‘ಲೋಕಃ 2’ ಘೋಷಣೆ, ಇಬ್ಬರು ಸ್ಟಾರ್ ನಟರು, ಭಯಾನಕ ವಿಲನ್
Lokah Chapter 2 movie: ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆದ ಮಲಯಾಳಂ ಸೂಪರ್ ಹೀರೋ ಸಿನಿಮಾ ‘ಲೋಕಃ’ ಭಾರಿ ದೊಡ್ಡ ಹಿಟ್ ಆಗಿದೆ. ಅತ್ಯಂತ ಕಡಿಮೆ ಬಜೆಟ್ನಲ್ಲಿ ಅದ್ಭುತವಾದ ಸೂಪರ್ ಹೀರೋ ಸಿನಿಮಾ ಅನ್ನು ದುಲ್ಕರ್ ಸಲ್ಮಾನ್ ನಿರ್ಮಿಸಿದ್ದಾರೆ. ಈ ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಇದೀಗ ಸಿನಿಮಾದ ಎರಡನೇ ಭಾಗ ಘೋಷಣೆಯಾಗಿದ್ದು, ಇಬ್ಬರು ಸ್ಟಾರ್ ನಟರು ಒಟ್ಟಿಗೆ ಈ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ದುಲ್ಕರ್ ಸಲ್ಮಾನ್ ನಿರ್ಮಾಣ ಮಾಡಿ, ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದ ‘ಲೋಕಃ’ ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿ ಭಾರಿ ದೊಡ್ಡ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಸಿನಿಮಾ ಆಗಿರುವ ‘ಲೋಕಃ’ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ಕೇವಲ 30 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಈಗಾಗಲೇ 200 ಕೋಟಿ ಕಲೆಕ್ಷನ್ ದಾಟಿದೆ. ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವಾಗಲೇ ಸಿನಿಮಾದ ಎರಡನೇ ಭಾಗವನ್ನು ಘೋಷಿಸಲಾಗಿದೆ.
‘ಲೋಕಃ 2’ ಸಿನಿಮಾದ ಘೋಷಣೆಯನ್ನು ಇಂದು (ಸೆಪ್ಟೆಂಬರ್ 27) ಮಾಡಲಾಗಿದೆ. ಆದರೆ ಈ ಎರಡನೇ ಭಾಗದಲ್ಲಿ ನೀಲಿ ಅಂದರೆ ಕಲ್ಯಾಣಿ ಪ್ರಿಯದರ್ಶನ್ ಇರುವುದಿಲ್ಲ ಬದಲಿಗೆ ಈ ಸಿನಿಮಾದಲ್ಲಿ ಇಬ್ಬರು ಸೂಪರ್ ಸ್ಟಾರ್ ನಟರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಆದರೆ ಒಬ್ಬರದ್ದು ಅತಿಥಿ ಪಾತ್ರವಷ್ಟೆ ಆಗಿರಲಿದೆ. ಖ್ಯಾತ ಮಲಯಾಂ ನಟ ಟೊವಿನೊ ಥಾಮಸ್ ಮತ್ತು ದುಲ್ಕರ್ ಸಲ್ಮಾನ್ ಅವರುಗಳು ‘ಲೋಕಃ 2’ ಸಿನಿಮಾನಲ್ಲಿ ಒಟ್ಟಿಗೆ ನಟಿಸಲಿದ್ದಾರೆ.
‘ಲೋಕಃ 2’ ಸಿನಿಮಾನಲ್ಲಿ ಟೊವಿನೊ ಮೈಖಲ್ ಆಗಿಯೂ, ದುಲ್ಕರ್ ಚಾರ್ಲಿಯಾಗಿಯೂ ನಟಿಸಿದ್ದಾರೆ. ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಟೀಸರ್ನಲ್ಲಿ ಮೈಖಲ್ ಮತ್ತು ಚಾರ್ಲಿ ಇಬ್ಬರು ಸೂಪರ್ ಹೀರೋಗಳು ಎಣ್ಣೆ ಹೊಡೆಯುತ್ತಾ ಮಾತನಾಡುತ್ತಿದ್ದಾರೆ. ಮೈಖಲ್ (ಟೊವಿನೊ’ ಪುಸ್ತಕವೊಂದನ್ನು ತೋರಿಸಿ, ಇದರಲ್ಲಿ ಮೊದಲ ಚಾಪ್ಟರ್ ನೀಲಿಯದ್ದು, ಎರಡನೇ ಚಾಪ್ಟರ್ ನನ್ನದು ಎನ್ನುತ್ತಾನೆ. ಅದೇ ಸಂಭಾಷಣೆಯಲ್ಲಿ ಮೈಖಲ್ಗೆ 389 ಮಂದಿ ಸಹೋದರರು ಇರುವ ವಿಷಯವನ್ನೂ ಹೇಳುತ್ತಾನೆ. ಅಲ್ಲದೆ ಚಾರ್ಲಿಯೇ ಹಿಟ್ಲರ್ ಅನ್ನು ಕೊಂದಿದ್ದು ಎಂಬ ಮಾಹಿತಿಯೂ ತಿಳಿಯುತ್ತದೆ.
ಇದನ್ನೂ ಓದಿ:ಸ್ಮಗ್ಲಿಂಗ್ ಪ್ರಕರಣ: ಖ್ಯಾತ ನಟ ದುಲ್ಕರ್ ಸಲ್ಮಾನ್ಗೆ ಸಮನ್ಸ್ ಜಾರಿ
ಆದರೆ ಈಗ ಮೈಖಲ್ನ ಅಣ್ಣ ವಾಪಸ್ ಬಂದಿದ್ದಾನೆ. ಅವನು ಬಹಳ ಹಿಂಸಾತ್ಮಕ ಪ್ರವೃತ್ತಿಯವನು. ಅವನನ್ನು ಮೈಖಲ್ ಎದುರಿಸಬೇಕಿದೆ. ‘ನಾನು ಕರೆದರೆ ಬರುತ್ತೀಯ ತಾನೆ?’ ಎಂದು ಮೈಖಲ್, ಚಾರ್ಲಿ (ದುಲ್ಕರ್) ಅನ್ನು ಕೇಳುತ್ತಾನೆ. ಆದರೆ ಅದಕ್ಕೆ ನಾನು ಬರುವುದಿಲ್ಲ ಎನ್ನುತ್ತಾನೆ ಚಾರ್ಲಿ, ಆದರೆ ಮೈಖಲ್ಗೆ ಗೊತ್ತು ಚಾರ್ಲಿ ಬಂದೇ ಬರುತ್ತಾನೆ ಅಥವಾ ಅವನನ್ನು ಗಾಬ್ಲಿನ್ಗಳು ಬಲವಂತದಿಂದ ಆದರೂ ಕಳಿಸುತ್ತಾರೆ ಎಂದು.
ಅಂದಹಾಗೆ ‘ಲೋಕಃ 2’ ಸಿನಿಮಾವನ್ನು, ‘ಲೋಕಃ’ ನಿರ್ದೇಶಿಸಿದ್ದ ಡಾಮಿನಿಕ್ ಅರುಣ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಟೊವಿನೊ ಥಾಮಸ್ದು ದ್ವಿಪಾತ್ರ ಎನ್ನಲಾಗುತ್ತಿದೆ. ಈಗ ಬಿಡುಗಡೆ ಆಗಿರುವ ಟೀಸರ್ನ ಕೊನೆಯಲ್ಲಿ ಅನಿಮೇಷನ್ ಒಂದನ್ನು ತೋರಿಸಲಾಗಿದ್ದು ಅನಿಮೇಷನ್ನಲ್ಲಿ ವಿಲನ್ನ ಚಿತ್ರವನ್ನು ತೋರಿಸಲಾಗಿದೆ. ಭಾರಿ ಅಜಾನುಭಾಹು, ಗಡ್ಡ ಕೂದಲು ಬಿಟ್ಟಿರುವ ಉರಿವ ಕಂಗಳ ವಿಲನ್ ಅನ್ನು ತೋರಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Sat, 27 September 25




