
ಟಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲಾ ಭಾಷೆಯ ನಿರ್ಮಾಪಕರಿಗೂ ಕರ್ನಾಟಕ ಅದರಲ್ಲೂ ಬೆಂಗಳೂರು ಹಣ ಬಾಚುವ ಕೇಂದ್ರ ಎಂದರೂ ತಪ್ಪಾಗಲಾರದು. ಇಲ್ಲಿ ಪ್ರತಿ ಸಿನಿಮಾಗಳು ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡುತ್ತವೆ. ಸಿನಿಮಾ ಟಿಕೆಟ್ ದರ ಎಷ್ಟೇ ನಿಗದಿ ಮಾಡಿದರೂ ಯಾರೂ ಪ್ರಶ್ನೆ ಮಾಡುವವರು ಇರಲಿಲ್ಲ. ಆದರೆ, ಈಗ ಸರ್ಕಾರದಿಂದಲೇ ಇದಕ್ಕೆ ಕಠಿಣ ಆದೇಶ ಬಂದಿದೆ. ಏಕರೂಪ ಟಿಕೆಟ್ ದರ ನಿಯವನ್ನು ಜಾರಿಗೆ ತರಲಾಗಿದೆ. ಇದರಿಂದ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್ ದರ 200 ರೂಪಾಯಿ ನಿಗದಿ ಮಾಡಲಾಗಿದೆ. ಈ ವಿಚಾರ ಪವನ್ ಕಲ್ಯಾಣ್ (Pawan Kalyan) ನಿರ್ಮಾಪಕರಿಗೆ ತಲೆಬಿಸಿ ತಂದೊಡ್ಡಿದೆ.
ಕರ್ನಾಟಕದಲ್ಲಿ ಪವನ್ ಕಲ್ಯಾಣ್ ಸಿನಿಮಾ ಧೂಳೆಬ್ಬಿಸುತ್ತದೆ. ಈ ಮೊದಲು ಕೂಡ ಹಲವು ಚಿತ್ರಗಳು ಗೆದ್ದು ಬೀಗಿವೆ. ಈಗ ಅವರ ಅಭಿನಯದ ‘ಹರಿ ಹರ ವೀರ ಮಲ್ಲು’ ಸಿನಿಮಾ ಜುಲೈ 24ರಂದು ರಿಲೀಸ್ ಆಗುತ್ತಿದೆ. ಇದಕ್ಕೂ ಮೊದಲೇ ಸರ್ಕಾರ ಈ ನಿಯಮ ಜಾರಿಗೆ ತಂದಿರೋದು ನಿರ್ಮಾಪಕರ ಚಿಂತೆಗೆ ಕಾರಣ ಆಗಿದೆ.
ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ ನಿಗದಿ ಮೇಲೆ ಯಾವುದೇ ನಿಯಂತ್ರಣ ಇರಲಿಲ್ಲ. ಲಂಗು-ಲಗಾಮು ಇಲ್ಲದ ಕಾರಣ ಸಿನಿಮಾ ಟಿಕೆಟ್ ದರವನ್ನು ಬೇಕಾಬಿಟ್ಟಿ ನಿಗದಿ ಮಾಡಲಾಗುತ್ತಿತ್ತು. ಅದರಲ್ಲೂ ಪರಭಾಷೆಯ ಬಿಗ್ ಬಜೆಟ್ ಸಿನಿಮಾಗಳಿಗೆ ಮೊದಲ ದಿನ 500 ರೂಪಾಯಿ ಟಿಕೆಟ್ ದರ ಕಾಮನ್ ಎಂಬಂತಾಗಿತ್ತು. ಇದಕ್ಕೆ ಕಡಿವಾಣ ಹಾಕಲೆಂದೇ ಸರ್ಕಾರ 200 ರೂಪಾಯಿ ನಿಯಮ ಜಾರಿಗೆ ತಂದಿದೆ.
ಆದರೆ, ಈ ನಿಯಮ ‘ಹರಿ ಹರ ವೀರ ಮಲ್ಲು’ ಚಿತ್ರದ ಮೇಲೆ ಪ್ರಭಾವ ಬೀರಲ್ಲ ಎನ್ನಲಾಗಿದೆ. ಸದ್ಯ ಈ ಆದೇಶಕ್ಕೆ ವಿರೋಧ ಇದ್ದರೆ 15 ದಿನಗಳ ಒಳಗೆ ಮನವಿ ಸಲ್ಲಿಸಬೇಕು. ಹೀಗಾಗಿ, ಮೊದಲ ವಾರದ ಕಲೆಕ್ಷನ್ ವಿಚಾರದಲ್ಲಿ ಈ ಸಿನಿಮಾ ಸೇಫ್ ಎನ್ನಬಹುದು. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಬುಕಿಂಗ್ ಓಪನ್ ಆದ ಬಳಿಕ ಈ ಬಗ್ಗೆ ತಿಳಿಯಲಿದೆ.
ಇದನ್ನೂ ಓದಿ: ಆಂಧ್ರ ಪ್ರದೇಶದಲ್ಲಿ ಗಾಂಜಾ ಕಡಿಮೆ ಮಾಡಿದ ನಟ ಪವನ್ ಕಲ್ಯಾಣ್
‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ ನಿಧಿ ಅಗರ್ವಾಲ್, ಬಾಬಿ ಡಿಯೋಲ್ ಮೊದಲಾದವರು ನಟಿಸಿದ್ದಾರೆ. ಎಂಎಂ ಕೀರವಾಣಿ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಕ್ರಿಶ್ ಜಗರ್ಲಮುಡಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.