’ ಸಿನಿಮಾ ಕಳೆದ ತಿಂಗಳಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಇದೀಗ ಬಾಲಕೃಷ್ಣ ತಮ್ಮ 109ನೇ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಈ ಸಿನಿಮಾವನ್ನು ಬಾಬಿ ಕೊಲ್ಲ ನಿರ್ದೇಶನ ಮಾಡುತ್ತಿದ್ದಾರೆ. ಬಾಬಿ ಕೊಲ್ಲ ಈ ಹಿಂದೆ ಜೂ ಎನ್ಟಿಆರ್ ನಟನೆಯ ‘ಲವ-ಕುಶ’, ಚಿರಂಜೀವಿ ನಟನೆಯ ‘ವಾಲ್ತೇರು ವೀರಯ್ಯ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ಬಾಲಕೃಷ್ಣರ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ:ಮತ್ತೆ ಜೂ ಎನ್ಟಿಆರ್ ಅನ್ನು ದೂರವಿಟ್ಟ ನಂದಮೂರಿ ಬಾಲಕೃಷ್ಣ-ಚಂದ್ರಬಾಬು ನಾಯ್ಡು
ಬಾಲಕೃಷ್ಣರ 109ನೇ ಸಿನಿಮಾ ಹಾಗೂ ಜೂ ಎನ್ಟಿಆರ್ರ ‘ದೇವರ’ ಸಿನಿಮಾ ಒಂದೇ ಸಮಯಕ್ಕೆ ಬಿಡುಗಡೆ ಆಗಲಿವೆ ಎನ್ನಲಾಗುತ್ತಿದೆ. ‘ದೇವರ’ ಸಿನಿಮಾದ ಮೊದಲ ಭಾಗವನ್ನು ಏಪ್ರಿಲ್ 5ಕ್ಕೆ ಬಿಡುಗಡೆ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಿಸಿದೆ. ಇದೀಗ ಬಾಲಕೃಷ್ಣರ ಸಿನಿಮಾ ಸಹ ಅದೇ ಸಮಯಕ್ಕೆ ಬಿಡುಗಡೆ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಒಂದೊಮ್ಮೆ ‘ದೇವರ’ ಹಾಗೂ ಬಾಲಕೃಷ್ಣರ ಸಿನಿಮಾ ಒಂದೇ ದಿನ ಬಿಡುಗಡೆ ಆದರೆ ಟಾಲಿವುಡ್ನ ಅತಿ ದೊಡ್ಡ ಬಾಕ್ಸ್ ಆಫೀಸ್ ಫೈಟ್ ಆಗಲಿದೆ.
ಇತ್ತೀಚೆಗಷ್ಟೆ ನಂದಮೂರಿ ಕುಟುಂಬವು ಎನ್ಟಿಆರ್ರ ಜನ್ಮ ಶತಮಾನೋತ್ಸವವನ್ನು ಅದ್ಧೂರಿಯಾಗಿ ಹಲವು ನಗರಗಳಲ್ಲಿ ಆಚರಣೆ ಮಾಡಿತು. ಆ ಕಾರ್ಯಕ್ರಮಕ್ಕೆ ಜೂ ಎನ್ಟಿಆರ್ಗೆ ಆಗಲಿ ಅವರ ಅಣ್ಣನಿಗಾಗಲಿ ಆಹ್ವಾನ ನೀಡಿರಲಿಲ್ಲ. ಬಾಲಕೃಷ್ಣ ಅಂತೂ ಕೆಲವು ಸಂದರ್ಭಗಳಲ್ಲಿ ನೇರವಾಗಿಯೇ ಜೂ ಎನ್ಟಿಆರ್ ವಿರುದ್ಧ ಮಾತನಾಡಿದ್ದು ಇದೆ. ಅದಾದ ಬಳಿಕ ನಂದಮೂರಿ ಕುಟುಂಬದ ಅಳಿಯ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಜೈಲಿಗೆ ಹೋದಾಗ ಜೂ ಎನ್ಟಿಆರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಕನಿಷ್ಟ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಬಂಧನವನ್ನು ಖಂಡಿಸಲಿಲ್ಲ. ಬದಲಿಗೆ ಕುಟುಂಬದೊಡನೆ ಫಾರಿನ್ ಟ್ರಿಪ್ಗೆ ಹೊರಟರು. ಕುಟುಂಬದ ಜಗಳ ಬಹಿರಂಗಗೊಂಡಿದ್ದು, ಇದು ಯಾವ ಹಂತಕ್ಕೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ