ಅಮೆರಿಕದಲ್ಲಿ ನಟ ನವೀನ್ ಪೋಲಿಶೆಟ್ಟಿಗೆ ಅಪಘಾತ
Naveen Polishetty: ತೆಲುಗು ಚಿತ್ರರಂಗದ ಭರವಸೆಯ ನಟ ಎನಿಸಿಕೊಂಡಿರುವ ನವೀನ್ ಪೋಲಿಶೆಟ್ಟಿ ಅಮೆರಿಕದ ಡಲ್ಲಾಸ್ನಲ್ಲಿ ಬೈಕ್ ಅಪಘಾತಕ್ಕೆ ಈಡಾಗಿದ್ದಾರೆ.

ತೆಲುಗು ಚಿತ್ರರಂಗದ (Tollywood) ಭರವಸೆಯ ನಟ ಎನಿಸಿಕೊಂಡಿರುವ ನವೀನ್ ಪೋಲಿಶೆಟ್ಟಿ ಅಮೆರಿಕದಲ್ಲಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದ ನವೀನ್ ಪೋಲಿಶೆಟ್ಟಿ ಅಲ್ಲಿ ಬೈಕ್ ಚಲಾಯಿಸುವ ಸಮಯದಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ನವೀನ್ಗೆ ಹಲವು ಗಾಯಗಳಾಗಿವೆ ಎನ್ನಲಾಗುತ್ತಿದ್ದು, ಕೈ ಮೂಳೆ ಸಹ ಮುರಿದಿದೆ. ಅಮೆರಿಕದ ಆಸ್ಪತ್ರೆಯೊಂದರಲ್ಲಿ ನವೀನ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮೆರಿಕದ ಡಲ್ಲಾಸ್ನಲ್ಲಿ ನವೀನ್ ಪೋಲಿಶೆಟ್ಟಿ ಅಪಘಾತಕ್ಕೆ ಈಡಾಗಿದ್ದಾರೆ. ಅಪಘಾತ ತೀವ್ರವಾಗಿತ್ತು ಎನ್ನಲಾಗುತ್ತಿದೆ. ನವೀನ್ಗೆ ಕೈ ಮೂಳೆ ಮಾತ್ರವೇ ಅಲ್ಲದೆ ಇನ್ನೂ ಹಲವು ಕಡೆ ಗಂಭೀರ ಪೆಟ್ಟುಗಳಾಗಿವೆ ಆದರೆ ಜೀವಕ್ಕೆ ಯಾವುದೇ ಅಪಾಯವಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ:ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ದಿನಗಳ ನೆನೆದ ನಟ ನವೀನ್ ಪೋಲಿಶೆಟ್ಟಿ
2012 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ನವೀನ್ ಪೋಲಿಶೆಟ್ಟಿ ಹಲವು ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಿ 2019ರಲ್ಲಿ ಬಿಡುಗಡೆ ಆದ ಸೂಪರ್ ಹಿಟ್ ಸಿನಿಮಾ ‘ಏಜೆಂಟ್ ಸಾಯಿ ಶ್ರೀನಿವಾಸ ಆತ್ರೆಯಾ’ ಸಿನಿಮಾ ಮೂಲಕ ನಾಯಕ ನಟರಾದರು. ಅದೇ ವರ್ಷ ಸುಶಾಂತ್ ಸಿಂಗ್ ರಜಪೂತ್, ಶ್ರದ್ಧಾ ಕಪೂರ್ ನಟಿಸಿದ ಹಿಂದಿಯ ಬ್ಲಾಕ್ ಬಸ್ಟರ್ ಸಿನಿಮಾ ‘ಚಿಚೋರೆ’ ಸಿನಿಮಾದಲ್ಲಿ ಸಹ ನಟಿಸಿದರು. ಬಳಿಕ ಮತ್ತೆ ತೆಲುಗಿಗೆ ಬಂದ ನವೀನ್ ‘ಜಾತಿ ರತ್ನಾಲು’ ಸಿನಿಮಾ ಸಹ ಸೂಪರ್ ಹಿಟ್ ಆಯ್ತು. ಕಳೆದ ವರ್ಷ ಬಿಡುಗಡೆ ಆದ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ಸಹ ಸೂಪರ್ ಹಿಟ್ ಆಯ್ತು. ಈ ಸಿನಿಮಾನಲ್ಲಿ ನಟಿ ಅನುಷ್ಕಾ ಶೆಟ್ಟಿಗೆ ನಾಯಕನಾಗಿ ನವೀನ್ ನಟಿಸಿದ್ದರು.
ಇದೀಗ ‘ಅನಗನಗಾ ಒಕ ರಾಜು’ ಸಿನಿಮಾನಲ್ಲಿ ನವೀನ್ ಪೋಲಿಶೆಟ್ಟಿ ನಟಿಸುತ್ತಿದ್ದಾರೆ. ನವೀನ್ ಪೋಲಿಶೆಟ್ಟಿ ಸ್ವತಃ ಚಿತ್ರಕತೆ ಬರಹಗಾರ ಸಹ ಆಗಿದ್ದು ಸ್ಟಾಂಡಪ್ ಕಮಿಡಿಯನ್ ಆಗಿ ಸಹ ಹೆಸರು ಗಳಿಸಿದ್ದಾರೆ. ಈ ಹಿಂದೆ ಜನಪ್ರಿಯ ಯೂಟ್ಯೂಬ್ ಚಾನೆಲ್ ‘ಎಐಬಿ’ನ ಹಲವು ಶಾರ್ಟ್ ವಿಡಿಯೋಗಳಲ್ಲಿ ನವೀನ್ ಪೋಲಿಶೆಟ್ಟಿ ನಟಿಸಿ ಜನಪ್ರಿಯರಾಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




