Lata Mangeshkar: ಲಗ್ ಜಾ ಗಲೇ ಹಾಡಿನ ಮೂಲಕ ಲತಾ ಮಂಗೇಶ್ಕರ್​ಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ನಟ ಸಲ್ಮಾನ್ ಖಾನ್

ಸಲ್ಮಾನ್ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಲತಾ ಅವರ ಅತ್ಯಂತ ಸ್ಮರಣೀಯ ಹಾಡುಗಳಲ್ಲಿ ಒಂದಾದ ಲಗ್ ಜಾ ಗಲೇ (Lag Jaa Gale) ಹಾಡನ್ನು ಹಾಡಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

Lata Mangeshkar: ಲಗ್ ಜಾ ಗಲೇ ಹಾಡಿನ ಮೂಲಕ ಲತಾ ಮಂಗೇಶ್ಕರ್​ಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ನಟ ಸಲ್ಮಾನ್ ಖಾನ್
ಸಲ್ಮಾನ್​ ಖಾನ್ ಹಾಗೂ ಲತಾ ಮಂಗೇಶ್ಕರ್
Updated By: ಗಂಗಾಧರ​ ಬ. ಸಾಬೋಜಿ

Updated on: Feb 13, 2022 | 1:38 PM

ಫೆಬ್ರವರಿ 6 ರಂದು ಭಾರತ ರತ್ನ ಪ್ರಶಸ್ತಿ ಪುರಸ್ಕೃತೆ, ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದು, ಭಾರತೀಯ ಮನರಂಜನಾ ಉದ್ಯಮವು ಅಮೂಲ್ಯವಾದ ರತ್ನವನ್ನು ಕಳೆದುಕೊಂಡಿತು. ಅವರಿಗೆ 92 ವರ್ಷವಾಗಿದ್ದು, ದೇಶವು ಇನ್ನೂ ಆ ನಷ್ಟದಿಂದ ಚೇತರಿಸಿಕೊಳ್ಳುತ್ತಿದೆ. ಅವರ ನಿಧನದಿಂದ ಇಡೀ ದೇಶವೇ ಶೋಕಿಸುತ್ತಿರುವಾಗ, ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಲತಾ ಮಂಗೇಶ್ಕರ್ ಅವರಿಗೆ ಭಾವಪೂರ್ಣ ಸಂಗೀತ ನಮನ ಸಲ್ಲಿಸಿದ್ದಾರೆ. ಸಲ್ಮಾನ್ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಲತಾ ಅವರ ಅತ್ಯಂತ ಸ್ಮರಣೀಯ ಹಾಡುಗಳಲ್ಲಿ ಒಂದಾದ ಲಗ್ ಜಾ ಗಲೇ (Lag Jaa Gale) ಹಾಡನ್ನು ಹಾಡಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಲತಾಜಿಯವರಂತೆ ಯಾರೂ ಇಲ್ಲ. ಅವರಂತೆ ಯಾರೂ ಆಗಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

ಫೆಬ್ರವರಿ 6 ರಂದು, ಲತಾ ಮಂಗೇಶ್ಕರ್ ನಿಧನರಾದ ದಿನ, ಸಲ್ಮಾನ್ ಅವರೊಟ್ಟಿಗಿನ ಫೋಟೋವನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ನಾವು ನಮ್ಮ ನೈಟಿಂಗೇಲ್​ನ್ನು ಕಳೆದುಕೊಂಡಿದ್ದೇವೆ, ಆದರೆ ಅವರ ಧ್ವನಿ ನಮ್ಮೊಂದಿಗೆ ಶಾಶ್ವತವಾಗಿರುತ್ತೆ ಎಂದು ಬರೆದುಕೊಂಡಿದ್ದರು.

ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯನ್ನು ಭಾನುವಾರದಂದು ಮುಂಬೈನಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಶಿವಾಜಿ ಪಾರ್ಕ್‌ನಲ್ಲಿ ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಉಪಸ್ಥಿತರಿದ್ದರು. ಶ್ರದ್ಧಾ ಕಪೂರ್ , ರಣಬೀರ್ ಕಪೂರ್ , ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಸೇರಿದಂತೆ ಹಲವಾರು ಬಾಲಿವುಡ್​ನ ಸೆಲೆಬ್ರಿಟಿಗಳು ಭಾನುವಾರ ಶಿವಾಜಿ ಪಾರ್ಕ್‌ನಲ್ಲಿ ಅಪ್ರತಿಮ ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು. ಕೋವಿಡ್-19 ಮತ್ತು ನ್ಯುಮೋನಿಯಾ ರೋಗನಿರ್ಣಯದ ನಂತರ ಲತಾ ಮಂಗೇಶ್ಕರ್ ಅವರನ್ನು ಜನವರಿ 8 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಲ್ಮಾನ್ ನಟಿ ಕತ್ರಿನಾ ಕೈಫ್ ಅವರೊಂದಿಗೆ ಥ್ರಿಲ್ಲರ್ ಚಿತ್ರವಾದ ‘ಟೈಗರ್ 3’ ಚಿತ್ರೀಕರಣವನ್ನು ಪುನರಾರಂಭಿಸಿದ್ದಾರೆ . ಇದಾದ ನಂತರ ಕಭಿ ಈದ್ ಕಭಿ ದೀಪಾವಳಿ ಚಿತ್ರವನ್ನು 2023 ಈದ್ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕಭಿ ಈದ್ ಕಭಿ ದೀಪಾವಳಿಯಲ್ಲಿ ಸಲ್ಮಾನ್ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಸದ್ಯದಲ್ಲೇ ಲುಕ್‌ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:

‘ಎಷ್ಟೇ ಮೈ ತೋರಿಸಿದರೂ ಈ ಕೆಟ್ಟ ಸಿನಿಮಾ ಗೆಲ್ಲಲ್ಲ’; ದೀಪಿಕಾ ಚಿತ್ರದ ಬಗ್ಗೆ ಕಂಗನಾ ಖಡಕ್​ ವಿಮರ್ಶೆ