ಲಾಕ್ಡೌನ್ ಘೋಷಣೆ ಆದ ಕಾರಣಕ್ಕೆ ಕರ್ನಾಟಕದಲ್ಲಿ ಶೂಟಿಂಗ್ ಮಾಡುವಂತಿಲ್ಲ. ಹೀಗಾಗಿ ‘ಕನ್ನಡತಿ’ ಧಾರಾವಾಹಿ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿದೆ. ರಾಮೋಜಿ ಫಿಲ್ಮ್ ಸಿಟಿಗೆ ತೆರಳಿ ನಟಿ ರಂಜನಿ ರಾಘವನ್, ಕಿರಣ್ ರಾಜ್ ಮುಂತಾದವರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಇತ್ತೀಚೆಗೆ ಅವರು ಕನ್ನಡತಿ ಧಾರಾವಾಹಿ ತಂಡಕ್ಕೆ ಆದ ಭಯಾನಕ ಅನುಭವದ ಬಗ್ಗೆ ಹೇಳಿಕೊಂಡಿದ್ದರು. ವಾಹನ ತಡವಾಗುತ್ತದೆ ಎಂದು ಲಗೇಜ್ ಆಟೋದಲ್ಲಿ ಹೊರಟಿದ್ದ ಬಗ್ಗೆ ರಂಜನಿ ವಿವರಿಸಿದ್ದರು. ಆದರೆ, ಅವರು ಅರ್ಧಕ್ಕೆ ಕಥೆ ನಿಲ್ಲಿಸಿದ್ದರು. ಈಗ ರಂಜನಿ ಅದನ್ನು ಪೂರ್ಣಗೊಳಿಸಿದ್ದಾರೆ.
ಚಿತ್ರೀಕರಣ ಮುಗಿಸಿ ಹೋಗುವಾಗ ಲಗೇಜ್ ಆಟೋ ಹತ್ತಿ ರಂಜನಿ, ಕಿರಣ್ ಹೊರಟಿದ್ದರು. ಈ ವೇಳೆ ನಮಗೆ ತುಂಬಾನೇ ಭಯವಾಗುತ್ತಿದೆ ಎಂದು ಅವರು ಮೊದಲ ವಿಡಿಯೋದಲ್ಲಿ ವಿವರಿಸಿದ್ದರು. ಈಗ ಅದರ ಮುಂದುವರಿದ ಭಾಗದ ಬಗ್ಗೆ ರಂಜನಿ ಹೇಳಿಕೊಂಡಿದ್ದಾರೆ. ‘ಕತ್ತಲೆಯಲ್ಲಿ ಸುಮಾರು ಹದಿನೈದು ನಿಮಿಷ ಎದೆಬಡಿತ ಕಿವಿಗೆ ಕೇಳುವಷ್ಟು ಟೆನ್ಶನ್ನಲ್ಲಿ ಹೋಗ್ತಿರುವಾಗ ಮಧ್ಯೆ ಒಂದು ಕಡೆ ಗಾಡಿ ಸಡನ್ ಆಗಿ ನಿಂತಿತು. ‘ಬರ್ತೀನ್ ಸರ್ ಡ್ರೈವರ್ಗೆ 200 ರುಪಾಯಿ ಕೊಟ್ಬಿಡಿ’ ಎಂದು ಆ ಗಾಡಿಗೆ ಸಂಬಂಧಪಟ್ಟ ಕನ್ನಡದೋನು ಅದೇ, ಕುಡುಕ ಹೇಳಿ ಹೊರಟುಹೋದ. ಏನು ಆಗಲ್ಲ ಅನ್ನಿಸಿದ್ದು ಎಷ್ಟು ಸತ್ಯಾನೋ, ಅಕಸ್ಮಾತ್ ಆದ್ರೆ ಏನ್ ಮಾಡೋಕೂ ನಾವು ಸಿದ್ಧರಾಗಿರಲಿಲ್ಲ ಅನ್ನೋದೂ ಅಷ್ಟೇ ಸತ್ಯ’ ಎಂದು ರಂಜನಿ ಕಥೆ ಮುಂದುವರಿಸಿದ್ದಾರೆ.
‘ಇನ್ನೊಂದು ಹತ್ತು ನಿಮಿಷ ಅದೇ ದಾರೀಲಿ ಹೋಗ್ತಿರುವಾಗ ಸ್ಟ್ರೀಟ್ ಲೈಟ್ಗಳು ಕಾಣಿಸಿ, ನನ್ನೊಳಗೂ ಲೈಟ್ ಆನ್ ಆಯ್ತು. ಆ ಲಗೇಜ್ ಆಟೋ ನಮ್ಮ ಸೆಟ್ಗೆ ದಿನಾ ಪ್ರಾಪರ್ಟಿ ಸಾಗಿಸೋ ಗಾಡಿ ಆಗಿತ್ತಂತೆ. ಆ ಕನ್ನಡದೋನು ನಮ್ಮ ಸೆಟ್ ಹುಡುಗರಿಗೆ ಪರಿಚಯ. ನಾವಿಲ್ಲಿ ಶೂಟಿಂಗ್ ಮಾಡೋ ಅಷ್ಟು ದಿನ ಅವರಿಗೆ ನಮ್ಮವರ ಜೊತೆ ವ್ಯವಹಾರ ಇರುತ್ತದೆ. ಹಾಗೆಲ್ಲ ನಮಗೆ ಏನೂ ತೊಂದರೆ ಮಾಡೋಕಾಗಲ್ಲ ಎಂದು ಕಿರಣ್ ಆಮೇಲೆ ಹೇಳಿದ್ರು’ ಎಂದು ನಿಟ್ಟುಸಿರು ಬಿಟ್ಟರು ರಂಜನಿ.
‘ಆದರೂ ಆ ಒಂಟಿ ರೋಡ್ನಲ್ಲಿ ಹಾಗೆ ಹೋಗಿದ್ದರ ಭಯ ಮಾತ್ರ ಕೇಳ್ಬೇಡಿ. ಒಟ್ಟಿನಲ್ಲಿ ನಾವು ನಮ್ಮ ಹೋಟೆಲ್ ಸುರಕ್ಷಿತವಾಗಿ ತಲುಪಿದ್ವಿ. ದುಡುಕಿ ಏನನ್ನೂ ಮಾಡ್ಬಾರ್ದು, ರಿಸ್ಕ್ ತೊಗೊಂಡ್ರೂ ಕ್ಯಾಲ್ಕುಲೇಟೆಡ್ ರಿಸ್ಕ್ ತಗೋಬೇಕು ಅನ್ನೋದು ಈ ಕತೆಯ ನೀತಿ ಪಾಠ’ ಎಂದು ಪೋಸ್ಟ್ ಕೊನೆಗೊಳಿಸಿದ್ದಾರೆ ಅವರು.
ಇದನ್ನೂ ಓದಿ: ‘ಕನ್ನಡತಿ’ ತಂಡಕ್ಕೆ ರಾತ್ರಿ ಭಯಾನಕ ಅನುಭವ; ವಿಡಿಯೋ ಸಮೇತ ವಿವರಿಸಿದ ಭುವಿ