ಸೋಮವಾರದ ಪರೀಕ್ಷೆಯಲ್ಲಿ ‘ಕುಬೇರ’, ‘ಸಿತಾರೇ ಜಮೀನ್ ಪರ್’ ಪಾಸ್; ಗಳಿಕೆ ಎಷ್ಟು?
ಆಮಿರ್ ಖಾನ್ ನಟನೆಯ ‘ಸಿತಾರೆ ಜಮೀನ್ ಪರ್’ ಮತ್ತು ಧನುಷ್ ನಟನೆಯ ‘ಕುಬೇರ’ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಅದ್ಭುತ ಯಶಸ್ಸು ಕಂಡಿದೆ. ಸೋಮವಾರದ ಕಲೆಕ್ಷನ್ ಕೂಡ ಉತ್ತಮವಾಗಿದೆ. ಈ ಎರಡು ಚಿತ್ರಗಳು ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರಲಿವೆ ಎಂದು ನಿರೀಕ್ಷಿಸಲಾಗಿದೆ.

ಚಿತ್ರರಂಗಕ್ಕೆ ಒಂದು ದೊಡ್ಡ ಗೆಲುವು ಸಿಗದೇ ಹಲವು ಸಮಯ ಕಳೆದಿತ್ತು. ಐಪಿಎಲ್ (IPL) ಕಾರಣದಿಂದ ಹೆಚ್ಚಿನ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಈಗ ಮತ್ತೆ ಚಿತ್ರರಂಗಕ್ಕೆ ಹೊಸ ಚೈತನ್ಯ ಬಂದಿದೆ. ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ರಿಲೀಸ್ ಆದ ಎರಡು ಸಿನಿಮಾಗಳು ಗೆಲುವಿನ ನಗೆ ಬೀರಿದೆ. ಮುಂದಿನ ಕೆಲವು ವಾರಗಳ ಕಾಲ ಈ ಸಿನಿಮಾಗಳು ಅಬ್ಬರಿಸಲಿವೆ. ‘ಕುಬೇರ’ ಹಾಗೂ ‘ಸಿತಾರೇ ಜಮೀನ್ ಪರ್’ ಸಿನಿಮಾ ಸೋಮವಾರದ ಪರೀಕ್ಷೆಯನ್ನು ಪಾಸ್ ಆಗಿವೆ.
ಸಿನಿಮಾ ರಿಲೀಸ್ ಆದ ವಾರಾಂತ್ಯದಲ್ಲಿ ಕಲೆಕ್ಷನ್ ಆಗೋದು ಸರ್ವೇ ಸಾಮಾನ್ಯ. ಅಬ್ಬರದ ಗಳಿಕೆ ಮಾಡಿದ ಅನೇಕ ಸಿನಿಮಾಗಳು ವಾರದ ದಿನ ಮುಗ್ಗರಿಸಿದ ಉದಾಹರಣೆ ಸಾಕಷ್ಟಿದೆ. ಯಾವುದೇ ಸಿನಿಮಾಗಾದರೂ ಸೋಮವಾರದ ಕಲೆಕ್ಷನ್ ತುಂಬಾನೇ ಮುಖ್ಯವಾಗುತ್ತದೆ. ಆಮಿರ್ ನಟನೆಯ ‘ಸಿತಾರೇ ಜಮೀನ್ ಪರ್’ ಹಾಗೂ ಧನುಶ್ ನಟನೆಯ ‘ಕುಬೇರ’ ಚಿತ್ರಗಳು ಸೋಮವಾರ ಉತ್ತಮ ಗಳಿಕೆ ಮಾಡಿವೆ.
ಆಮಿರ್ ಖಾನ್ ಅವರು ದೊಡ್ಡ ಯಶಸ್ಸು ಕಾಣದೆ ಸಾಕಷ್ಟು ಸಮಯ ಕಳೆದಿತ್ತು. ಈಗ ‘ಸಿತಾರೆ ಜಮೀನ್ ಪರ್’ ಚಿತ್ರದಿಂದ ಅವರು ಗೆಲುವಿನ ನಗೆ ಬೀರಿದ್ದಾರೆ. ಮೊದಲ ಮೂರು ದಿನಗಳಲ್ಲಿ ಅದ್ದೂರಿ ಗಳಿಕೆ ಮಾಡಿದ್ದ ಈ ಚಿತ್ರ ಸೋಮವಾರ (ಜೂನ್ 23) 8.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 66.65 ಕೋಟಿ ರೂಪಾಯಿ ಆಗಿದೆ. ಆಮಿರ್ ಅವರ ‘ಲಾಲ್ ಸಿಂಗ್ ಛಡ್ಡಾ’ ಮೊದಲಾದ ಚಿತ್ರಗಳಿಗೆ ಹೋಲಿಕೆ ಮಾಡಿದರೆ ಇದು ಉತ್ತಮ ಗಳಿಕೆಯೇ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಜಾಕ್ಪಾಟ್ ಹೊಡೆದ ‘ಕುಬೇರ’ ಹಾಗೂ ‘ಸಿತಾರೆ ಜಮೀನ್ ಪರ್’
ಇನ್ನು, ಕುಬೇರ ಸಿನಿಮಾ ಸೋಮವಾರ 6.50 ಕೋಟಿ ರೂಪಾಯಿ ಕಲೆಕ್ಷನ್ ಹಾಕಿದ್ದು, ಚಿತ್ರದ ಗಳಿಕೆ 55.10 ಕೋಟಿ ರೂಪಾಯಿ ಆಗಿದೆ. ಧನುಶ್ ಜೊತೆ ರಶ್ಮಿಕಾ ಮಂದಣ್ಣ, ನಾಗಾರ್ಜುನ ಮೊದಲಾದವರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಎರಡೂ ಸಿನಿಮಾಗಳು ಈ ವಾರಾಂತ್ಯದ ವೇಳೆಗೆ 100 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








