
ಹಿಂದಿ ಹೇರಿಕೆಯ ಬಗ್ಗೆ ದೊಡ್ಡದಾಗಿ ಚರ್ಚೆ ಆಗುತ್ತಿದೆ. ದಕ್ಷಿಣ ಭಾರತದ ಬ್ಯಾಂಕ್ ಮುಂತಾದ ಕಡೆಗಳಲ್ಲಿ ಹಿಂದಿ (Hindi) ಮಂದಿ ಕಿರಿಕ್ ಮಾಡಿದ ಘಟನೆಗಳು ಆಗಾಗ ವರದಿ ಆಗುತ್ತಿವೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಇಂಥದ್ದೊಂದು ಘಟನೆ ನಡೆದಿತ್ತು. ಇದೇ ಸಂದರ್ಭದಲ್ಲಿ ನಟ ಕಮಲ್ ಹಾಸನ್ (Kamal Haasan) ಅವರು ದಕ್ಷಿಣ ಭಾರತದ ಭಾಷೆಗಳ ಉಳಿವಿನ ಅನಿವಾರ್ಯತೆ ಬಗ್ಗೆ ಮಾತನಾಡಿದ್ದಾರೆ. ಕೇರಳದಲ್ಲಿ ಅವರು ‘ಥಗ್ ಲೈಫ್’ (Thug Life) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಹಿಂದಿ ಕಲಿಯುವುದಕ್ಕಿಂತ ಮುನ್ನ ಪಕ್ಕದ ರಾಜ್ಯಗಳ ಭಾಷೆ ಕಲಿಯಿರಿ ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ಕಮಲ್ ಹಾಸನ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಕಮಲ್ ಹಾಸನ್ ಅವರನ್ನು ನೋಡಿ ಅಲ್ಲಿನ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವರನ್ನು ಉದ್ದೇಶಿಸಿ ಕಮಲ್ ಹಾಸನ್ ಮಾತನಾಡಿದರು. ‘ಮೊದಲು ನೀವು ನಿಮ್ಮ ಪಕ್ಕದ ರಾಜ್ಯದ ಭಾಷೆಯನ್ನು ಕಲಿಯಬೇಕು. ಆಮೇಲೆ ನಾವು ಹಿಂದಿ ಬಗ್ಗೆ ಮಾತನಾಡಬಹುದು’ ಎಂದು ಕಮಲ್ ಹಾಸನ್ ಅವರು ಹೇಳಿದ್ದಾರೆ.
‘ನಾವೆಲ್ಲರೂ ದ್ರಾವಿಡರು, ಒಂದೇ ಕುಟುಂಬದವರು. ನೀವು ತಮಿಳುನಾಡಿನಲ್ಲಿ ಮಲಯಾಳಂ ಮಾತನಾಡಬಹುದು. ಆದರೆ ಹೆಚ್ಚು ಹೊತ್ತು ಮಾತನಾಡಿದರೆ ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತದೆ. ಆದರೆ ನೀವು ಕೇರಳದಲ್ಲಿ ತಮಿಳು ಮಾತನಾಡಿದರೆ ಜನರು ಅರ್ಥ ಮಾಡಿಕೊಳ್ಳುತ್ತಾರೆ’ ಎಂದು ಕಮಲ್ ಹಾಸನ್ ಅವರು ಹೇಳಿದರು.
‘ನಮ್ಮ ಭಾಷೆ ಕಳೆದು ಹೋಗದಂತೆ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಇದನ್ನು ಹೇಳಲು ಎಷ್ಟು ಧೈರ್ಯ ಬೇಕು ಗೊತ್ತಾ? ನಾವೆಲ್ಲರೂ ದ್ರಾವಿಡರು, ಒಂದೇ ಕುಟುಂಬದವರು ಎಂಬುದೇ ಹೆಮ್ಮೆ’ ಎಂದಿದ್ದಾರೆ ಕಮಲ್ ಹಾಸನ್. ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಜನರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟಿ ತಮನ್ನಾ ಕನ್ನಡದವ್ರು, ಪೂರ್ವಜರ ಮೂಲ ಕನ್ನಡದ ನೆಲ : ಇದು ನಿಜಾನಾ?
‘ಥಗ್ ಲೈಫ್’ ಸಿನಿಮಾಗೆ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದಾರೆ. ಕಮಲ್ ಹಾಸನ್ ಜೊತೆ ಸಿಂಬು, ತ್ರಿಷಾ, ಅಭಿರಾಮಿ, ಐಶ್ವರ್ಯಾ ಲಕ್ಷ್ಮಿ, ಅಶೋಕ್ ಸೆಲ್ವನ್, ಪಂಕಜ್ ತ್ರಿಪಾಠಿ, ನಾಸರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ರಾಜ್ ಕಮಲ್ ಫಿಲ್ಸ್ ಇಂಟರ್ನ್ಯಾಷನಲ್’, ‘ಮದ್ರಾಸ್ ಟಾಕೀಸ್’, ‘ರೆಡ್ ಜೈಂಟ್ ಮೂವೀಸ್’ ಸಂಸ್ಥೆಗಳು ಈ ಚಿತ್ರವನ್ನು ನಿರ್ಮಾಣ ಮಾಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:04 pm, Fri, 23 May 25