‘ಕಲ್ಕಿ’ ಸಿನಿಮಾ ಕರ್ನಾಟಕ ವಿತರಣೆ ಹಕ್ಕು ಖರೀದಿಸಿದ ನಿರ್ಮಾಣ ಸಂಸ್ಥೆ
ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾದ ವಿತರಣೆ ಹಕ್ಕು ಖರೀದಿಸಲು ದೊಡ್ಡ ದೊಡ್ಡ ನಿರ್ಮಾಣ ಹಾಗೂ ವಿತರಣೆ ಸಂಸ್ಥೆಗಳು ಸಾಲುಗಟ್ಟಿವೆ. ಅಂಥಹುದರಲ್ಲಿ ದೊಡ್ಡ ನಿರ್ಮಾಣ ಸಂಸ್ಥೆಯೊಂದು ‘ಕಲ್ಕಿ’ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಖರೀದಿ ಮಾಡಿದೆ.
‘ಬಾಹುಬಲಿ’ (Bahubali) ಸಿನಿಮಾದ ಬಳಿಕ ಪ್ರಭಾಸ್ ಯಾವುದೇ ದೊಡ್ಡ ಹಿಟ್ ನೀಡಿಲ್ಲ. ಹಾಗಿದ್ದರೂ ಸಹ ಪ್ರಭಾಸ್ ನಟಿಸುವ ಪ್ರತಿ ಸಿನಿಮಾಕ್ಕೂ ಭಾರಿ ದೊಡ್ಡ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ನೂರಾರು ಕೋಟಿ ವ್ಯವಹಾರವಾಗುತ್ತದೆ. ಪ್ರಭಾಸ್ರ ಈ ಹಿಂದಿನ ಸಿನಿಮಾ ‘ಆದಿಪುರುಷ್’ (Adipurush) ಇನ್ನಿಲ್ಲದಂತೆ ನಲಕಚ್ಚಿದೆ. ಹಾಗಿದ್ದರೂ ಸಹ ಅವರ ಮುಂದಿನ ‘ಕಲ್ಕಿ 2898 ಎಡಿ’ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆಗಳು ದೇಶದಾದ್ಯಂತ ಈಗಾಗಲೇ ಹುಟ್ಟಿಕೊಂಡಿವೆ. ಸಿನಿಮಾದ ಹಕ್ಕುಗಳಿಗಾಗಿ ಈಗಾಗಲೇ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು, ವಿತರಣೆ ಸಂಸ್ಥೆಗಳು ಪೈಪೋಟಿಗೆ ಬಿದ್ದಿವೆ. ಇದರ ನಡುವೆ ಸಿನಿಮಾದ ಕರ್ನಾಟಕ ಭಾಗದ ವಿತರಣೆ ಹಕ್ಕನ್ನು ದೊಡ್ಡ ನಿರ್ಮಾಣ ಸಂಸ್ಥೆ ಖರೀದಿ ಮಾಡಿದೆ.
ಕೋವಿಡ್ ಬಳಿಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಕೆಲವೇ ವರ್ಷದಲ್ಲಿ ರಾಜ್ಯದ ಪ್ರಮುಖ ವಿತರಕ ಹಾಗೂ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಕೆವಿಎನ್ ಪ್ರೊಡಕ್ಷನ್ ನವರು ‘ಕಲ್ಕಿ 2898 ಎಡಿ’ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಖರೀದಿ ಮಾಡಿದ್ದಾರೆ. ಕರ್ನಾಟಕದಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾವನ್ನು ಬಿಡುಗಡೆ ಮಾಡುವ ಹಕ್ಕು ಕೆವಿಎನ್ ಬಳಿ ಇರಲಿದೆ. ಕನ್ನಡ ಮಾತ್ರವಲ್ಲದೆ ಕರ್ನಾಟಕದಲ್ಲಿ ಬೇರೆ ಭಾಷೆಗಳಲ್ಲಿಯೂ ಸಿನಿಮಾವನ್ನು ಬಿಡುಗಡೆ ಮಾಡುವ ಹಕ್ಕನ್ನು ಕೆವಿಎನ್ ಖರೀದಿ ಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕೆವಿಎನ್, ‘ಕರ್ನಾಟಕದ ಜನರಿಗೆ ‘ಕಲ್ಕಿ’ಯ ಅಭೂತಪೂರ್ವ ಅನುಭವವನ್ನು ಕೊಂಡು ತರುತ್ತಿರುವುದು ಬಹಳ ಖುಷಿಯ ವಿಷಯ’ ಎಂದಿದೆ. ‘ಕಲ್ಕಿ’ ಸಿನಿಮಾ ಜೂನ್ 27 ರಂದು ಬಿಡುಗಡೆ ಆಗಲಿದೆ.
ಇದನ್ನೂ ಓದಿ:ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಹಾಲಿವುಡ್ ಚಿತ್ರದ ರಿಮೇಕ್? ಮೂಡಿದೆ ಅನುಮಾನ
‘ಕಲ್ಕಿ 2898 ಎಡಿ’ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಖರೀದಿಗೆ ದೊಡ್ಡ ಮೊತ್ತವನ್ನೇ ಕೆವಿಎನ್ ನೀಡಿದೆ ಎನ್ನಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ಕರ್ನಾಟಕ ವಿತರಣೆ ಹಕ್ಕಿಗಾಗಿ ಬರೋಬ್ಬರಿ 50 ಕೋಟಿ ರೂಪಾಯಿ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ. ಈ ಹಿಂದೆ ಇದೇ ಕೆವಿಎನ್ ಪ್ರೊಡಕ್ಷನ್ ನವರು ತೆಲುಗಿನ ಸೂಪರ್-ಡೂಪರ್ ಹಿಟ್ ಸಿನಿಮಾಗಳಾದ ‘ಆರ್ಆರ್ಆರ್’, ‘ಸೀತಾ ರಾಮಂ’ ಸಿನಿಮಾಗಳನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದ್ದರು. ಮಾತ್ರವಲ್ಲದೆ ಕನ್ನಡದ ಹಲವು ಒಳ್ಳೆಯ ಸಿನಿಮಾಗಳನ್ನು ರಾಜ್ಯ ಮತ್ತು ಹೊರರಾಜ್ಯಗಳಲ್ಲಿಯೂ ವಿತರಣೆ ಮಾಡಿದ್ದಾರೆ. ಇದೀಗ ಮೊದಲ ಬಾರಿಗೆ ಪ್ರಭಾಸ್ ಸಿನಿಮಾವನ್ನು ವಿತರಣೆ ಮಾಡಲು ಸಜ್ಜಾಗಿದ್ದಾರೆ.
ಕೆವಿಎನ್ ಪ್ರೊಡಕ್ಷನ್ನವರು ವಿತರಣೆ ಮಾತ್ರವೇ ಅಲ್ಲದೆ ಸಿನಿಮಾ ನಿರ್ಮಾಣವನ್ನೂ ಮಾಡುತ್ತ ಬರುತ್ತಿದ್ದಾರೆ. ಗಣೇಶ್ ನಟನೆಯ ‘ಸಖತ್’ ಸಿನಿಮಾ ಮೂಲಕ ನಿರ್ಮಾಣ ಆರಂಭಿಸಿದ ಕೆವಿಎನ್ ಪ್ರೊಡಕ್ಷನ್, ಧ್ರುವ ಸರ್ಜಾ ನಟನೆಯ ‘ಪೊಗರು’ ನಿರ್ಮಿಸಿದ್ದಾರೆ. ಇದೀಗ ಅದೇ ಧ್ರುವ ನಟಿಸಿರುವ ‘ಕೆಡಿ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ ಜೊತೆಗೆ ಯಶ್ ನಟಿಸುತ್ತಿರುವ ಬಹುಕೋಟಿ ಬಜೆಟ್ ಸಿನಿಮಾ ‘ಟಾಕ್ಸಿಕ್’ಗೂ ಕೆವಿಎನ್ ಅವರೇ ಬಂಡವಾಳ ಹೂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ