ದಕ್ಷಿಣ ಭಾರತಕ್ಕೆ ಕಾಲಿಡಲಿದ್ದಾರೆ ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​!

| Updated By: ಮದನ್​ ಕುಮಾರ್​

Updated on: May 10, 2021 | 5:16 PM

ವಿಜಯ್​-ಕತ್ರಿನಾ ನಟಿಸುತ್ತಿರುವ ಸಿನಿಮಾ ಒಂದೇ ಬಾರಿಗೆ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಈ ಮೂಲಕ ಕತ್ರಿನಾ ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ.

ದಕ್ಷಿಣ ಭಾರತಕ್ಕೆ ಕಾಲಿಡಲಿದ್ದಾರೆ ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​!
ಕತ್ರಿನಾ ಕೈಫ್​
Follow us on

ಹಿಂದಿ ಚಿತ್ರರಂಗದ ಸಾಕಷ್ಟು ಸ್ಟಾರ್​ ನಟಿಯರು ದಕ್ಷಿಣದತ್ತ ಮುಖ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಚಿತ್ರಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿರುವುದರಿಂದ ಸಹಜವಾಗಿಯೇ ಬಾಲಿವುಡ್​ ನಟಿಯರು ಇತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ನಟಿ ಶ್ರದ್ಧಾ ಕಪೂರ್​ ಈಗಾಗಲೇ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಾಗಿದೆ. ಆರ್​ಆರ್​ಆರ್​ ಚಿತ್ರದ ಮೂಲಕ ಆಲಿಯಾ ಭಟ್​ ಕೂಡ ದಕ್ಷಿಣ ಭಾರತದತ್ತ ಹೆಜ್ಜೆ ಹಾಕಿದ್ದಾರೆ. ಈಗಿನದು ನಟಿ ಕತ್ರಿನಾ ಕೈಫ್​ ಸರದಿ. ವಿಜಯ್​ ದೇವರಕೊಂಡ ಮುಂದಿನ ಚಿತ್ರಕ್ಕೆ ಕತ್ರಿನಾ ಕೈಫ್​ ನಾಯಕಿ ಎನ್ನುವ ಮಾತು ಕೇಳಿ ಬಂದಿದೆ.

ವಿಜಯ್​ ದೇವರಕೊಂಡ ನಟನೆಯ ಲೈಗರ್​ ಚಿತ್ರದ ಶೂಟಿಂಗ್​ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದೆ. ಈ ಚಿತ್ರದ ಮೂಲಕ ಅವರು ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಈ ಚಿತ್ರಕ್ಕೆ ಅನನ್ಯಾ ಪಾಂಡೆ ನಾಯಕಿ. ಹಿಂದಿ ಮಾತ್ರವಲ್ಲದೆ, ತೆಲುಗಿನಲ್ಲೂ ಸಿನಿಮಾ ತೆರೆಗೆ ಬರುತ್ತಿದೆ. ಇದರ ಜತೆಗೆ ನಿರ್ದೇಶಕರಾದ ಶಿವ ನಿರ್ವಣಾ ಮತ್ತು ಕೊರಟಾಲ ಶಿವ ಜತೆಗೆ ವಿಜಯ್​ ಒಂದೊಂದು ಸಿನಿಮಾ ಮಾಡುತ್ತಿದ್ದಾರೆ. ಈ ಪೈಕಿ ಒಂದು ಸಿನಿಮಾಗೆ ಕತ್ರಿನಾ ನಾಯಕಿಯಾಗಿ ನಟಿಸುತ್ತಿದ್ದಾರಂತೆ.

ವಿಜಯ್​-ಕತ್ರಿನಾ ನಟಿಸುತ್ತಿರುವ ಸಿನಿಮಾ ಒಂದೇ ಬಾರಿಗೆ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಈ ಮೂಲಕ ಕತ್ರಿನಾ ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ. ಸದ್ಯ ಈ ವಿಚಾರ ಅಭಿಮಾನಿಗಳಿಗೆ ಸಖತ್ ಥ್ರಿಲ್​ ನೀಡಿದೆ. ಆದರೆ, ಚಿತ್ರ ಯಾವುದು? ಯಾವಾಗ ಸೆಟ್ಟೇರಲಿದೆ ಎಂಬ ಬಗ್ಗೆ ಯಾವುದೇ ಅಪ್​ಡೇಟ್​ ಸಿಕ್ಕಿಲ್ಲ.   ಇತ್ತೀಚೆಗೆ ಪ್ರಭಾಸ್​ ಜತೆ ಕತ್ರಿನಾ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.

ಸದ್ಯ, ಕತ್ರಿನಾ ಕೈಫ್​ ಫೋನ್​ ಭೂತ್ ಹಾಗೂ ‘ಟೈಗರ್​ 3’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಕಾರಣದಿಂದ ಸಿನಿಮಾ ಕೆಲಸಗಳು ನಿಂತಿವೆ. ಹೀಗಾಗಿ, ಕತ್ರಿನಾ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್​ ಆಗಿದ್ದಾರೆ. ಮನೆಯಲ್ಲೇ ವರ್ಕೌಟ್​ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಪ್ರಭಾಸ್ ಜತೆ ರೊಮ್ಯಾನ್ಸ್ ಮಾಡಲಿದ್ದಾರೆ ಕತ್ರಿನಾ ಕೈಫ್; ಕೌತುಕ ಮೂಡಿಸಿದ ಬಿಗ್ ಬಜೆಟ್ ಚಿತ್ರ