ಅಭಿಮಾನಿಗಳು ನಿರೀಕ್ಷಿಸುತ್ತಿದ್ದ ಯಶಸ್ಸು ‘ಕಿಂಗ್ಡಮ್’ನಿಂದ ಸಿಗಲಿದೆ: ವಿಜಯ್ ದೇವರಕೊಂಡ
Kingdom movie pre release: ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಜುಲೈ 31 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ನಲ್ಲಿ ಮಾತನಾಡಿದ ವಿಜಯ್ ದೇವರಕೊಂಡ, ಅಭಿಮಾನಿಗಳ ನಿರೀಕ್ಷೆಯಂತೆಯೇ ಈ ಸಿನಿಮಾ ದೊಡ್ಡ ಹಿಟ್ ಆಗಲಿದೆ ಎಂದಿದ್ದಾರೆ. ಇದೊಂದು ಸ್ಪೈ ಥ್ರಿಲ್ಲರ್ ಸಿನಿಮಾ ಆಗಿದ್ದು ಗೌತಮ್ ತಿನರೂರಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ವಿಜಯ್ ದೇವರಕೊಂಡ (Vijay Deverakonda) ನಟನೆಯ ‘ಕಿಂಗ್ಡಮ್’ ತೆಲುಗಿನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, ಇದೇ ಗುರುವಾರ ಸಿನಿಮಾ ಬಿಡುಗಡೆ ಆಗುತ್ತಿದೆ. ‘ಜೆರ್ಸಿ’ ಅಂಥಹಾ ಹಿಟ್ ಸಿನಿಮಾಗಳನ್ನು ನೀಡಿರುವ ಗೌತಮ್ ತಿನರೂರಿ ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿ. ಸಿನಿಮಾನಲ್ಲಿ ಮತ್ತೊಬ್ಬ ನಾಯಕನಾಗಿ ಸತ್ಯದೇವ್ ಸಹ ಇದ್ದಾರೆ. ಸಿನಿಮಾದ ಪ್ರೀ ರಿಲೀಸ್ ಬಲು ಅದ್ಧೂರಿಯಾಗಿ ಇತ್ತೀಚೆಗಷ್ಟೆ ನಡೆದಿದ್ದು, ವಿಜಯ್ ದೇವರಕೊಂಡ ಅಭಿಮಾನಿಗಳನ್ನುದ್ದೇಶಿಸಿ ಪ್ರೀತಿಯಿಂದ ಮಾತನಾಡಿದರು. ಗೆಲುವಿನ ಭರವಸೆಯನ್ನು ಅಭಿಮಾನಿಗಳಿಗೆ ನೀಡಿದರು.
ಅಭಿಮಾನಿಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ವಿಜಯ್ ದೇವರಕೊಂಡ, ‘ನಾನಿಂದು ನನ್ನ ಅಭಿಮಾನಿಗಳ ಬಗ್ಗೆ ಮಾತನಾಡಬೇಕಿದೆ. ಅವರು ನನಗೆ ದೇವರು ಕೊಟ್ಟ ಉಡುಗೊರೆ. ನನ್ನ ಸಿನಿಮಾಗಳು ಹಿಟ್ ಆಗಲಿ, ಫ್ಲಾಪ್ ಆಗಲಿ ನಿಮ್ಮ ಪ್ರೀತಿ ಮತ್ತು ನಂಬಿಕೆ ಕಡಿಮೆ ಆಗಿಲ್ಲ. ಈ ಬಾರಿ ನನ್ನ ಜೊತೆಗೆ ಅಭಿಮಾನಿಗಳಿಗೂ ‘ಕಿಂಗ್ಡಮ್’ ಸಿನಿಮಾದ ಮೇಲೆ ಭಾರಿ ನಂಬಿಕೆ ಇದೆ. ಅವರೇ ಹೇಳುತ್ತಿದ್ದಾರೆ ಈ ಬಾರಿ ಹಿಟ್ ಖಾಯಂ ಎಂದು. ನೀವು ನನ್ನ ಯಶಸ್ಸು ನೋಡಲು ಬಯಸುತ್ತಿದ್ದೀರೆಂದು ನನಗೆ ಗೊತ್ತಿದೆ. ನಾನು ನಟಿಸುವ ಪ್ರತಿ ಸಿನಿಮಾಕ್ಕೂ ನನ್ನ ಸಂಪೂರ್ಣ ಶ್ರಮ ಹಾಕಿ ಸಿನಿಮಾ ಮಾಡುತ್ತಿದ್ದೇನೆ’ ಎಂದಿದ್ದಾರೆ ವಿಜಯ್ ದೇವರಕೊಂಡ.
‘ಇನ್ನೆರಡು ದಿನಗಳಲ್ಲಿ ನಾವು ಚಿತ್ರಮಂದಿರದಲ್ಲಿ ಭೇಟಿ ಆಗೋಣ. ಜುಲೈ 31ಕ್ಕೆ ‘ಕಿಂಗ್ಡಮ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಮನದಲ್ಲಿ ಸಣ್ಣ ಭಯ, ಅಳುಕು ಇದೆ. ನಿಮಗೆ ಸಿನಿಮಾ ಇಷ್ಟವಾಗುತ್ತಾ ಎಂಬ ಕಾತರ ಇದೆ. ಅದರ ಜೊತೆಗೆ ನಂಬಿಕೆಯೂ ಇದೆ, ನಾವು ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ವಿಶ್ವಾಸವೂ ಇದೆ. ಇದು ಕೇವಲ ನನ್ನೊಬ್ಬನ ‘ಕಿಂಗ್ಡಮ್’ ಅಲ್ಲ, ಇದು ಗೌತಮ್ ತಿನರೂರಿ, ಅನಿರುದ್ಧ್ ರವಿಚಂದ್ರನ್ ಅವರ ಕಿಂಗ್ಡಮ್ ಸಹ ಎಂದಿದ್ದಾರೆ ವಿಜಯ್ ದೇವರಕೊಂಡ.
ಇದನ್ನೂ ಓದಿ:‘ಕಿಂಗ್ಡಮ್’ ಟ್ರೇಲರ್ ಮೂಲಕ ಹೊಸ ಸಿನಿಮಾದ ಆ್ಯಕ್ಷನ್ ಝಲಕ್ ತೋರಿಸಿದ ವಿಜಯ್ ದೇವರಕೊಂಡ
ಸಂಗೀತ ನಿರ್ದೇಶಕ ಅನಿರುದ್ಧ್ ಮಾತನಾಡಿ, ‘ತೆಲುಗು ಚಿತ್ರರಂಗದಲ್ಲಿ ನಾಗ ವಂಶಿ ನನ್ನ ಗುರು ಇದ್ದಂತೆ. ನನ್ನ ಹಾಡುಗಳು ಹಿಟ್ ಆದಾಗ ಅವರು ಖುಷಿ ವ್ಯಕ್ತಪಡಿಸುತ್ತಾರೆ. ಸಿನಿಮಾ ಅನ್ನು ನಾನು ಈಗಾಗಲೇ ನೋಡಿದ್ದೀನಿ. ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಎಲ್ಲರ ಪ್ರದರ್ಶನವೂ ಅದ್ಭುತವಾಗಿದೆ. ಇನ್ನು ಸಿನಿಮಾದ ಎಡಿಟರ್ ಆಗಿರುವ ನವೀನ್ ನೂಲಿ ಭಾರತದ ಅತ್ಯುತ್ತಮ ಎಡಿಟರ್ ಎಂದು ನನಗೆ ಅನಿಸುತ್ತದೆ’ ಎಂದಿದ್ದಾರೆ ಅನಿರುದ್ಧ್ ರವಿಚಂದ್ರನ್.
‘ಕಿಂಗ್ಡಮ್’ ಸಿನಿಮಾ ಜುಲೈ 31 ರಂದು ಬಿಡುಗಡೆ ಆಗಲಿದೆ. ಇದೊಂದು ಸ್ಪೈ ಥ್ರಿಲ್ಲರ್ ಕತೆ ಆಗಿದೆ. ಸಿನಿಮಾನಲ್ಲಿ ಅಣ್ಣ-ತಮ್ಮನ ನಡುವಿನ ಸೆಂಟಿಮೆಂಟ್ ಸಹ ಇದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಆಕ್ಷನ್ ಸಖತ್ ಗಮನ ಸೆಳೆಯುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




