ಎಲ್ಲಿ ಹೋದರು ಕತ್ರಿನಾ ಕೈಫ್? ಬರ್ತ್ಡೇಗಾದರೂ ಸಿಗುತ್ತಾ ಹೊಸ ಸಿನಿಮಾ?
Katrina Kaif Birthday: ಕತ್ರಿನಾ ಕೈಫ್ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದರೂ, ಇತ್ತೀಚೆಗೆ ಅವರ ಚಲನಚಿತ್ರ ಆಯ್ಕೆ ಮತ್ತು ಚಿತ್ರೀಕರಣದ ವೇಗದಲ್ಲಿ ಕುಸಿತ ಕಂಡುಬಂದಿದೆ. ಅವರ ಅಭಿಮಾನಿಗಳು ಇದರಿಂದ ಬೇಸರಗೊಂಡಿದ್ದಾರೆ. ಅವರ 42ನೇ ಜನ್ಮದಿನದಂದು ಹೊಸ ಚಿತ್ರದ ಘೋಷಣೆಯನ್ನು ನಿರೀಕ್ಷಿಸಲಾಗುತ್ತಿದೆ.

ನಟಿ ಕತ್ರಿನಾ ಕೈಫ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿ ಸಿನಿಮಾ ಮಾಡುತ್ತಾ ಬಂದವರು. ಆದರೆ, ಇತ್ತೀಚೆಗೆ ಸಿನಿಮಾ ಆಯ್ಕೆ ಹಾಗೂ ಸಿನಿಮಾ ಮಾಡುವ ವಿಧಾನದಲ್ಲಿ ಅವರು ನಿಧಾನಗತಿಯನ್ನು ತೋರಿಸುತ್ತಿರುವುದನ್ನು ಅಭಿಮಾನಿಗಳು ಕಾಣಬಹುದು. ಈ ವಿಚಾರದಲ್ಲಿ ಫ್ಯಾನ್ಸ್ಗೆ ಸಾಕಷ್ಟು ಬೇಸರ ಇದೆ ಎಂಬುದು ಸತ್ಯ. ಇಂದು (ಜುಲೈ 16) ಅವರಿಗೆ ಜನ್ಮದಿನ. ಇಂದಾದರೂ ಕತ್ರಿನಾ ಕೈಫ್ (Katrina Kaif) ಹೊಸ ಸಿನಿಮಾ ಘೋಷಣೆ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕತ್ರಿನಾ ಕೈಫ್ ಅವರಿಗೆ ಈಗ 42 ವರ್ಷ ತುಂಬಿದೆ. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಮಿಂಚಿದ ಅವರು, ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. 2003ರಲ್ಲಿ ಬಂದ ‘ಬೂಮ್’ ಅವರ ನಟನೆಯ ಮೊದಲ ಸಿನಿಮಾ. ಆ ಬಳಿಕ ಅವರು ತೆಲುಗು, ಮಲಯಾಳಂ ಸಿನಿಮಾಗಳನ್ನು ಮಾಡಿದರು. ಆದರೆ, ಹಿಂದಿ ಚಿತ್ರರಂಗ ಅವರ ಕೈ ಹಿಡಿಯಿತು ಎನ್ನಬಹುದು.
‘ನಮಸ್ತೆ ಲಂಡನ್’ ಅವರಿಗೆ ಜನಪ್ರಿಯೆ ನೀಡಿತು. ಆ ಬಳಿಕ ‘ಪಾರ್ಟ್ನರ್’, ‘ವೆಲ್ಕಮ್’, ‘ರೇಸ್’, ‘ನ್ಯೂಯಾರ್ಕ್’, ‘ಜಿಂದಗಿ ನಾ ಮಿಲೇಗಿ ದೋಬಾರ’, ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೇ’ ರೀತಿಯ ಹಿಟ್ ಚಿತ್ರಗಳನ್ನು ನೀಡಿದರು. 2021ರಲ್ಲಿ ಅವರು ನಟಿಸಿದ ‘ಸೂರ್ಯವಂಶಿ’ ಸಿನಿಮಾ ಹಿಟ್ ಆಯಿತು.
2021ರಲ್ಲಿ ವಿಕ್ಕಿ ಕೌಶಲ್ ಜೊತೆ ಕತ್ರಿನಾ ವಿವಾಹ ಆಯಿತು. ಆ ಬಳಿಕ ಅವರು ಸಿನಿಮಾ ಮಾಡೋದು ಕಡಿಮೆ ಮಾಡಿದರು. ವಿವಾಹದ ಬಳಿಕ ‘ಫೋನ್ ಭೂತ್’, ‘ಟೈಗರ್ 3’ ಹಾಗೂ ‘ಮೇರಿ ಕ್ರಿಸ್ಮಸ್’ ಸಿನಿಮಾಗಳನ್ನು ಅವರು ಮಾಡಿದರು. ಈ ಮೂರು ಸಿನಿಮಾಗಳು ಸಾಧಾರಣ ಎನಿಸಿಕೊಂಡವು.
‘ಮೇರಿ ಕ್ರಿಸ್ಮಸ್’ ಬಂದಿದ್ದು 2024ರಲ್ಲಿ. ಇದಾದ ಬಳಿಕ ಕತ್ರಿನಾ ಕೈಫ್ ಕಡೆಯಿಂದ ಯಾವುದೇ ಹೊಸ ಸಿನಿಮಾ ಘೋಷಣೆ ಆಗಿಲ್ಲ. ಈ ವಿಚಾರದಲ್ಲಿ ಫ್ಯಾನ್ಸ್ಗೆ ಬೇಸರ ಇದೆ. ಇಂದು ಜನ್ಮದಿನದ ಪ್ರಯುಕ್ತ ಹೊಸ ಸಿನಿಮಾ ಘೋಷಣೆ ಆಗಲಿ ಎಂದು ಕಾಯುತ್ತಿದ್ದಾರೆ.
ಇದನ್ನೂ ಓದಿ: ಕತ್ರಿನಾ ಕೈಫ್ ಆರೋಗ್ಯದ ಗುಟ್ಟು ಈ ಹಣ್ಣಿನಲ್ಲಿದೆ, ಯಾವುದದು?
ಈ ಮಧ್ಯೆ ಕತ್ರಿನಾ ಕೈಫ್ ಕಡೆಯಿಂದ ಹೊಸ ಸುದ್ದಿ ಇದ್ದರೂ ಇರಬಹುದು ಎನ್ನಲಾಗುತ್ತಿದೆ. ವಿವಾಹ ಆಗಿ ನಾಲ್ಕು ವರ್ಷಗಳು ಕಳೆದಿವೆ. ಅಲ್ಲದೆ, ಕತ್ರಿನಾಗೆ ವಯಸ್ಸು ಮೀರುತ್ತಿದೆ. ಈ ಕಾರಣಕ್ಕೆ ಅವರು ಪ್ರೆಗ್ನೆಂಟ್ ಇರಬಹುದು, ಅದು ಗೊತ್ತಾಗಬಾರದು ಎಂದು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದೆ ಇರಬಹುದು ಎನ್ನಲಾಗುತ್ತಿದೆ. ಸಿನಿಮಾ ಘೋಷಿಸದೇ ಇರಲು ಇದೇ ಕಾರಣವೇ? ಗೊತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







