‘ವೈದ್ಯರು ಹೇಳಿದಾಗ ಅವರನ್ನು ಮನೆಗೆ ಕರೆತರುತ್ತೇವೆ’; ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ಹೊಸ ಮಾಹಿತಿ
ಜನವರಿ 9ರಂದು ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊವಿಡ್ ಲಕ್ಷಣ ಇದ್ದಿದ್ದರಿಂದ ಹೆಚ್ಚು ಆತಂಕ ಮೂಡಿತ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊವಿಡ್ ಇರುವ ವಿಚಾರ ಅಧಿಕೃತವಾಗಿತ್ತು.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರು ಕೊವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಹಲವು ದಿನಗಳು ಕಳೆದಿವೆ. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವಿಶೇಷ ವೈದ್ಯರ ತಂಡ ಅವರನ್ನು ನೋಡಿಕೊಳ್ಳುತ್ತಿದೆ. ಈ ಮಧ್ಯೆ ಅವರ ಆರೋಗ್ಯದ ಬಗ್ಗೆ ಸಾಕಷ್ಟು ವದಂತಿಗಳು ಕೂಡ ಹಬ್ಬಿದ್ದವು. ಈ ಬಗ್ಗೆ ಲತಾ ಮಂಗೇಶ್ಕರ್ ಅವರ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ಖ್ಯಾತ ಗಾಯಕಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಅವರು ಬೇಗ ಗುಣಮುಖರಾಗಿ ಮರಳಿ ಮನೆಗೆ ಬರಲಿ ಎನ್ನುವ ಪ್ರಾರ್ಥನೆ ಮುಂದುವರಿದಿದೆ.
ಜನವರಿ 9ರಂದು ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊವಿಡ್ ಲಕ್ಷಣ ಇದ್ದಿದ್ದರಿಂದ ಹೆಚ್ಚು ಆತಂಕ ಮೂಡಿತ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊವಿಡ್ ಇರುವ ವಿಚಾರ ಅಧಿಕೃತವಾಗಿತ್ತು. ಇದರ ಜತೆಗೆ ಅವರಿಗೆ ನ್ಯುಮೋನಿಯಾ ಕೂಡ ಅಂಟಿದೆ. ಹೀಗಾಗಿ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಈಗ ಅವರು ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.
‘ಲತಾ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ಸೂಚನೆ ನೀಡಿದ ನಂತರದಲ್ಲಿ ಅವರನ್ನು ಮನೆಗೆ ಕರೆ ತರಲಾಗುತ್ತದೆ’ ಎಂದು ಅನುಷಾ ಶ್ರೀನಿವಾಸ್ ಅಯ್ಯರ್ ಹೇಳಿದ್ದಾರೆ. ಲತಾ ಮಂಗೇಶ್ಕರ್ ವಕ್ತಾರೆಯಾಗಿ ಅವರು ಕೆಲಸ ಮಾಡುತ್ತಿದ್ದಾರೆ.
ಲತಾ ಮಂಗೇಶ್ಕರ್ ಆರೋಗ್ಯದ ಕುರಿತಂತೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು ಭಾನುವಾರ (ಜ.16) ಹೇಳಿಕೆ ನೀಡಿದ್ದರು. ‘ಲತಾ ಅವರ ಆರೋಗ್ಯ ಸುಧಾರಿಸುತ್ತಿದೆ. ಆಸ್ಪತ್ರೆಯ ಆಡಳಿತ ವರ್ಗದವರ ಜೊತೆ ನಾನು ಮಾತನಾಡಿದ್ದೇನೆ. ಜನರು ಹೆಲ್ತ್ ಅಪ್ಡೇಟ್ ತಿಳಿಯಲು ಕಾಯುತ್ತ ಇರುತ್ತಾರೆ. ಹಾಗಾಗಿ ಆಸ್ಪತ್ರೆಯ ವಕ್ತಾರರು ಅಪ್ಡೇಟ್ ನೀಡುತ್ತಾ ಇರಬೇಕು ಅಂತ ಸೂಚಿಸಿದ್ದೇನೆ’ ಎಂದು ರಾಜೇಶ್ ಟೋಪೆ ಹೇಳಿದ್ದರು.
ಇದನ್ನೂ ಓದಿ: Lata Mangeshkar: ಲತಾ ಮಂಗೇಶ್ಕರ್ ಆರೋಗ್ಯ ಹೇಗಿದೆ? ವೈದ್ಯರು ನೀಡಿದ ಮಾಹಿತಿ ಇಲ್ಲಿದೆ
Lata Mangeshkar: ಲತಾ ಮಂಗೇಶ್ಕರ್ ಆರೋಗ್ಯ ಸುಧಾರಣೆಗೆ ಕುಟುಂಬವರಿಂದ ವಿಶೇಷ ಪೂಜೆ; ಸಹೋದರಿ ಆಶಾ ಬೋಸ್ಲೆ ಮಾಹಿತಿ