ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant rona) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ಟಿವಿ9 ಕಿಚ್ಚ ಸುದೀಪ್ ಅವರ ವಿಶೇಷ ಸಂದರ್ಶನ ನಡೆಸಿದೆ. ಈ ಸಂದರ್ಶನದಲ್ಲಿ ಕಿಚ್ಚ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ತಮ್ಮ ಹಳೆಯ ಚಿತ್ರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದೇ ವೇಳೆ ಕಮಲ್ ಹಾಸನ್ ಅಭಿನಯದ ಸ್ವಾಮಿಮುತ್ತು ಚಿತ್ರವನ್ನು ರಿಮೇಕ್ ಮಾಡಿರುವ ಬಗ್ಗೆ, ಆ ಚಿತ್ರದಲ್ಲಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದರ ಮಜವಾದ ಘಟನೆಗಳನ್ನು ತೆರೆದಿಟ್ಟಿದ್ದಾರೆ. ಹಾಗೆ ಸುಮ್ಮನೆ ಗೆಳೆಯರೊಂದಿಗೆ ಹರಟುತ್ತಿದ್ದಾಗ, ಶುರುವಾದ ಚರ್ಚೆಯು ಚಾಲೆಂಜ್ ಆಗಿ ಸ್ವೀಕರಿಸಿ ಸ್ವಾಮಿಮುತ್ತು ಚಿತ್ರವನ್ನು ಕನ್ನಡದಲ್ಲಿ ಮಾಡಿದ್ದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಆ ಘಟನೆಯ ಬಗ್ಗೆ ಸುದೀಪ್ ಹೇಳಿದ್ದೇನು ನೀವೇ ಕೇಳಿ…
ಭಾರೀ ನಿರೀಕ್ಷೆ ಹುಟ್ಟುಹಾಕಿರುವ ವಿಕ್ರಾಂತ್ ರೋಣ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣರಾಗಿ ಕಾಣಿಸಿಕೊಳ್ಳಲಿದ್ದು, ಸಂಜೀವ್ ಗಂಭೀರ್ ಹೆಸರಿನ ಮತ್ತೊಂದು ಪಾತ್ರದಲ್ಲಿ ನಿರೂಪ್ ಭಂಡಾರಿ ಅಭಿನಯಿಸಿದ್ದಾರೆ. ಹಾಗೆಯೇ ನಾಯಕಿಯಾಗಿ ನಿತಾ ಅಶೋಕ್ ಇದ್ದರೆ, ಮತ್ತೊಂದು ವಿಭಿನ್ನ ಪಾತ್ರದೊಂದಿಗೆ ರವಿ ಶಂಕರ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ರಗಡ್ ರಕ್ಕಮ್ಮಳಾಗಿ ಎಂಟ್ರಿ ಕೊಡಲಿದ್ದಾರೆ.
ಶಾಲಿನಿ ಆರ್ಟ್ಸ್ ಬ್ಯಾನರ್ ಮೂಲಕ ಜಾಕ್ ಮಂಜು ನಿರ್ಮಾಣ ಮಾಡಿರುವ ಈ ಸಿನಿಮಾಗೆ ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಪಕರಾಗಿದ್ದಾರೆ. ಇನ್ನು ರಂಗಿ ತರಂಗ ಖ್ಯಾತಿಯ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಿರುವ ವಿಕ್ರಾಂತ್ ರೋಣ ಚಿತ್ರವು ಈಗಾಗಲೇ ಟ್ರೈಲರ್ ಮೂಲಕ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಚಿತ್ರದ ಪ್ರಮುಖ ಭಾಗವನ್ನು ವೀಕ್ಷಿಸಿರುವ ಬಾಲಿವುಡ್ ನಟ ಸಲ್ಮಾನ್ ತಮ್ಮದೇ ಸಂಸ್ಥೆಯಲ್ಲಿ ವಿಕ್ರಾಂತ್ ರೋಣನನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಹೀಗಾಗಿಯೇ ಸೌತ್ ಸಿನಿರಂಗದಂತೆ, ಬಾಲಿವುಡ್ನಲ್ಲೂ ವಿಕ್ರಾಂತ್ ರೋಣನ ಎಂಟ್ರಿಗಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಈ ಕಾಯುವಿಕೆ ಕೊನೆಗೊಳ್ಳಬೇಕಿದ್ದರೆ ಜುಲೈ 28ರ ತನಕ ಕಾಯಲೇಬೇಕು.