
ಖುಷ್ಬು ಒಂದು ಕಾಲದಲ್ಲಿ ಬಳುಕುವ ಬಳ್ಳಿಯಂತಿದ್ದ ನಟಿ. ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸ್ಟಾರ್ ನಟಿಯಾಗಿ ಮೆರೆದವರು. ಮದುವೆ ಆದರು, ಮಕ್ಕಳಾದವು, ರಾಜಕೀಯಕ್ಕೆ ಇಳಿದರು. ಸಹಜವಾಗಿಯೇ ವಯಸ್ಸಾಗುತ್ತಾ ಅವರ ದೇಹಾಕಾರದಲ್ಲಿ ಬದಲಾವಣೆಗಳಾದವು. ಆದರೆ ಇದೀಗ ಖುಷ್ಬು ಸುಂದರ್ ಮತ್ತೆ ‘ಯುವತಿ’ ಆಗಿದ್ದಾರೆ. ಹೌದು, ಕೆಲ ವರ್ಷಗಳ ಹಿಂದಷ್ಟೆ ದಡೂತಿ ದೇಹಿ ಆಗಿದ್ದ ಖುಷ್ಬು ಸುಂದರ್ ಈಗ ಮತ್ತೆ ಬಳುಕುವ ಬಳ್ಳಿಯಂತಾಗಿದ್ದಾರೆ. ಕೇವಲ ನಾಲ್ಕು ವರ್ಷಗಳಲ್ಲಿ ಖುಷ್ಬು ಅವರು ಸುಮಾರು 40 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.
ತಮ್ಮ ತೂಕ ಇಳಿಕೆ (ವೇಯಿಟ್ ಲಾಸ್ ಜರ್ನಿ) ಬಗ್ಗೆ ಮಾಧ್ಯಮವೊಂದರ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಖುಷ್ಬು, ಅವರು ಕೆಲ ವರ್ಷಗಳ ಹಿಂದೆ ಬರೋಬ್ಬರಿ 98 ಕೆಜಿ ಇದ್ದರಂತೆ. ‘ನನ್ನ ಹಿಂದಿನ ಸಿನಿಮಾಗಳನ್ನು ನೋಡಿ, ನನ್ನನ್ನು ನಾನೇ ಗುರುತು ಹಿಡಿಯಲು ಆಗದಂತೆ ಆಗಿದ್ದೆ. ನನ್ನ ಪತಿ ಈಗಲೂ ಯೋಗ ಮಾಡುತ್ತಾರೆ ವಾಕಿಂಗ್ ಮಾಡುತ್ತಾರೆ. ಆದರೆ ಕೆಲ ವರ್ಷಗಳ ಹಿಂದೆ ನನಗೆ ಆಗುತ್ತಿರಲಿಲ್ಲ. ಮೆಟ್ಟಿಲು ಹತ್ತುವಾಗ ನನಗೆ ಮೊಣಕಾಲು ನೋವು ಸಹ ಕಾಣಿಸಿಕೊಳ್ಳಲು ಪ್ರಾರಂಭವಾಯ್ತು. ನನ್ನ ಮಕ್ಕಳು ಸಹ ಆರೋಗ್ಯದ ಬಗ್ಗೆ ಗಮನ ಹರಿಸಲು, ತೂಕ ಕಡಿಮೆ ಮಾಡಿಕೊಳ್ಳಲು ಮುಂದಾದರು. ಹಾಗಾಗಿ ನಾನೂ ಸಹ ಆ ಪ್ರಯತ್ನಕ್ಕೆ ಕೈ ಹಾಕಿದೆ’ ಎಂದಿದ್ದಾರೆ.
ಆದರೆ ತೂಕ ಕಳೆದುಕೊಳ್ಳುವ ನನ್ನ ಈ ಐದು ವರ್ಷದ ಜರ್ನಿಯಲ್ಲಿ ನಾನು ಯಾವುದನ್ನೂ ಸಂಪೂರ್ಣವಾಗಿ ತ್ಯಜಿಸಿಲ್ಲ. ನಾನು ಯಾವುದೇ ಆಹಾರವನ್ನು ಬಿಟ್ಟಿಲ್ಲ, ನನ್ನಿಷ್ಟದ ಬಿರಿಯಾನಿ, ಐಸ್ಕ್ರೀಂ, ಸಿಹಿ ಪದಾರ್ಥ, ಸಕ್ಕರೆ ಭರಿತ ಟೀ ಯಾವುದನ್ನೂ ನಾನು ಬಿಟ್ಟಿಲ್ಲ. ಅವೆಲ್ಲವುಗಳನ್ನು ಸೇವಿಸಿಕೊಂಡೇ ನಾನು ತೂಕ ಇಳಿಸಿಕೊಂಡಿದ್ದೀನಿ’ ಎಂದಿದ್ದಾರೆ. ಮಾತ್ರವಲ್ಲದೆ ಇದನ್ನು ಹೇಗೆ ತಾವು ಸಾಧಿಸಿದ್ದು ಎಂಬುದನ್ನು ಸ್ಥೂಲವಾಗಿ ಅವರು ವಿವರಿಸಿದ್ದಾರೆ.
ಇದನ್ನೂ ಓದಿ:ರಜನೀಕಾಂತ್ಗೆ ‘ಪೋಡಾ’ ಎಂದಿದ್ದ ಖುಷ್ಬು: ಟಿವಿ9 ಸಂವಾದದಲ್ಲಿ ಹಳೆಯ ನೆನಪು
‘ನಾನು ಯಾವುದನ್ನೂ ಸಹ ಬಿಟ್ಟಿಲ್ಲ ಬದಲಿಗೆ ನನ್ನ ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರವೇ ತೆಗೆದುಕೊಳ್ಳುತ್ತೇನೆ. ಬಿರಿಯಾನಿ ಇಷ್ಟ ಹಾಗೆಂದು ಅದನ್ನು ಹೆಚ್ಚು ತಿನ್ನುವುದಿಲ್ಲ. ಒಂದು ಸಣ್ಣ ಬೌಲ್ ರೈಸ್, ಒಂದು ಪೀಸ್ ಅಷ್ಟನ್ನೇ ತಿನ್ನುತ್ತೇನೆ. ಐಸ್ಕ್ರೀಮ್ ತಿನ್ನುತ್ತೇನೆ. ಸಕ್ಕರೆ ಭರಿತ ಟೀ ಸೇವಿಸುತ್ತೇನೆ. ಆದರೆ ಎಲ್ಲವನ್ನೂ ಲಿಮಿಟ್ನಲ್ಲಿ ಮಾತ್ರವೇ ಸೇವಿಸುತ್ತೇನೆ. ಪೋರ್ಷನ್ ಕಂಟ್ರೋಲ್ ಬಗ್ಗೆ ಅತಿಯಾಗಿ ಗಮನ ವಹಿಸುತ್ತೇನೆ. ಆಹಾರವನ್ನು ತೂಕ ಹಾಕಿ, ನನ್ನ ದೇಹಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಸೇವನೆ ಮಾಡುತ್ತೇನೆ’ ಎಂದಿದ್ದಾರೆ ಖುಷ್ಬು.
ಕೇವಲ ಡಯಟ್ ಮಾತ್ರವಲ್ಲ, ಖುಷ್ಬು ಅವರು ಪ್ರತಿದಿನವೂ ತಪ್ಪದೆ ವ್ಯಾಯಾಮವನ್ನೂ ಮಾಡುತ್ತಾರಂತೆ. ‘ನನಗೆ ಜಿಮ್ಗೆ ಹೋಗುವುದು ಆಗುವುದಿಲ್ಲ. ಹಾಗಾಗಿ ನಾನು ಯೋಗ ಮಾಡುತ್ತೇನೆ ಇತರೆ ಕೆಲವು ವ್ಯಾಯಾಮಗಳನ್ನು ಮನೆಯಲ್ಲೇ ಮಾಡುತ್ತೇನೆ. ಅದರ ಹೊರತಾಗಿ ತಪ್ಪದೇ ವಾಕಿಂಗ್ ಮಾಡುತ್ತೇನೆ, ಅದನ್ನು ತಪ್ಪಿಸುವುದಿಲ್ಲ’ ಎಂದಿದ್ದಾರೆ. 98 ಕೆಜಿ ಇದ್ದ ಖುಷ್ಬು ಅವರು ಕೆಲವೇ ಕೆಲವು ಸರಳ ಬದಲಾವಣೆಗಳ ಮೂಲಕ 40 ಕೆಜಿ ತೂಕ ಇಳಿಸಿಕೊಂಡಿದ್ದು ಈಗ 58 ಆಗಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ