Kantara: ‘ಕಾಂತಾರ 2’ ಚಿತ್ರಕ್ಕೆ ವೀರೇಂದ್ರ ಹೆಗ್ಗಡೆಯವರ ಅನುಮತಿಯೂ ಬೇಕು ಎಂದ ದೈವ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 12, 2022 | 9:56 PM

‘ಕಾಂತಾರ 2’ ಸಿನಿಮಾ ಮಾಡುವ ಬಗ್ಗೆ ಅನುಮತಿಯನ್ನು ಕೇಳಲಾಗಿದೆ. ಈ ಕಾರ್ಯದಲ್ಲಿ ಮುಂದುವರಿಯಬಹುದು ಎಂದು ದೈವದ ಅನುಮತಿ ಸಿಕ್ಕಿದೆ.

Kantara: ಕಾಂತಾರ 2 ಚಿತ್ರಕ್ಕೆ ವೀರೇಂದ್ರ ಹೆಗ್ಗಡೆಯವರ ಅನುಮತಿಯೂ ಬೇಕು ಎಂದ ದೈವ
Kantara
Follow us on

ರಿಷಬ್​ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ (Kantara Movie) ಚಿತ್ರ ದೇಶಾದ್ಯಂತ ಸಂಚಲನ ಮೂಡಿಸಿದೆ. ಹಲವು ಭಾಷೆಗಳಲ್ಲಿ ಮಾತ್ರವಲ್ಲದೆ, ಗಡಿಯನ್ನೂ ಮೀರಿ ‘ಕಾಂತಾರ’ ಚಿತ್ರ ಸೂಪರ್​ ಹಿಟ್​ ಆಗಿದೆ. ‘ಕಾಂತಾರ’ ನೋಡಿದ ಪ್ರತಿ ಸೆಲೆಬ್ರೆಟಿಗಳು ಕೂಡ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ‘ಕಾಂತಾರ’ ಚಿತ್ರ ಸಕ್ಸಸ್ ಆದ ಬಳಿಕ ರಿಷಬ್ ಶೆಟ್ಟಿ ‘ಕಾಂತಾರ 2’ ಮಾಡುತ್ತಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಇದಕ್ಕೆ ಪೂರಕವೆಂಬಂತೆ ರಿಷಬ್​ ಶೆಟ್ಟಿ ಅವರು ಇತ್ತೀಚೆಗೆ ನಡೆದ ದೈವ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ‘ಕಾಂತಾರ 2’ ಬಗ್ಗೆ ರಿಷಬ್​ ಶೆಟ್ಟಿ ಅವರು ದೈವದ ಮುಂದೆ ಪ್ರಶ್ನೆಯಿಟ್ಟಿದ್ದಾರೆ. ಈ ವೇಳೆ ದೈವದ ಅನುಮತಿ ಸಿಕ್ಕಿದೆ. ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆ ಅವರ ಅನುಮತಿಯನ್ನು ಸಹ ಪಡೆಯಲು ದೈವ ತಿಳಿಸಿದೆ ಎನ್ನುವುದು ವಿಶೇಷ.

ಇದನ್ನೂ ಓದಿ: Hrithik Roshan: ‘ಕಾಂತಾರ ಕ್ಲೈಮ್ಯಾಕ್ಸ್​ ನೋಡಿ ರೋಮಾಂಚನ ಆಯ್ತು’; ರಿಷಬ್​ ಶೆಟ್ಟಿ ಚಿತ್ರಕ್ಕೆ ಹೃತಿಕ್​ ರೋಷನ್​ ಮೆಚ್ಚುಗೆ

ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಕಾಂತಾರಚಿತ್ರತಂಡ ಇತ್ತೀಚೆಗೆ ನೇಮೋತ್ಸವ ನೀಡಿದೆ. ಈ ಸಂದರ್ಭದಲ್ಲಿ ‘ಕಾಂತಾರ 2’ (Kantara 2) ಸಿನಿಮಾ ಮಾಡುವ ಬಗ್ಗೆ ಅನುಮತಿಯನ್ನು ಕೇಳಲಾಗಿದೆ. ಈ ಕಾರ್ಯದಲ್ಲಿ ಮುಂದುವರಿಯಬಹುದು ಎಂದು ದೈವದ ಅನುಮತಿ ಸಿಕ್ಕಿದೆ. ಜೊತೆಗೆ ಕೆಲವು ಷರತ್ತುಗಳನ್ನು, ಎಚ್ಚರಿಕೆಯನ್ನು ದೈವ ನೀಡಿದೆ ಎನ್ನಲಾಗಿದೆ. ಮೊದಲು ಚಿತ್ರ ಮಾಡುವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ ಹೆಜ್ಜೆ ಇಡಿ ಎಂದು ಅಣ್ಣಪ್ಪ ಪಂಜುರ್ಲಿ ದೈವ ತಿಳಿಸಿದೆ.

ಇದನ್ನೂ ಓದಿ: Kantara 2: ಅಣ್ಣಪ್ಪ ಪಂಜುರ್ಲಿ ಬಳಿ ‘ಕಾಂತಾರ 2’ ಬಗ್ಗೆ ರಿಷಬ್​ ಶೆಟ್ಟಿ ಕೇಳಿದ್ದೇನು? ಎಲ್ಲವನ್ನೂ ವಿವರಿಸಿದ ದೈವ ನರ್ತಕರು

‘ಕಾಂತಾರ 2’ ಈ ಕುರಿತು ದೈವ ನರ್ತಕರಾದ ಉಮೇಶ್​ ಅವರು ಟಿವಿ9 ಜೊತೆಗೆ ಒಂದಷ್ಟು ಕುತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಕಾಂತಾರ 2’ ಬಗ್ಗೆ ರಿಷಬ್​ ಶೆಟ್ಟಿ ಅವರು ದೈವದ ಬಳಿ ಕೇಳಿದ್ದು, ಅದಕ್ಕೂ ಮೊದಲು ಧರ್ಮಸ್ಥಳ ಮಂಜುನಾಥೇಶ್ವರನ ಅನುಮತಿ ಕೇಳಲು ದೈವ ತಿಳಿಸಿದೆ. ಜೊತೆಗೆ ಕಾಂತಾರದಲ್ಲಿ ಕೆಲಸ ಮಾಡಿದ ಅದೇ ತಂಡದೊಂದಿಗೆ ಅಷ್ಟೇ  ಶುದ್ಧಾಚಾರದಿಂದ ಮುಂದುವರೆಯಿರಿ ಎಂದು ಅಣ್ಣಪ್ಪ ಪಂಜುರ್ಲಿ ದೈವ ಹೇಳಿರುವುದಾಗಿ ಭಕ್ತರು ಹೇಳಿದ್ದಾರೆಂದು ಉಮೇಶ್ ಅವರು ತಿಳಿಸಿದರು.

‘ಕಾಂತಾರ’ ಮೊದಲ ಭಾಗದಲ್ಲಿ ಒಳ್ಳೆಯದು ಆಗಿದೆ, ಕೆಲ ಅಪವಾದವೂ ಬಂದಿದೆ. ಆದರೆ ಈ ಬಾರಿ ಮಾತ್ರ ನೂರು ಯೋಚನೆ ಮಾಡಿ ಹೆಜ್ಜೆ ಇಡಿ. ಆಚಾರ ವಿಚಾರಗಳ ಜೊತೆಗೆ ಧರ್ಮದ ಪ್ರಕಾರ ಹೋಗಲು ದೈವ ಹೇಳಿದೆ. ‘ಕಾಂತಾರ 2’ ಮಾಡುವ ಮುನ್ನ ಖಾವಂದರ ಬಳಿ ಅನುಮತಿ ಕೇಳಲು ದೈವ ಅಪ್ಪಣೆ ‌ಕೊಟ್ಟಿದೆ ಎಂದು ಅವರು ಹೇಳಿದರು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.