ಎಸ್.ಎಸ್. ರಾಜಮೌಳಿ (SS Rajamouli) ನಿರ್ದೇಶನದ ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡಿಗೆ ‘ಗೋಲ್ಡನ್ ಗ್ಲೋಬ್ ಅವಾರ್ಡ್ಸ್’ನಲ್ಲಿ ಮನ್ನಣೆ ಸಿಕ್ಕಿದೆ. ಈ ಹಾಡಿಗೆ ‘ಅತ್ಯುತ್ತಮ ಒರಿಜಿನಲ್ ಸಾಂಗ್’ ಪ್ರಶಸ್ತಿ ದೊರೆತಿದೆ. ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ (MM Keeravani) ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈಗ ಈ ಹಾಡಿನ ಕುರಿತಾದ ಸಾಕಷ್ಟು ವಿಚಾರಗಳು ಹೊರಬೀಳುತ್ತಿವೆ. ಈ ಹಾಡನ್ನು ಬರೆಯಲು ತಗುಲಿದ ಸಮಯ ಬರೋಬ್ಬರಿ ಒಂದೂವರೆ ವರ್ಷಕ್ಕಿಂತಲೂ ಹೆಚ್ಚು. ಈ ವಿಚಾರವನ್ನು ಗೀತ ಸಾಹಿತಿ ಚಂದ್ರಬೋಸ್ ಅವರು ರಿವೀಲ್ ಮಾಡಿದ್ದಾರೆ.
ಎನ್ಡಿಟಿವಿ ಜತೆ ಚಂದ್ರಬೋಸ್ ಅವರು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ‘ರಾಜಮೌಳಿ ಅವರು ನನಗೆ ಸಿನಿಮಾದ ದೃಶ್ಯವೊಂದನ್ನು ಹೇಳಿ ಹಾಡು ಬರೆಯುವಂತೆ ಹೇಳಿದರು. ನಾನು ಮೂರು ಹಾಡನ್ನು ಬರೆದು ಅವರ ಮುಂದಿಟ್ಟೆ. ರಾಜಮೌಳಿ ಅವರು ನಾಟು ನಾಟು ಹಾಡನ್ನು ಆಯ್ಕೆ ಮಾಡಿದರು’ ಎಂದು ಚಂದ್ರಬೋಸ್ ಹೇಳಿದ್ದಾರೆ.
‘ನಾಟು ನಾಟು ಹಾಡಿನ ಶೇ. 90 ಸಾಹಿತ್ಯವನ್ನು ಕೇವಲ ಅರ್ಧ ದಿನದಲ್ಲಿ ಬರೆದೆ. ಇದನ್ನು ನಿರ್ದೇಶಕರು ಇಷ್ಟಪಟ್ಟರು. ಉಳಿದ ಶೇ. 10 ಭಾಗದ ಸಾಹಿತ್ಯ ಬರೆಯಲು ನನಗೆ ಒಂದು ವರ್ಷದ ಏಳು ತಿಂಗಳು ಬೇಕಾಯಿತು’ ಎಂದಿದ್ದಾರೆ ಚಂದ್ರಬೋಸ್.
ಇದನ್ನೂ ಓದಿ: Golden Globes 2023: ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ‘ಆರ್ಆರ್ಆರ್’ ತಂಡ; ಇಲ್ಲಿದೆ ಫೋಟೋ ಗ್ಯಾಲರಿ
ರಾಮ್ ಚರಣ್ ಹಾಗೂ ಜೂ.ಎನ್ಟಿಆರ್ ಅವರು ‘ನಾಟು ನಾಟು..’ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಹಾಡು ಹಳ್ಳಿ ಹಿನ್ನೆಲೆಯನ್ನು ಸಾರುತ್ತದೆ. ಈ ಹಾಡನ್ನು ಉಕ್ರೇನ್ನಲ್ಲಿ ಶೂಟ್ ಮಾಡಲಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಆರಂಭಕ್ಕೂ ಮೊದಲು ಈ ಹಾಡು ಶೂಟ್ ಆಗಿತ್ತು.
‘ನಾಟು ನಾಟು..’ ಹಾಡಿಗೆ ರಾಜಮೌಳಿ ಹಾಗೂ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸ್ವೀಕರಿಸಿದ ನಂತರದಲ್ಲಿ ಅವರು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ