ಈ ವರ್ಷ ಕರಣ್ ಜೋಹರ್ ನೋಡಿದ ಅತ್ಯುತ್ತಮ ಸಿನಿಮಾ ಕನ್ನಡದ್ದು, ಯಾವುದು ಗೊತ್ತೆ?
Karan Johar: ಕರಣ್ ಜೋಹರ್ ಈ ವರ್ಷ ಹಲವು ಭಾಷೆಯ, ಹಲವು ಸಿನಿಮಾ ನಿರ್ದೇಶಕರ ಸಿನಿಮಾಗಳನ್ನು ನೋಡಿದ್ದಾರೆ ಆದರೆ ಅವರಿಗೆ ಬಹಳ ಇಷ್ಟವಾಗಿದ್ದು ಕನ್ನಡದ ಸಿನಿಮಾ! ಯಾವುದದು?
ಕರಣ್ ಜೋಹರ್ (Karan Johar) ಬಾಲಿವುಡ್ನ ಸ್ಟಾರ್ ನಿರ್ದೇಶಕ, ನಿರ್ಮಾಪಕ ಮತ್ತು ಪಾರ್ಟ್ಟೈಂ ನಟ ಸಹ. ಕರಣ್ ಜೋಹರ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಸ್ಟಾರ್ ನಟರೇ ಸಾಲುಗಟ್ಟುತ್ತಾರೆ. ಅವರ ನಿರ್ಮಾಣ ಸಂಸ್ಥೆಯ ಸಿನಿಮಾ ಮೂಲಕ ಲಾಂಚ್ ಆಗಲು ಯುವ ಪೀಳಿಗೆಯ ನಟ-ನಟಿಯರು ಕಾಯುತ್ತಿದ್ದಾರೆ. ಅಪಾರ ಅನುಭವವುಳ್ಳ ಕರಣ್ ಜೋಹರ್, ದಕ್ಷಿಣದ ಸಿನಿಮಾಗಳನ್ನು ಬಾಲಿವುಡ್ ಪ್ರೇಕ್ಷಕರಿಗೆ ತಲುಪಿಸುವಲ್ಲೂ ಪ್ರಮುಖ ಪಾತ್ರವಹಿಸಿದವರು. ಭಾರತದ ಪ್ರಮುಖ ಸಿನಿಮಾಕರ್ಮಿಗಳೊಟ್ಟಿಗೆ ಹತ್ತಿರದ ಸಂಪರ್ಕವುಳ್ಳವರು. ದೊಡ್ಡ ಸಿನಿಮಾ ಮೋಹಿಯಾಗಿರುವ ಕರಣ್ ಈ ವರ್ಷದ ನೋಡಿದ ಹಲವಾರು ಸಿನಿಮಾಗಳ ಪೈಕಿ ಅವರಿಗೆ ಅತ್ಯಂತ ಇಷ್ಟವಾಗಿದ್ದು ಕನ್ನಡ ಸಿನಿಮಾ ಅಂತೆ.
ಫಿಲ್ಮಿ ಕಂಪ್ಯಾನಿಯನ್ನ ‘ಡೈರೆಕ್ಟರ್ಸ್ ರೌಂಡ್ ಟೇಬಲ್’ಗೆ ಅತಿಥಿಯಾಗಿ ಬಂದಿದ್ದ ಕರಣ್ ಜೋಹರ್ಗೆ, ನಿರೂಪಕಿ ಅನುಪಮಾ ಚೋಪ್ರಾ, ಈ ವರ್ಷ ನಿಮಗೆ ಇಷ್ಟವಾದ ಅಥವಾ ಅತ್ಯಂತ ಕಾಡಿದ ಸಿನಿಮಾ ಯಾವುದು? ಎಂಬ ಪ್ರಶ್ನೆ ಹಾಕಿದರು. ‘‘ನನಗೆ ಸೈಡ್ ಎ ಮತ್ತು ಬಿ ಎರಡೂ ಬಹಳ ಇಷ್ಟವಾಯಿತು’’ ಎಂದ ಕರಣ್, ಸಿನಿಮಾದ ಹೆಸರನ್ನು ಹೇಳಲು ಪ್ರಯತ್ನಿಸಿದರು, ಅಲ್ಲಿಯೇ ಇದ್ದ ನಿರ್ದೇಶಕ ಹೇಮಂತ್ ರಾವ್, ‘ಸಪ್ತ ಸಾಗರದಾಚೆ ಎಲ್ಲೋ’ ಎಂದು ಕರಣ್ಗೆ ಸಹಾಯ ಮಾಡಿದರು.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತಮಗೆ ನೀಡಿದ ಅನುಭವದ ಬಗ್ಗೆ ಮಾತನಾಡಿದ ಕರಣ್ ಜೋಹರ್, ‘‘ಅದೊಂದು ಹೃದಯ ಒಡೆಯುವಂಥಹಾ ಲವ್ ಸ್ಟೋರಿ, ಜೊತೆಗೆ ಭಾವನೆಗಳನ್ನು ತುಂಬಿಸುವ ಕೊನೆಗೊಂದು ತೃಪ್ತಿಯನ್ನು ನೀಡುವಂಥಹಾ ಲವ್ ಸ್ಟೋರಿ. ಆದರೆ ಆ ಸಿನಿಮಾ ‘ಲವ್ ಸ್ಟೋರಿ’ಯಿಂದ ಪ್ರಾರಂಭವಾಗುವುದಿಲ್ಲ, ಬದಲಿಗೆ ಅವರಿಬ್ಬರು ಒಂದು ರೀತಿಯ ಲಿವಿನ್ ರಿಲೇಷನ್ನಲ್ಲಿ ಇರುವಂತೆ, ಮನೆ ಹುಡುಕುವ ಕತೆಯಿಂದಲೇ ಆರಂಭವಾಗುತ್ತದೆ. ಸಿನಿಮಾ ಮುಗಿದಾಗ ನನ್ನ ಎದೆಯ ಮೇಲೆ ಯಾರೋ ಕಲ್ಲು ಇಟ್ಟಿರುವಂತೆ ಭಾಸವಾಯಿತು, ಅಷ್ಟು ಹೃದಯ ಭಾರವಾಯಿತು’’ ಎಂದಿದ್ದಾರೆ ಕರಣ್.
ಇದನ್ನೂ ಓದಿ:ಶಾರುಖ್ ಖಾನ್ ಪುತ್ರಿಯ ಬಗ್ಗೆ ಕರಣ್ ಜೋಹರ್ ಮಾತು
‘‘ಆ ನಂತರ ಸಿನಿಮಾದ ಮುಂದಿನ ಭಾಗ ನೋಡಲು ನಾನು ಬಹಳ ಕಾದೆ, ಕೊನೆಗೆ ಕೆಲವು ದಿನಗಳ ಹಿಂದೆಯಷ್ಟೆ ಹೇಮಂತ್ ರಾವ್ ಬಹಳ ಪ್ರೀತಿಯಿಂದ ನನಗಾಗಿ ಸಿನಿಮಾದ ಒಂದು ಲಿಂಕ್ ಅನ್ನು ಕಳಿಸಿಕೊಟ್ಟರು. ಕೂಡಲೇ ಸೈಡ್ ಬಿ ಅನ್ನೂ ನೋಡಿದೆ. ನನಗೆ ಒಂದು ಪರಿಪೂರ್ಣ ಅನುಭವ ಪಡೆದ ಭಾಸವಾಯಿತು. ಈ ವರ್ಷ ಹಲವು ಒಳ್ಳೆಯ ಸಿನಿಮಾಗಳನ್ನು ನೋಡಿದೆ. ಬಹಳ ಜನ ಅದ್ಭುತವಾದ ಸಿನಿಮಾಗಳನ್ನು ಮಾಡಿದ್ದಾರೆ ಆದರೆ ಸೈಡ್ ಎ ಮತ್ತು ಬಿ ಅದ್ಭುತ ಎನಿಸಿತು’’ ಎಂದರು.
ಅದೇ ಕಾರ್ಯಕ್ರಮದಲ್ಲಿ ಹಾಜರಿದ್ದ ನಟಿ, ನಿರ್ದೇಶಕಿ ಕೊಂಕನಾ ಸೇನ್ ನನಗೆ ಬಹಳ ಇಷ್ಟವಾಗಿದ್ದು ‘ದಿ ಗ್ರೇಟ್ ಇಂಡಿಯನ್ ಕಿಚನ್’ ಆದರೆ ಕರಣ್ ಹೇಳಿದ್ದು ಕೇಳಿದ ಮೇಲೆ ‘ಸೈಡ್ ಎ ಮತ್ತು ಬಿ’ ನೋಡಬೇಕು ಅನ್ನಿಸುತ್ತಿದೆ. ಕೂಡಲೇ ಹೋಗಿ ಆ ಎರಡೂ ಸಿನಿಮಾ ನೋಡುತ್ತೀನಿ ಎಂದರು. ತಮಿಳಿನ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಸಹ ಈ ವರ್ಷ ತಾವು ನೋಡಿದ ಅದ್ಭುತ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಎಂದು, ಹೇಮಂತ್ ರಾವ್ ಅವರ ನಿರ್ದೇಶನವನ್ನು ಕೊಂಡಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ