2018 Movie: ‘ಈ ಮಲಯಾಳಂ ಸಿನಿಮಾ ಕನ್ನಡಿಗರ ಹೃದಯ ಗೆದ್ದಿದೆ’: ‘2018’ ಚಿತ್ರಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ
Kichcha Sudeep: ಒಳ್ಳೆಯ ಸಿನಿಮಾಗಳಿಗೆ ಕಿಚ್ಚ ಸುದೀಪ್ ಅವರು ಯಾವಾಗಲೂ ಬೆಂಬಲ ನೀಡುತ್ತಾರೆ. ಮಾನವೀಯತೆಯ ಕಥೆ ಹೊಂದಿರುವ ‘2018’ ಸಿನಿಮಾ ಬಗ್ಗೆ ಅವರು ಈಗ ಮೆಚ್ಚುಗೆ ಸೂಚಿಸಿದ್ದಾರೆ.
ಮಲಯಾಳಂನ ‘2018’ ಸಿನಿಮಾ (2018 Movie) ಭಾರಿ ಸದ್ದು ಮಾಡುತ್ತಿದೆ. ನೈಜ ಘಟನೆಗಳನ್ನು ಆಧರಿಸಿ ತಯಾರಾದ ಈ ಸಿನಿಮಾಗೆ ಪ್ರೇಕ್ಷಕರು ಮನ ಸೋತಿದ್ದಾರೆ. ಕಿಚ್ಚ ಸುದೀಪ್ (Kichcha Sudeep) ಕೂಡ ಈ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ‘2018’ ಮಾಡಿದ ಸಾಧನೆಗಾಗಿ ಸುದೀಪ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಮೊದಲು ಮಲಯಾಳಂನಲ್ಲಿ ಮಾತ್ರ ಬಿಡುಗಡೆಯಾದ ಈ ಸಿನಿಮಾ ನಂತರ ತೆಲುಗು, ಕನ್ನಡ, ಹಿಂದಿ, ತಮಿಳು ಭಾಷೆಗಳಿಗೆ ಡಬ್ ಆಗಿ ತೆರೆ ಕಂಡಿತು. ಕನ್ನಡಿಗರು ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ನೂರಾರು ಕೋಟಿ ರೂಪಾಯಿ ಗಳಿಸುವ ಮೂಲಕ ಮಲಯಾಳಂ (Mollywood) ಚಿತ್ರರಂಗದಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆದಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿ, ಶುಭ ಕೋರಿದ್ದಾರೆ.
‘ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಬೆಳ್ಳಿತೆರೆಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಕೇರಳ ಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್ ಬಸ್ಟರ್ ಆಗಿದೆ. ‘2018’ ಸಿನಿಮಾ ಕನ್ನಡಿಗರ ಹೃದಯವನ್ನೂ ಗೆಲ್ಲುತ್ತಿದೆ. ಅಭಿನಂದನೆಗಳು’ ಎಂದು ಸುದೀಪ್ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಇದು ನಿಜವಾದ ಕೇರಳ ಸ್ಟೋರಿ’ ಎಂದು ಅಭಿಮಾನಿಗಳು ಕಮೆಂಟ್ ಬಾಕ್ಸ್ನಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ನಿಮ್ಮ ಪ್ರೀತಿಗೆ ಧನ್ಯವಾದಗಳು. ಇಷ್ಟೇ ನಮಗೆ ಬೇಕಿರುವುದು’ ಎಂದು ಕೇರಳದಲ್ಲಿನ ಫ್ಯಾನ್ಸ್ ಕೂಡ ಕಮೆಂಟ್ ಮಾಡಿದ್ದಾರೆ.
Humanity trumped during the 2018 floods in Kerala.This courageous true story is spectacularly clinched on the silver screen to become the biggest blockbuster in the history of the Kerala Film Industry. #2018EveryoneIsAHero is winning the hearts of kannada audiences. Congrats?
— Kichcha Sudeepa (@KicchaSudeep) June 3, 2023
‘2018’ ಚಿತ್ರದ ಕಥೆ ಏನು?
2018ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹವನ್ನು ಆಧರಿಸಿ ‘2018’ ಸಿನಿಮಾ ಸಿದ್ಧವಾಗಿದೆ. ಹಲವರ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟದ ಘಟನೆಗಳನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ. ಅತಿ ಕಷ್ಟದ ಸಂದರ್ಭದಲ್ಲಿ ಕೇರಳದ ಪ್ರತಿಯೊಬ್ಬರು ಹೇಗೆ ನಡೆದುಕೊಂಡರು ಎಂಬ ವಿವರ ಈ ಸಿನಿಮಾದಲ್ಲಿ. ‘ಪ್ರತಿಯೊಬ್ಬರೂ ಹೀರೋ’ ಎಂಬ ಟ್ಯಾಗ್ಲೈನ್ ಗಮನ ಸೆಳೆದಿದೆ. 2018ರ ಪ್ರವಾಹದಲ್ಲಿ ಕೇರಳದ 400ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಅನೇಕರು ನಾಪತ್ತೆಯಾದರು. 1924ರ ಬಳಿಕ ಕೇರಳದಲ್ಲಿ ಉಂಟಾದ ಅತಿ ಭೀಕರ ಪ್ರವಾಹ ಅದು.
ಇದನ್ನೂ ಓದಿ: Kichcha Sudeep: ಸುದೀಪ್ ಹೊಸ ಸಿನಿಮಾ ಬಗ್ಗೆ ಸಿಕ್ತು ಅಪ್ಡೇಟ್; ‘ಕಬಾಲಿ’ ನಿರ್ಮಾಪಕರ ಜೊತೆ ಕೈ ಜೋಡಿಸಿದ ಕಿಚ್ಚ
ಈವರೆಗೂ 160 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಮಲಯಾಳಂ ಚಿತ್ರರಂಗದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ ಎಂಬ ಖ್ಯಾತಿಗೆ ‘2018’ ಒಳಗಾಗಿದೆ. ಟೊವಿನೋ ಥಾಮಸ್ ಜೊತೆ ಆಸಿಫ್ ಅಲಿ, ಅಪರ್ಣಾ ಬಾಲಮುರಳಿ, ವಿನೀತ್ ಶ್ರೀನಿವಾಸನ್, ಕಲೈಯರಸನ್, ಸುದೇಶ್, ಅಜು ವರ್ಗೀಸ್, ತನ್ವಿ ರಾಮ್, ಗೌತಮಿ ನಾಯರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೂಡ್ ಆಂಥೊನಿ ಜೋಸೆಫ್ ಅವರು ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.