ಹಿಂದು-ಮುಸ್ಲಿಂ ಮದುವೆಯಾದ್ರೆ ಮಕ್ಕಳು ಮುಸ್ಲಿಂ ಆಗ್ತಾರೆ; ಹಿಂದು ಆಗಲ್ಲ ಯಾಕೆ? ಕಂಗನಾ ಪ್ರಶ್ನೆ

| Updated By: ಮದನ್​ ಕುಮಾರ್​

Updated on: Jul 06, 2021 | 12:01 PM

Aamir Khan Kiran Rao divorce: ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ವಿಚ್ಛೇದನದ ವಿಚಾರದಲ್ಲಿ ನಟಿ ಕಂಗನಾ ರಣಾವತ್​ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಹಿಂದು-ಮುಸ್ಲಿಂ ಮದುವೆಯಾದ್ರೆ ಮಕ್ಕಳು ಮುಸ್ಲಿಂ ಆಗ್ತಾರೆ; ಹಿಂದು ಆಗಲ್ಲ ಯಾಕೆ? ಕಂಗನಾ ಪ್ರಶ್ನೆ
ಕಂಗನಾ, ಕಿರಣ್​ ರಾವ್​, ಆಮೀರ್​ ಖಾನ್​, ಆಜಾದ್​
Follow us on

ಬಾಲಿವುಡ್​ನ ಸ್ಟಾರ್​ ದಂಪತಿಗಳಾಗಿದ್ದ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ವಿಚ್ಛೇದನ ಪಡೆದುಕೊಂಡಿರುವುದು ಟಾಕ್​ ಆಫ್​ ದಿ ಟೌನ್​ ಆಗಿದೆ. ಎಲ್ಲರೂ ಈ ಬಗ್ಗೆ ಮಾತನಾಡುತ್ತಿದ್ದಾರೆ. ತಮಗೆ ಸಂಬಂಧವೇ ಇಲ್ಲದ ವಿಚಾರಗಳಲ್ಲಿ ತಲೆ ಹಾಕುವುದನ್ನು ಹವ್ಯಾಸ ಮಾಡಿಕೊಂಡಿರುವ ನಟಿ ಕಂಗನಾ ರಣಾವತ್​ ಕೂಡ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆಮಿರ್​ ಖಾನ್ ಮುಸ್ಲಿಂ, ಕಿರಣ್​ ರಾವ್​ ಹಿಂದು. ಇವರಿಬ್ಬರಿಗೆ ಜನಿಸಿದ ಪುತ್ರ ಆಜಾದ್​ ರಾವ್​ ಖಾನ್​ ಯಾಕೆ ಮುಸ್ಲಿಂ ಆಗಿ ಮುಂದುವರಿಯುತ್ತಿದ್ದಾನೆ ಎಂಬ ಬಗ್ಗೆ ಕಂಗನಾ ಪ್ರಶ್ನೆ ಎತ್ತಿದ್ದಾರೆ.

ಈ ಕುರಿತು ಕಂಗನಾ ತಮ್ಮ ಇನ್​ಸ್ಟಾಗ್ರಾಮ್​ ಸೋರಿಯಲ್ಲಿ ಬರೆದುಕೊಂಡಿರುವುದು ವೈರಲ್​ ಆಗಿದೆ. ‘ಒಂದು ಕಾಲದಲ್ಲಿ ಪಂಜಾಬ್​ನ ಬಹುತೇಕ ಕುಟುಂಬಗಳು ಒಬ್ಬ ಮಗನನ್ನು ಸಿಖ್​ ಆಗಿ, ಇನ್ನೊಬ್ಬ ಮಗನನ್ನು ಹಿಂದು ಆಗಿ ಬೆಳೆಸುತ್ತಿದ್ದರು. ಆದರೆ ಹಿಂದು-ಮುಸ್ಲಿಂ ಅಥವಾ ಮುಸ್ಲಿಂ ಜೊತೆ ಮದುವೆಯಾದ ಯಾರಲ್ಲೂ ಈ ಟ್ರೆಂಡ್​ ಕಾಣಿಸುವುದಿಲ್ಲ ಯಾಕೆ? ಆಮಿರ್​ ಖಾನ್​ ಅವರ ವಿಚ್ಛೇದನದ ವಿಚಾರದಲ್ಲಿ ನನಗೆ ಅಚ್ಚರಿ ಆಗಿದ್ದು ಏನೆಂದರೆ, ಇಂಥ ಅಂತರ್​ಧರ್ಮೀಯ ಮದುವೆಯಲ್ಲಿ ಮಕ್ಕಳು ಮುಸ್ಲಿಂ ಆಗಿಯೇ ಮುಂದುವರಿಯುತ್ತಾರೆ ಯಾಕೆ?’ ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ.

‘ಮಹಿಳೆ ಯಾಕೆ ಹಿಂದು ಆಗಿ ಮುಂದುವರಿಯಲು ಸಾಧ್ಯವಿಲ್ಲ. ಬದಲಾದ ಕಾಲದಲ್ಲಿ ಇದನ್ನೂ ನಾವು ಬದಲಾಯಿಸಬೇಕು. ಇದು ತುಂಬ ಹಳೆಯ ಮತ್ತು ಜಡವಾದ ಪದ್ಧತಿ. ಒಂದೇ ಕುಟುಂಬದಲ್ಲಿ ಹಿಂದುಗಳು, ಸಿಖ್​, ಬೌದ್ಧರು, ಜೈನರು ಜೊತೆಯಾಗಿ ಇರಲು ಸಾಧ್ಯ ಎಂಬುದಾದರೆ ಮುಸ್ಲಿಮರು ಕೂಡ ಜೊತೆಯಾಗಿ ಇರಲು ಯಾಕೆ ಸಾಧ್ಯವಿಲ್ಲ? ಮುಸ್ಲಿಮರ ಜೊತೆ ಮದುವೆ ಆದವರು ತನ್ನ ಮೂಲ ಧರ್ಮವನ್ನು ಯಾಕೆ ಬದಲಾಯಿಸಿಕೊಳ್ಳಬೇಕು’ ಎಂಬುದು ಕಂಗನಾ ಪ್ರಶ್ನೆ.

ಈ ಬಗ್ಗೆ ಆಮಿರ್​ ಖಾನ್​ ಅಥವಾ ಕಿರಣ್​ ರಾವ್​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೋ ತಿಳಿದಿಲ್ಲ. ವಿಚ್ಛೇದನದ ಬಳಿಕ ಪುತ್ರ ಆಜಾದ್​ ರಾವ್​ ಖಾನ್​ನನ್ನು ಬೆಳೆಸುವ ಜವಾಬ್ಧಾರಿಯನ್ನು ಇವರಿಬ್ಬರು ಜೊತೆಯಾಗಿ ವಹಿಸಿಕೊಂಡಿದ್ದಾರೆ. ಆ ವಿಚಾರದಲ್ಲಿ ತಾವು ಪಾಲಕರಾಗಿ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ. ಪಾನಿ ಪೌಂಡೇಶನ್​, ಸಿನಿಮಾ ಮುಂತಾದ ಪ್ರಾಜೆಕ್ಟ್​ಗಳಲ್ಲೂ ಆಮಿರ್​ ಮತ್ತು ಕಿರಣ್​ ಜೊತೆಯಾಗಿ ಕೆಲಸ ಮಾಡಲಿದ್ದಾರೆ. ಇಬ್ಬರೂ ಖುಷಿಯಿಂದಲೇ ವಿಚ್ಛೇದನ ಪಡೆದುಕೊಂಡು, ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಇದನ್ನೂ ಓದಿ:

ಇಂದಿರಾ ಗಾಂಧಿ ಪಾತ್ರದಲ್ಲಿ ಕಿರಿಕ್ ನಟಿ ಕಂಗನಾ ರಣಾವತ್​; ಹೊಸ ಸಿನಿಮಾ ಹೆಸರು ‘ಎಮರ್ಜೆನ್ಸಿ’

‘ಇಂಡಿಯಾ’ ಅನ್ನೋದು ಗುಲಾಮರ ಹೆಸರು ಎಂದ ಕಂಗನಾ ರಣಾವತ್​​ಗೆ ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು