ಕೇರಳದ ಚಿತ್ರಮಂದಿರ (Theater) ಮಾಲೀಕರು ಹಾಗೂ ಸಿನಿಮಾ ನಿರ್ಮಾಪಕರ ನಡುವಿನ ವಿವಾದ ಉಲ್ಬಣಗೊಂಡಿದೆ. ಮಲಯಾಳಂ ಸಿನಿಮಾಗಳನ್ನು ಇನ್ನು ಮುಂದೆ ಪ್ರದರ್ಶನ ಮಾಡುವುದಿಲ್ಲವೆಂಬ ನಿರ್ಣಯವನ್ನು ಕೇರಳದ ಸಿನಿಮಾ ಪ್ರದರ್ಶಕರ ಸಂಘ ತೆಗೆದುಕೊಂಡಿದ್ದು ಮಲಯಾಳಂ ಚಿತ್ರರಂಗ ಇದರಿಂದ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಶುಕ್ರವಾರ ಸಭೆ ನಡೆಸಿದ ಕೇರಳ ಚಿತ್ರಮಂದಿರ ಮಾಲೀಕರ ಒಕ್ಕೂಟ (ಎಫ್ಇಯುಒಕೆ) ಫೆಬ್ರವರಿ 22ರಿಂದ ಕೇರಳದ ಯಾವುದೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಯಾವುದೇ ಮಲಯಾಳಂ ಸಿನಿಮಾಗಳನ್ನು ಪ್ರದರ್ಶನ ಮಾಡುವುದಿಲ್ಲ ಎಂದು ಘೋಷಿಸಿದೆ.
ಕೇರಳ ಚಿತ್ರಮಂದಿರ ಮಾಲೀಕರ ಸಂಘ ಹಾಗೂ ಮಲಯಾಳಂ ಸಿನಿಮಾ ನಿರ್ಮಾಪಕರ ನಡುವೆ ಕಳೆದ ಎರಡು ವರ್ಷದಿಂದಲೂ ತಿಕ್ಕಾಟ ಜಾರಿಯಲ್ಲಿದೆ. ಸಿನಿಮಾಗಳನ್ನು ಒಟಿಟಿಗೆ ಬಿಡುಗಡೆ ಮಾಡುವ ಬಗ್ಗೆ ಕೇರಳ ಚಿತ್ರಮಂದಿರ ಮಾಲೀಕರ ಸಂಘ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಸಿನಿಮಾ ಬಿಡುಗಡೆ ಆದ ನಿರ್ದಿಷ್ಟ ದಿನದ ಬಳಿಕವೇ ಒಟಿಟಿಯಲ್ಲಿ ಬಿಡುಗಡೆ ಮಾಡಬೇಕು ಎಂಬುದು ಚಿತ್ರಮಂದಿರ ಮಾಲೀಕರ ಬೇಡಿಕೆ. ಈ ಮೊದಲು ಈ ಬಗ್ಗೆ ಸಭೆ ನಡೆದು ಯಾವುದೇ ಮಲಯಾಳಂ ಸಿನಿಮಾ ಬಿಡುಗಡೆ ಆದ 42 ದಿನಗಳ ಬಳಿಕವಷ್ಟೆ ಒಟಿಟಿಯಲ್ಲಿ ಬಿಡುಗಡೆ ಮಾಡಬೇಕು ಎಂಬ ನಿಯಮ ಹೇರಲಾಗಿತ್ತು. ನಿರ್ಮಾಪಕರು ಸಹ ಈ ನಿಯಮಕ್ಕೆ ಒಪ್ಪಿಗೆ ಸೂಚಿಸಿದ್ದರು.
ಇದನ್ನೂ ಓದಿ:ಕೇರಳದ ಚಿತ್ರಮಂದಿರ ಮಾಲೀಕರಿಂದ ಪ್ರಮುಖ ನಿರ್ಧಾರ, ಕಡಿಮೆ ಬಜೆಟ್ ಸಿನಿಮಾಗಳಿಗೆ ಭಾರಿ ಸಂಕಷ್ಟ
ಆದರೆ ಕೆಲ ನಿರ್ಮಾಪಕರು ಪದೇ ಪದೇ ಈ ನಿಯಮವನ್ನು ಮುರಿಯುತ್ತಲೇ ಬರುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಮೋಹನ್ಲಾಲ್ ನಟನೆಯ ‘ಮಲೈಕೋಟ್ಟೈ ವಾಲಿಬನ್’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಇದು ಕೇರಳ ಚಿತ್ರಮಂದಿರ ಮಾಲೀಕರನ್ನು ಇನ್ನಷ್ಟು ಕೆರಳಿಸಿತು, ಹಾಗಾಗಿ ಶುಕ್ರವಾರ ಸಭೆ ನಡೆಸಿ ಇನ್ನು ಮುಂದೆ ಮಲಯಾಳಂ ಸಿನಿಮಾಗಳನ್ನು ಪ್ರದರ್ಶಿಸುವುದಿಲ್ಲವೆಂಬ ನಿರ್ಣಯವನ್ನು ಘೋಷಿಸಿದ್ದಾರೆ.
ಕೇರಳದ ಎರ್ನಾಕುಲಂ, ತಿರುವನಂತಪುರಂ, ಕೊಚ್ಚಿ ಅಂಥಹಾ ದೊಡ್ಡ ನಗರಗಳನ್ನು ಹೊರತುಪಡಿಸಿ ಬೇರೆ ನಗರಗಳಲ್ಲಿ ಮಲ್ಟಿಪ್ಲೆಕ್ಸ್ಗಳಿಲ್ಲ. ಸಿನಿಮಾ ಪ್ರೇಮಿಗಳು ಸಿನಿಮಾ ನೋಡಲು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನೇ ನೆಚ್ಚಿಕೊಂಡಿದ್ದಾರೆ. ಇದೀಗ ಚಿತ್ರಮಂದಿರ ಮಾಲೀಕರು ಮಲಯಾಳಂ ಸಿನಿಮಾಗಳನ್ನು ಪ್ರದರ್ಶಿಸುವುದಿಲ್ಲವೆಂದು ತಳೆದಿರುವ ನಿರ್ಣಯ ಸಿನಿಮಾ ಪ್ರೇಮಿಗಳಿಗೆ ಹಾಗೂ ನಿರ್ಮಾಪಕರಿಗೆ ಆತಂಕ ತಂದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ