‘ಅದು ಆತ್ಮಹತ್ಯೆ ಪ್ರಯತ್ನವಲ್ಲ, ಈಗ ನನಗೆ ಯಾತನೆ ಉಂಟಾಗುತ್ತಿದೆ’; ಗಾಯಕಿ ಕಲ್ಪನಾ ಮಾತು
Kalpana Raghavendra: ಗಾಯಕಿ ಕಲ್ಪನಾ ರಾಘವೇಂದ್ರ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂಬ ವದಂತಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ನಿದ್ರಾಮಾತ್ರೆ ಓವರ್‌ಡೋಸ್‌ನಿಂದಾಗಿ ಈ ಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ. ತೀವ್ರ ಮಾನಸಿಕ ಒತ್ತಡ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಗಾಯಕಿ ಕಲ್ಪನಾ ರಾಘವೇಂದ್ರ ಅವರು ಇತ್ತೀಚೆಗೆ ಸುದ್ದಿಯಲ್ಲಿ ಇರುವುದು ಗೊತ್ತೇ ಇದೆ. ಆತ್ಮಹತ್ಯೆಗೆ ಅವರು ಪ್ರಯತ್ನಿಸಿದ್ದರು ಎಂದು ಹೇಳಲಾಯಿತು. ಆದರೆ, ಇದನ್ನು ಅವರ ಮಗಳು ಅಲ್ಲಗಳೆದಿದ್ದರು. ನಿದ್ರಾ ಮಾತ್ರೆ ಓವರ್ಡೋಸ್ ಆಗಿ ಅವರಿಗೆ ತೊಂದರೆ ಆಯಿತು ಎಂದು ಕಲ್ಪನಾ ರಾಘವೇಂದ್ರ ಮಗಳು ಹೇಳಿದ್ದರು. ಈಗ ಕಲ್ಪನಾ ಅವರೇ ಈ ಬಗ್ಗೆ ಮಾತನಾಡಿದ್ದಾರೆ. ತಾವು ಅನುಭವಿಸಿದ ಮಾನಸಿಕ ಅನಾರೋಗ್ಯದ ಬಗ್ಗೆ ಅವರು ವಿವರಿಸಿದ್ದಾರೆ.
ಕಳೆದ ಜನವರಿ ತಿಂಗಳಿಂದ ಕಲ್ಪನಾ ಅವರಿಗೆ ಶ್ವಾಸಕೋಶದ ಸಮಸ್ಯೆ ಇದೆ. ಆದಾಗ್ಯೂ ಅವರು ಸಂಗೀತ ಲೋಕದಲ್ಲಿ ಬ್ಯುಸಿ ಇದ್ದರು. ಜೊತೆಗೆ ಎಲ್ಎಲ್ಬಿಯನ್ನು ಅವರು ಓದುತ್ತಾ ಇದ್ದಾರೆ. ಈ ಮೂಲಕ ಅನಾರೋಗ್ಯದ ಸಮಸ್ಯೆಯನ್ನು ಮರೆಯಲು ಅವರು ಪ್ರಯತ್ನ ಮಾಡುತ್ತಾ ಇದ್ದಾರೆ. ಆದರೂ ಕೆಲವೊಮ್ಮೆ ಅವರು ಮಿತಿ ತಪ್ಪುತ್ತಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ದಿನ ಏನಾಗಿತ್ತು ಎಂಬುದನ್ನು ಕಲ್ಪನಾ ವಿವರಿಸಿದ್ದರು. ‘ನನಗೆ ನಿದ್ರಾ ಹೀನತೆ ಇದೆ. ಕಷ್ಟದ ಸಮಯದಲ್ಲಿ ನಾನು ಹೆಚ್ಚು ಡೋಸ್ ನಿದ್ರಾಮಾತ್ರೆ ತೆಗೆದುಕೊಳ್ಳುತ್ತೇನೆ. ಇದರಿಂದ ಸಮಸ್ಯೆ ಆಯಿತು. ನನ್ನ ಪತಿ ನನಗೆ ಕರೆ ಮಾಡಿದರು. ಎತ್ತದೇ ಇರುವಾಗ ಪೊಲೀಸರು ಹಾಗೂ ಆ್ಯಂಬುಲೆನ್ಸ್ಗೆ ಕರೆ ಮಾಡಿದರು. ಇದರಿಂದ ಸರಿಯಾದ ಸಮಯಕ್ಕೆ ಪರಿಹಾರ ಸಿಕ್ಕಿತು’ ಎಂದಿದ್ದಾರೆ ಅವರು.
ಇದನ್ನೂ ಓದಿ:‘ಡ್ರಗ್ ಜಾಸ್ತಿ ಆಯ್ತು, ಆತ್ಮಹತ್ಯೆ ಪ್ರಯತ್ನವಲ್ಲ’; ಖ್ಯಾತ ಗಾಯಕಿ ಕಲ್ಪನಾ ಮಗಳ ಪ್ರತಿಕ್ರಿಯೆ
‘ನಾನು ಆತ್ಮಹತ್ಯೆಗೆ ಪ್ರಯತ್ನಿಸಿದೆ ಎನ್ನುವ ಮಾತು ಕೇಳಿ ಬಂದವು. ಇದು ನನಗೆ ಮಾನಸಿಕ ಯಾತನೆಯನ್ನು ಉಂಟು ಮಾಡಿತು’ ಎಂದು ಕಲ್ಪನಾ ಅವರು ಹೇಳಿದ್ದಾರೆ. ‘ನಾನು ಎಲ್ಎಲ್ಬಿ ಓದು, ಪಿಎಚ್ಡಿ ಮತ್ತು ಸಂಗೀತ ಲೋಕದ ಜೊತೆಗೆ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದೇನೆ. ಇದರಿಂದ ನಿದ್ರೆಯೇ ಇಲ್ಲದಂತೆ ಆಗಿದೆ. ಒಂದು ದಿನ ಗೊತ್ತಿಲ್ಲದೆ ಹೆಚ್ಚು ಮಾತ್ರ ತೆಗೆದುಕೊಂಡೆ. ಇದರಿಂದ ಇಷ್ಟೆಲ್ಲ ತೊಂದರೆ ಆಯಿತು’ ಎಂದಿದ್ದಾರೆ ಅವರು.
ಕಲ್ಪನಾ ಅವರು ಇತ್ತೀಚೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರ ಮನೆಯಲ್ಲೇ ಪತ್ತೆ ಆದರು. ಆ ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂಬ ಮಾಹಿತಿ ಆರಂಭದಲ್ಲಿ ಹೊರ ಬಂತು. ಆ ಬಳಿಕ ನಿಜವಾದ ವಿಚಾರ ಗೊತ್ತಾಯಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ