ನಿರ್ದೇಶಕ ನಾಗ್ ಅಶ್ವಿನ್ ಅವರು ಸೈನ್ಸ್ ಫಿಕ್ಷನ್ ಸಿನಿಮಾ ‘ಕಲ್ಕಿ 2898 ಎಡಿ’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ವರ್ಷ ಯಾವ ಚಿತ್ರವೂ ಸಾವಿರ ಕೋಟಿ ಕ್ಲಬ್ ಸೇರಿರಲಿಲ್ಲ. ಈಗ ‘ಕಲ್ಕಿ 2898 ಎಡಿ’ ಚಿತ್ರ ಈ ಸಾಧನೆ ಮಾಡುವ ಸೂಚನೆ ಸಿಕ್ಕಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದವರು ನಟಿಸಿರೋ ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಐದು ದಿನಕ್ಕೆ 625 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈಗ ಆರನೇ ದಿನದ (ಮಂಗಳವಾರ, ಜುಲೈ 2) ಗಳಿಕೆಯ ಲೆಕ್ಕಾಚಾರ ಸಿಕ್ಕಿದೆ.
Sacnilk ವರದಿ ಪ್ರಕಾರ ‘ಕಲ್ಕಿ 2898 ಎಡಿ’ ಚಿತ್ರ ಆರನೇ ದಿನಕ್ಕೆ 27.85 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತೆಲುಗು ಭಾಷೆಯಿಂದ 11.2 ಕೋಟಿ ಕಲೆಕ್ಷನ್ ಆಗಿದೆ. ತಮಿಳು, ಮಲಯಾಳಂನಿಂದ ತಲಾ 1.2 ಕೋಟಿ ರೂಪಾಯಿ, ಹಿಂದಿಯಿಂದ 14 ಕೋಟಿ ರೂಪಾಯಿ ಸಿಕ್ಕಿದೆ. ಕನ್ನಡ ವರ್ಷನ್ನಿಂದ ಸಿಕ್ಕಿರುವುದು ಕೇವಲ 25 ಲಕ್ಷ ರೂಪಾಯಿ ಮಾತ್ರ.
ಕನ್ನಡ ವರ್ಷನ್ನಿಂದ ಇಷ್ಟೊಂದು ಕಡಿಮೆ ಗಳಿಕೆ ಆಗಲು ಪ್ರಮುಖ ಕಾರಣವೂ ಇದೆ. ಕರ್ನಾಟಕದಲ್ಲಿ ಈ ಚಿತ್ರದ ಹಂಚಿಕೆ ಪಡೆದಿರುವ ಕೆವಿಎನ್ ಪ್ರೊಡಕ್ಷನ್ನವರು ಕನ್ನಡಕ್ಕೆ ಕೆಲವೇ ಕೆಲವು ಶೋಗಳನ್ನು ನೀಡಿದ್ದಾರೆ. ಇದರ ಜೊತೆಗೆ ಕನ್ನಡ ವರ್ಷನ್ಗೆ ಯಾವುದೇ 3ಡಿ ಆಯ್ಕೆ ನೀಡಿಲ್ಲ. ಇದರಿಂದ ಸಹಜವಾಗಿಯೇ ಕನ್ನಡ ವರ್ಷನ್ ಗಳಿಕೆಯಲ್ಲಿ ಇಳಿಕೆ ಕಂಡಿದೆ.
ಭಾರತಾದ್ಯಂತ ಈ ಚಿತ್ರ 371 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿಶ್ವದ ಲೆಕ್ಕಾಚಾರ ನೋಡಿದರೆ ಈ ಸಿನಿಮಾದ ಗಳಿಕೆ 650 ಕೋಟಿ ರೂಪಾಯಿ ದಾಟಿದೆ. ಇದು ಚಿತ್ರ ತಂಡದ ಖುಷಿ ಹೆಚ್ಚಿಸಿದೆ. ಈ ವರ್ಷ ರಿಲೀಸ್ ಆಗಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಈ ಸಿನಿಮಾ ಇನ್ನೂ ಕೆಲವು ವಾರ ಭರ್ಜರಿ ಗಳಿಕೆ ಮಾಡುವ ನಿರೀಕ್ಷೆ ಇದೆ.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ನಿರ್ಮಾಪಕರು ಮುಟ್ಟಿದ್ದೆಲ್ಲವೂ ಚಿನ್ನ; 10 ವರ್ಷಗಳಲ್ಲಿ ಸಿಕ್ಕ ಗೆಲುವೆಷ್ಟು?
‘ಕಲ್ಕಿ 2898 ಎಡಿ’ ಚಿತ್ರಕ್ಕೆ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಅಶ್ವಿನಿ ದತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಬಜೆಟ್ 600 ಕೋಟಿ ರೂಪಾಯಿ ಮೀರಿದೆ. ಹೀಗಾಗಿ ಸಿನಿಮಾಗೆ ದೊಡ್ಡ ಮೊತ್ತದ ಗಳಿಕೆ ಆಗಲೇಬೇಕಾದ ಅನಿವಾರ್ಯತೆ ಇತ್ತು. ಈ ಅನಿವಾರ್ಯತೆಯನ್ನು ಸಿನಿಮಾ ನೀಗಿಸಿದೆ. ಈ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮೊದಲಾದವರು ನಟಿಸಿದ್ದಾರೆ. ಅನೇಕರು ಅತಿಥಿ ಪಾತ್ರ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.