ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ (Karan Johar) ಅವರು ಕೇವಲ ಬಾಲಿವುಡ್ನಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಸ್ನೇಹಿತರನ್ನು ಹೊಂದಿದ್ದಾರೆ. ಈಗ ಅವರು ಜೂನಿಯರ್ ಎನ್ಟಿಆರ್ (Jr NTR) ಜೊತೆ ಕೈ ಜೋಡಿಸಿದ್ದಾರೆ. ಅಂದರೆ, ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ (Devara) ಸಿನಿಮಾವನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲು ಕರಣ್ ಜೋಹರ್ ಮುಂದೆ ಬಂದಿದ್ದಾರೆ. ಉತ್ತರ ಭಾರತದ ವಿತರಣೆ ಹಕ್ಕನ್ನು ಅವರು ಖರೀದಿಸಿದ್ದಾರೆ. ಆ ಮೂಲಕ ಅದ್ದೂರಿಯಾಗಿ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಲಾಗಿದೆ. ಈ ಸಿನಿಮಾ ಮೇಲೆ ಜೂನಿಯರ್ ಎನ್ಟಿಆರ್ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ.
‘ಯುವಸುಧಾ ಆರ್ಟ್ಸ್’ ಮತ್ತು ‘ಎನ್ಟಿಆರ್ ಆರ್ಟ್ಸ್’ ಸಂಸ್ಥೆಗಳ ಮೂಲಕ ‘ದೇವರ’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಂಸ್ಥೆಗಳ ಜೊತೆ ಕರಣ್ ಜೋಹರ್ ಅವರು ವ್ಯವಹಾರ ಕುದುರಿಸಿದ್ದಾರೆ. ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದಾರೆ. ‘ಜೂನಿಯರ್ ಎನ್ಟಿಆರ್ ಅಭಿನಯದ ‘ದೇವರ’ ಸಿನಿಮಾದ ಭಾಗವಾಗಲು ಸಂತೋಷವಾಗುತ್ತಿದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಕರಣ್ ಜೋಹರ್ ಅವರು ತಮ್ಮ ಒಡೆತನದ ‘ಧರ್ಮ ಪ್ರೊಡಕ್ಷನ್ಸ್’ ಮೂಲಕ ಈ ಮೊದಲು ‘ಬಾಹುಬಲಿ 1’ ಸಿನಿಮಾವನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಿದ್ದರು. ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿ ಮಾತ್ರವಲ್ಲದೇ ವಿತರಕನಾಗಿಯೂ ಅವರು ಅನುಭವ ಹೊಂದಿದ್ದಾರೆ. ‘ದೇವರ’ ಸಿನಿಮಾದಿಂದ ಅವರು ದೊಡ್ಡ ಮಟ್ಟದ ಲಾಭ ಕಾಣುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: ಅವಾರ್ಡ್ ಫಂಕ್ಷನ್ನಲ್ಲಿ ಕರಣ್ ಜೋಹರ್ ವಿರುದ್ಧ ಕೂಗಾಡಿದ ರಣಬೀರ್ ಕಪೂರ್; ವಿಡಿಯೋ ವೈರಲ್
ಕೊರಟಾಲ ಶಿವ ಅವರು ‘ದೇವರ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಜೂನಿಯರ್ ಎನ್ಟಿಆರ್ ಅವರು ಈ ಸಿನಿಮಾ ಮೇಲೆ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ವೇದಿಕೆಯೊಂದರಲ್ಲಿ ಮಾತನಾಡಿದ್ದ ಅವರು, ‘ಇದು ನಿಮ್ಮೆಲ್ಲರಿಗೂ ಹೆಮ್ಮೆ ತರುವ ಸಿನಿಮಾ’ ಎಂದು ಅಭಿಮಾನಿಗಳಿಗೆ ಹೇಳಿದ್ದರು. ಈ ಎಲ್ಲ ಕಾರಣಗಳಿಂದಾಗಿ ‘ದೇವರ’ ಚಿತ್ರದ ಮೇಲೆ ಹೈಪ್ ಹೆಚ್ಚಾಗಿದೆ. ಅಕ್ಟೋಬರ್ 10ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.