ಸದಾ ಕಾಲ ಶೂಟಿಂಗ್, ಡಬ್ಬಿಂಗ್, ರಿಹರ್ಸಲ್ ಎಂದು ಮನೆಯಿಂದ ಹೊರಗಡೆಯೇ ಇರುತ್ತಿದ್ದ ಸೆಲೆಬ್ರಿಟಿಗಳೆಲ್ಲ ಈಗ ಸಿನಿಮಾ-ಸೀರಿಯಲ್ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ ಮನೆಯಲ್ಲೇ ಇದ್ದಾರೆ. ಲಾಕ್ಡೌನ್ನಿಂದಾಗಿ ಅವರಿಗೆ ಕುಟುಂಬದವರ ಜೊತೆ ಕಾಲ ಕಳೆಯಲು ಸಮಯ ಸಿಕ್ಕಿದೆ. ಸ್ವಂತಕ್ಕಾಗಿ ಒಂದಷ್ಟು ಸಮಯ ಮೀಸಲಿಡಲು ಸಾಧ್ಯವಾಗುತ್ತಿದೆ. ಜನಪ್ರಿಯ ‘ಕನ್ನಡತಿ’ ಧಾರಾವಾಹಿ ನಟಿ ರಂಜನಿ ರಾಘವನ್ ಈ ಸಂದರ್ಭವನ್ನು ತುಂಬ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಆ ಬಗ್ಗೆ ಅವರು ಟಿವಿ9 ಜೊತೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಹೇಗೆ ಸಾಗುತ್ತಿದೆ ನಿಮ್ಮ ಲಾಕ್ಡೌನ್?
ಲಾಕ್ಡೌನ್ಗೆ ಹೇಗೆ ಹೊಂದಿಕೊಳ್ಳಬೇಕು ಅನ್ನೋದು ಕಳೆದ ವರ್ಷವೇ ಗೊತ್ತಾಗಿತ್ತು. ಹಾಗಾಗಿ ಈ ವರ್ಷ ಬೇಗ ಹೊಂದಿಕೊಂಡೆ. ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳುವುದು. ನಾವು ಯಾರ ಮೇಲೂ ಅವಲಂಬಿಸಿರಬಾರದು. ಇದೇ ರಿಯಾಲಿಟಿ ಅನಿಸುತ್ತೆ. ಈ ನಡುವೆ ಸಣ್ಣ ಕಥೆಗಳನ್ನು ಬರೆಯುತ್ತಿದ್ದೇನೆ. ಬರವಣಿಗೆ ಅಭ್ಯಾಸ ಆಗಲಿ ಎಂದು ಅದಕ್ಕಾಗಿ ಸಮಯ ಕೊಡುತ್ತಿದ್ದೇನೆ. ಇತ್ತೀಚೆಗೆ ಮ್ಯಾಗಜಿನ್ವೊಂದರಲ್ಲಿ ನನ್ನ ಒಂದು ಕಥೆ ಪ್ರಕಟ ಆಗಿತ್ತು. ಅದಕ್ಕೆ ಒಳ್ಳೆಯ ಸೆನ್ಪಾನ್ಸ್ ಬಂದ ಬಳಿಕ ಬರವಣಿಗೆ ಮುಂದುವರಿಸವೇಕು ಎನಿಸಿತು. ಚಿತ್ರಕತೆ ಬರವಣಿಗೆ ನನಗೆ ಇಷ್ಟ. ಸಣ್ಣ ಕಥೆಗಳ ಬರವಣಿಗೆಯಿಂದ ಒಂದು ಹಿಡಿತ ಬರುತ್ತದೆ. ವಾರಕ್ಕೆ ಒಂದು ಕಥೆ ಬರೆಯುತ್ತಿದ್ದೇನೆ. ನಂತರ ಎಲ್ಲ ಸೇರಿ ಒಂದು ಪುಸ್ತಕ ಮಾಡಬೇಕು ಎಂಬ ಗುರಿ ಇದೆ.
ಹಾಗಾದರೆ, ನಟನೆ ಮತ್ತು ಬರವಣಿಗೆ ಈ ಎರಡರ ನಡುವೆ ನೀವು ಕಂಡುಕೊಂಡ ವ್ಯತ್ಯಾಸ?
ಕಥೆ ಎಲ್ಲದಕ್ಕೂ ಮುಖ್ಯ. ಭವಿಷ್ಯದಲ್ಲಿ ಅದಕ್ಕೆ ತುಂಬ ಬೆಲೆ ಬರುತ್ತದೆ. ಬೇರೆಯವರು ಅವಕಾಶ ಕೊಟ್ಟರೆ ಮಾತ್ರ ನಾವು ನಟನೆ ಮಾಡಬಹುದು. ಆದರೆ ಬರವಣಿಗೆ ಹಾಗಲ್ಲ, ನಮ್ಮ ಸ್ವಂತವಾಗಿ ಮಾಡಬಹುದು. ಇನ್ನೊಬ್ಬರು ಅವಕಾಶ ಕೊಡುವ ಕೆಲಸಗಳ ಮೇಲೆ ನಾವು ಅಷ್ಟಾಗಿ ನಂಬಿಕೊಂಡು ಕೂರಬಾರದು. ನಾವಾಗಿಯೇ ಏನಾದರೂ ಮಾಡುವ ರೀತಿಯಲ್ಲಿ ನಮ್ಮ ಸಮಯ ಮತ್ತು ಶಕ್ತಿಯನ್ನು ವಿನಿಯೋಗ ಮಾಡಿದರೆ ಅದು ಆದಷ್ಟು ಬೇಗ ಫಲ ಕೊಡುತ್ತದೆ.
ಲಾಕ್ಡೌನ್ನಿಂದ ಕನ್ನಡತಿ ಧಾರಾವಾಹಿ ಪರಿಸ್ಥಿತಿ ಏನಾಗಿದೆ?
ಈ ಮೊದಲೇ ಚಿತ್ರೀಕರಣ ಮಾಡಿಟ್ಟುಕೊಂಡಿರುವ ಒಂದಷ್ಟು ಎಪಿಸೋಡ್ಗಳು ಇವೆ. ಅದನ್ನೇ ಪ್ರಸಾರ ಮಾಡಲಾಗುತ್ತಿದೆ. ಮೇ 24ರವರೆಗೆ ಏನೂ ತೊಂದರೆ ಇಲ್ಲ ಎನಿಸುತ್ತದೆ. ಒಂದು ವೇಳೆ ಮತ್ತೆ ಲಾಕ್ಡೌನ್ ಮುಂದುವರಿದರೆ ಹಳೇ ಎಪಿಸೋಡ್ಗಳನ್ನು ಮರುಪ್ರಸಾರ ಮಾಡುವುದು ಅನಿವಾರ್ಯ ಆಗುತ್ತದೆ. ಜನರ ಮನಸ್ಸಿನಲ್ಲಿ ಕನ್ನಡತಿ ಬಗ್ಗೆ ಒಂದು ಕ್ರೇಜ್ ಸೃಷ್ಟಿ ಆಗಿದೆ. ಗ್ಯಾಪ್ ಆಗಿ ಬಿಟ್ಟರೆ ಮತ್ತೆ ಆ ಕ್ರೇಜ್ ಸೃಷ್ಟಿ ಮಾಡುವುದು ಕಷ್ಟ. ಇದು ನಮ್ಮ ಧಾರಾವಾಹಿಗೆ ಮಾತ್ರವಲ್ಲ, ಎಲ್ಲ ಪ್ರಾಜೆಕ್ಟ್ಗಳಿಗೂ ಹೀಗೆ ಆಗುತ್ತದೆ.
ಲಾಕ್ಡೌನ್ನಿಂದ ನಿಮ್ಮ ಸಿನಿಮಾ ಪಯಣಕ್ಕೂ ತೊಂದರೆ ಆಗಿದೆ ಅಲ್ಲವೇ?
ಹೌದು, ನನ್ನ ಮೂರು ಸಿನಿಮಾಗಳು ಇವೆ. ಲಾಕ್ಡೌನ್ನಿಂದಾಗಿ ಕಳೆದ ವರ್ಷದಿಂದಲೂ ‘ಟಕ್ಕರ್’ ಸಿನಿಮಾ ಬಿಡುಗಡೆ ತಡವಾಗುತ್ತ ಬಂದಿದೆ. ದಿಗಂತ್ ಜೊತೆ ನಟಿಸಿರುವ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ ಕೂಡ ಈ ವರ್ಷ ಬಿಡುಗಡೆ ಆಗುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಐದು ನಿರ್ದೇಶಕರು ಸೇರಿ ಮಾಡುತ್ತಿರುವ ಒಂದು ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಅದರ ಕೆಲಸಗಳು ಕೂಡ ಲಾಕ್ಡೌನ್ನಿಂದ ತಡವಾಗುತ್ತಿದೆ.
ಫಿಟ್ನೆಸ್ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡುತ್ತಿದ್ದೀರಿ?
ಮನೆ ಎದುರಿನ ರಸ್ತೆಯಲ್ಲೇ ಬೆಳಗ್ಗೆ 5.30ರಿಂದ 6 ಗಂಟೆವರೆಗೆ ಓಡುತ್ತೇನೆ. ದಿನ ಅದನ್ನೇ ಅಭ್ಯಾಸ ಮಾಡಿಕೊಂಡಿದ್ದೇನೆ. ಜೊತೆಗೆ ಸಣ್ಣ ಪುಟ್ಟ ವ್ಯಾಯಾಮ ಮಾಡುತ್ತಿದ್ದೇನೆ. ಮನೆಯಲ್ಲಿ ಒಂದೇ ಕಡೆ ಕೂತಿರುವುದು ಆರೋಗ್ಯಕರ ಅಲ್ಲ. ಹಾಗಾಗಿ ವ್ಯಾಯಾಮ ತುಂಬ ಮುಖ್ಯ. ಮನೆ ಕೆಲಸ ಮಾಡಿದರೂ ಅದು ವ್ಯಯಾಮ ಆಗುತ್ತದೆ. ಮಧ್ಯಾಹ್ನ ಮಾತ್ರ ಊಟ ಮಾಡುತ್ತೇನೆ. ಬೆಳಗ್ಗೆ ಮತ್ತು ರಾತ್ರಿ ಹಣ್ಣು, ತರಕಾರಿ ತಿನ್ನುತ್ತೇನೆ. 2019ರ ಬಳಿಕ ಜಿಮ್ಗೆ ಕೂಡ ನಾನು ಹೋಗುತ್ತಿಲ್ಲ.
ಕಳೆದ ವರ್ಷ ಲಾಕ್ಡೌನ್ನಲ್ಲಿ ತುಂಬ ಸೆಲೆಬ್ರಿಟಿಗಳು ಆತ್ಮಹತ್ಯೆ ಮಾಡಿಕೊಂಡರು. ಈ ಸಮಯದಲ್ಲಿ ಮಾನಸಿಕ ಆರೋಗ್ಯ ಮುಖ್ಯ. ಅದರ ಬಗ್ಗೆ ಏನು ಹೇಳುತ್ತೀರಿ?
ಯಾವುದೇ ಕಷ್ಟ ಬಂದರೂ ಇದು ನಮಗೆ ಮಾತ್ರ ಬಂದಿರುವುದಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಜಗತ್ತಿನಲ್ಲಿ ಎಲ್ಲರಿಗೂ ಈ ಕಷ್ಟ ಬಂದಿದೆ. ಅಭದ್ರತೆ, ಅನಿಶ್ಚಿತತೆ ಎಲ್ಲ ವಲಯದಲ್ಲೂ ಶುರು ಆಗಿದೆ. ದೊಡ್ಡ ಉದ್ಯಮದಿಂದ ಸಣ್ಣ ವ್ಯಾಪಾರಿಗಳವರೆಗೆ ಎಲ್ಲರೂ ಕಷ್ಟದಲ್ಲಿ ಇದ್ದಾರೆ. ಆದರೆ ಯಾವ ಕಷ್ಟವೂ ಶಾಶ್ವತ ಅಲ್ಲ. ನಾವು ಕುಗ್ಗಬೇಕಾಗಿಲ್ಲ. ಈ ಕಷ್ಟದ ಸಂದರ್ಭ ಖಂಡಿತ ಕಳೆದು ಹೋಗುತ್ತದೆ.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ನಿಮ್ಮ ಸಲಹೆ ಏನು?
ಎಲ್ಲರಿಗೂ ಚಿಕ್ಕವಯಸ್ಸಿನಿಂದ ಒಂದು ಹವ್ಯಾಸ ಇದ್ದೇ ಇರುತ್ತದೆ. ಬರವಣಿಗೆ, ನೃತ್ಯ, ಚಿತ್ರಕಲೆ, ಹಾಡುಗಾರಿಕೆ ಏನಾದರೊಂದು ಇರುತ್ತದೆ. ಅದರ ಬಗ್ಗೆ ಗಮನ ಕೊಡಬೇಕು. ಅದು ನಮಗೆ ಸಮಾಧಾನ ನೀಡುತ್ತದೆ. ಪುಸ್ತಕ ಓದಿದರೆ, ಸಿನಿಮಾ ನೋಡುತ್ತಿದ್ದರೆ ರಿಲ್ಯಾಕ್ಸ್ ಎನಿಸುತ್ತದೆ.
ಇದನ್ನೂ ಓದಿ:
Ranjani Raghavan: ‘ಕನ್ನಡತಿ’ ಧಾರಾವಾಹಿ ನಟಿ ರಂಜನಿ ರಾಘವನ್ ಫೇಸ್ಬುಕ್ ಹ್ಯಾಕ್; ಯಾರ ಮೇಲಿದೆ ಅನುಮಾನ?
Kiran Raj: ಕೊರೊನಾ ಸಂಕಷ್ಟದಲ್ಲಿ ಪ್ರತಿದಿನ ಸಾವಿರ ಜನರಿಗೆ ಊಟ ಹಾಕುತ್ತಿರುವ ‘ಕನ್ನಡತಿ’ ಕಿರಣ್ ರಾಜ್
Published On - 11:59 am, Fri, 14 May 21