ಬಿಗ್ ಬಾಸ್ ಮನೆಯಲ್ಲಿರುವ ಅರವಿಂದ್ ಕೆ.ಪಿ. ಕ್ರೀಡಾಕ್ಷೇತ್ರದ ಹಿನ್ನೆಲೆಯಿಂದ ಬಂದವರು. ಹೀಗಾಗಿ, ಅವರು ಎಲ್ಲಾ ಟಾಸ್ಕ್ನಲ್ಲೂ ಕ್ರೀಡಾಸ್ಫೂರ್ತಿ ತೋರುತ್ತಾರೆ ಎಂದು ಅನೇಕರು ನಂಬಿದ್ದರು. ಆದರೆ, ಇದು ನಿಧಾನವಾಗಿ ಬದಲಾಗುತ್ತಿದೆ. ಇತ್ತೀಚಿಗೆ ಅರವಿಂದ್ ದಿವ್ಯಾ ಉರುಡುಗ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಟಾಸ್ಕ್ನಲ್ಲಿ ಸೋತಿದ್ದಕ್ಕೆ ಅವರು ತುಂಬಾನೇ ಬೇಸರಗೊಂಡಿದ್ದರು. ಈ ವಿಚಾರವಾಗಿ ಮಾತನಾಡುವಾಗ ಸುದೀಪ್ ಖಡಕ್ ಎಚ್ಚರಿಕೆ ನೀಡಿದರು.
ಐದನೇ ವಾರ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಅರವಿಂದ್ ಟೀಂ ಸೋತಿತ್ತು. ಇದಕ್ಕೆ ಅವರು ತುಂಬಾನೇ ಬೇಸರಗೊಂಡಿದ್ದರು. ಸೋಲು ಕಣ್ಮುಂದೆ ಕಾಣುತ್ತಿದ್ದಂತೆ ಪ್ರಶಾಂತ್ ವಿರುದ್ಧ ಸಿಟ್ಟಾದರು. ಈ ಎಲ್ಲಾ ವಿಚಾರಗಳನ್ನು ಸುದೀಪ್ ಗಮನಿಸಿದ್ದಾರೆ. ಅಷ್ಟೇ ಅಲ್ಲ ಆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ವೀಕೆಂಡ್ನಲ್ಲಿ ಮಾತನಾಡಿದ ಸುದೀಪ್, ಸೋಲು ಅಂದರೆ ಏನು? ನೀವು ಬೈಕ್ ರೇಸ್ ಸೋಲ್ತೀರಾ. ಆದರೆ, ಅದನ್ನು ಕಂಪ್ಲೀಟ್ ಮಾಡ್ತೀರಾ. ಆಗ ಆ ಸೋಲನ್ನು ಹೇಗೆ ಸ್ವೀಕರಿಸುತ್ತೀರಿ ಎಂದು ಸುದೀಪ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಅರವಿಂದ್, ಈ ಸೋಲನ್ನು ನಾನು ಚಾಲೆಂಜ್ ಆಗಿ ಸ್ವೀಕರಿಸುತ್ತೇನೆ. ಮುಂದಿನ ಆಟದಲ್ಲಿ ತಿದ್ದುಕೊಳ್ಳುತ್ತೇನೆ ಎಂದರು.
ಆಗ ಸುದೀಪ್, ಈ ವಾರ ಕ್ರೀಡಾ ಸ್ಪರ್ಧಿಯ ಮನೋಭಾವ ನಿಮ್ಮಲ್ಲಿ ಕಂಡಿಲ್ಲ. ಸೋಲನ್ನು ನೀವು ಪರ್ಸನಲ್ ಆಗಿ ತಗೊಂಡ್ರಿ ಅನಿಸುತ್ತೆ ಎಂದರು. ಇದಕ್ಕೆ ತಿದ್ಕೋತಿವಿ ಎನ್ನುವ ಉತ್ತರ ಅರವಿಂದ್ ಕಡೆಯಿಂದ ಬಂತು. ಸುದೀಪ್ ಆರೋಪವನ್ನು ಮನೆಯವರು ಕೂಡ ಒಪ್ಪಿಕೊಂಡರು. ಅವರ ನಡೆಯಿಂದ ಹರ್ಟ್ ಆಗುತ್ತಿದೆ ಎಂದರು.
ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ತಮ್ಮ ಮೂಲ ಉದ್ದೇಶ ಮರೆತಿರುವುದು ಪ್ರೇಕ್ಷಕರಿಗೆ ಸ್ಪಷ್ಟವಾಗುತ್ತಿದೆ. ಯಾವುದೇ ಗೇಮ್ ಇರಲಿ, ಅವರು ಉತ್ತಮವಾಗಿ ಆಡುತ್ತಾರೆ. ಆದರೆ, ಕೆಲವೊಮ್ಮೆ ಆಟದ ಬಗ್ಗೆ ತೋರಿಸುವುದಕ್ಕಿಂತ ಹೆಚ್ಚು ಆಸಕ್ತಿಯನ್ನು ದಿವ್ಯಾಗೆ ತೋರಿಸುತ್ತಿದ್ದಾರೆ. ಆಟ ಆಡುವಾಗ ದಿವ್ಯಾಗೆ ಯಾರಾದರೂ ಮೈಮುಟ್ಟಿದರೆ ಅಥವಾ ಅವರ ಜತೆಗೆ ತಪ್ಪಾಗಿ ನಡೆದುಕೊಂಡರೆ ಅರವಿಂದ್ ನೇರವಾಗಿ ಅವರ ವಿರುದ್ಧ ತಿರುಗಿ ಬೀಳುತ್ತಿದ್ದಾರೆ ಎನ್ನುವ ಆರೋಪ ಇದೆ.
ಇದನ್ನೂ ಓದಿ: ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್ ಬಾಸ್ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?