ಕಾರ್ತಿಕ್ ಸುಬ್ಬರಾಜು ಜೊತೆ ಕೈ ಜೋಡಿಸಿದ ಸೂರ್ಯ

Suriya: ತಮಿಳಿನ ಸ್ಟಾರ್ ನಟ ಸೂರ್ಯ, ತಮಿಳಿನ ಪ್ರತಿಭಾವಂತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಜೊತೆ ಕೈ ಜೋಡಿಸಿದ್ದಾರೆ. ಹೊಸ ಸಿನಿಮಾ ಒಂದಕ್ಕಾಗಿ ಈ ಜೋಡಿ ಒಂದಾಗಿದೆ.

ಕಾರ್ತಿಕ್ ಸುಬ್ಬರಾಜು ಜೊತೆ ಕೈ ಜೋಡಿಸಿದ ಸೂರ್ಯ
ಕಾರ್ತಿಕ್-ಸೂರ್ಯ

Updated on: Mar 29, 2024 | 9:58 AM

ತಮಿಳಿನಲ್ಲಿ ಭಿನ್ನ ಮಾರಿ ಸಿನಿಮಾಗಳನ್ನು ಕಟ್ಟಿಕೊಡುತ್ತಿರುವ ಕಾರ್ತಿಕ್ ಸುಬ್ಬರಾಜು (Karthik Subbaraju), ಇತ್ತೀಚೆಗಷ್ಟೆ ‘ಜಿಗರ್ ಥಂಡಾ 2’ ಸಿನಿಮಾ ಮೂಲಕ ಗಮನ ಸೆಳೆದಿದ್ದಾರೆ. ಸಿನಿಮಾದ ಶಕ್ತಿಯನ್ನು ಸಿನಿಮಾ ಮೂಲಕವೇ ಹೇಳುವ ಆ ಸಿನಿಮಾದಲ್ಲಿ ಲಾರೆನ್ಸ್ ಹಾಗೂ ಎಸ್​ಜೆ ಸೂರ್ಯ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಹಿಂದೆ ರಜನೀಕಾಂತ್, ಧನುಶ್, ಚಿಯಾನ್ ವಿಕ್ರಂ ಅಂಥಹಾ ಸ್ಟಾರ್​ಗಳೊಟ್ಟಿಗೆ ಕೆಲಸ ಮಾಡಿರುವ ಕಾರ್ತಿಕ್ ಸುಬ್ಬರಾಜು ಇದೀಗ ಮತ್ತೊಬ್ಬ ತಮಿಳು ಸ್ಟಾರ್ ನಟನೊಟ್ಟಿಗೆ ಕೈಜೋಡಿಸಿದ್ದಾರೆ. ಅದುವೇ ಸೂರ್ಯ.

ನಟ ಸೂರ್ಯ ಸಹ, ವಾರಗೆಯ ಸೂಪರ್ ಸ್ಟಾರ್​ಗಳಿಗಿಂತಲೂ ಭಿನ್ನವಾದ ಹಾದಿಯನ್ನು ಕತೆ ಆಯ್ಕೆಯ ವಿಷಯದಲ್ಲಿ ಹಿಡಿಸಿದ್ದಾರೆ. ‘ವಿಕ್ರಂ’ ಸಿನಿಮಾನಲ್ಲಿ ವಿಲನ್ ಆಗಿ ಮಿಂಚಿದ್ದರು. ಅದಕ್ಕೆ ಮುನ್ನ ಬಂದಿದ್ದ ‘ಜೈ ಭೀಮ್’ನಲ್ಲಿ ಫೈಟ್​, ಹಾಡುಗಳಿಲ್ಲದ, ಅನ್ಯಾಯದ ವಿರುದ್ಧ ಹೋರಾಡುವ ನಾಯಕನ ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ಕಾರ್ತಿಕ್ ಸುಬ್ಬರಾಜು ಜೊತೆ ಕೈಜೋಡಿಸುವ ಮೂಲಕ ಮತ್ತೊಂದು ಭಿನ್ನ ಕತೆಯನ್ನು ಆಯ್ಕೆ ಮಾಡಿಕೊಂಡಂತಿದೆ ಸೂರ್ಯ.

ಸಿನಿಮಾದ ಮೊದಲ ಪೋಸ್ಟರ್ ಇದೀಗ ಬಿಡುಗಡೆ ಆಗಿದ್ದು, ಪೋಸ್ಟರ್ ನೋಡಿದರೆ ಇದೊಂದು ರೆಟ್ರೋ ಸಿನಿಮಾ ಇರಬಹುದೆನ್ನುವ ಅನುಮಾನ ಮೂಡುತ್ತಿದೆ. ಸಿನಿಮಾದ ಹೆಸರು ಘೋಷಣೆ ಮಾಡಿಲ್ಲವಾದರೂ, ‘ಲವ್, ಲಾಫ್ಟರ್, ವಾರ್’ ಎಂಬ ಅಡಿಬರಹ ಪೋಸ್ಟರ್​ನಲ್ಲಿದೆ. ಆ ಮೂಲಕ ಇದೊಂದು ಹಾಸ್ಯ ಮಿಶ್ರಿತ ಪ್ರೇಮಕತೆ ಜೊತೆಗೆ ಆಕ್ಷನ್ ಸಹ ಭರಪೂರವಾಗಿ ಇರಲಿದೆ ಎಂಬ ಸುಳಿವು ನೀಡುತ್ತಿದೆ.

ಇದನ್ನೂ ಓದಿ:ಈ ವರ್ಷ ಕರಣ್ ಜೋಹರ್ ನೋಡಿದ ಅತ್ಯುತ್ತಮ ಸಿನಿಮಾ ಕನ್ನಡದ್ದು, ಯಾವುದು ಗೊತ್ತೆ?

ಸೂರ್ಯ ಇದೀಗ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹು ಬಜೆಟ್​ನ ಪ್ಯಾನ್ ಇಂಡಿಯಾ ಸಿನಿಮಾ ‘ಕಂಗುವ’ ಸಿನಿಮಾದ ಚಿತ್ರೀಕರಣದಲ್ಲಿ ಸೂರ್ಯ ತೊಡಗಿಸಿಕೊಂಡಿದ್ದಾರೆ. ಅದರ ಜೊತೆಗೆ ವೆಟ್ರಿಮಾರನ್ ನಿರ್ದೇಶನದ ‘ವಡಿವಾಸಿ’ ಸಿನಿಮಾನಲ್ಲಿಯೂ ಸೂರ್ಯ ನಟಿಸಲಿದ್ದಾರೆ. ಆದರೆ ಈ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ‘ವಡಿವಾಸಿ’ ಚಿತ್ರೀಕರಣ ಮತ್ತೆ ಯಾವಾಗ ಪ್ರಾರಂಭವಾಗುತ್ತದೆಯೋ ತಿಳಿದು ಬಂದಿಲ್ಲ.

ಕಾರ್ತಿಕ್ ಸುಬ್ಬರಾಜು ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ಈಗಾಗಲೇ ಹಲವು ಉತ್ತಮ ಸಿನಿಮಾಗಳನ್ನು ಅವರು ನೀಡಿದ್ದಾರೆ.‘ಪಿಜ್ಜಾ’, ‘ಜಿಗರ್ ಥಂಡಾ’, ರಜನೀಕಾಂತ್ ನಟನೆಯ ‘ಪೆಟ್ಟಾ’, ಚಿಯಾನ್ ವಿಕ್ರಂ ನಟನೆಯ ‘ಮಹಾನ್’, ಧನುಶ್ ನಟನೆಯ ‘ಜಗಮೇ ತಂದಿರಮ್’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ರಾಮ್ ಚರಣ್ ನಟಿಸಿ ಶಂಕರ್ ನಿರ್ದೇಶನ ಮಾಡುತ್ತಿರುವ ‘ಗೇಮ್ ಚೇಂಜರ್’ ಸಿನಿಮಾಕ್ಕೆ ಅವರೇ ಕತೆ ಬರೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ