ಭಾರಿ ಕೌತುಕ ಮೂಡಿಸಿದ್ದ ತೆಲುಗು ಚಿತ್ರರಂಗದ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ (MAA) ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕನ್ನಡದ ನಟ ಪ್ರಕಾಶ್ ರಾಜ್ ವಿರುದ್ಧ ವಿಷ್ಣು ಮಂಚು ಗೆದ್ದು ಬೀಗಿದ್ದಾರೆ. ಈ ಮೂಲಕ ಎರಡು ವರ್ಷಗಳ ಅವಧಿಗೆ ವಿಷ್ಣು ಮಂಚು ಮಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ವಿಷ್ಣು ಮಂಚು ಗೆಲುವು ವಿಷ್ಣು ಪ್ರಕಾಶ್ ರಾಜ್ ಕಡೆಯವರಿಗೆ ಬೇಸರ ತರಿಸಿದೆ. ಇನ್ನು, ಪ್ರಕಾಶ್ ರಾಜ್ ಪ್ಯಾನಲ್ 8 ಸ್ಥಾನ ಹಾಗೂ ಮಂಚು ವಿಷ್ಣು ಪ್ಯಾನಲ್ 10 ಸ್ಥಾನ ಗೆದ್ದಿದೆ.
ಮಾ ಚುನಾವಣೆ ಎಂಬುದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಪ್ರಕಾಶ್ ರಾಜ್ ಮತ್ತು ವಿಷ್ಣು ಮಂಚು ನಡುವೆ ಭಾರಿ ಹಣಾಹಣಿ ಏರ್ಪಟ್ಟಿತ್ತು. ಅಂತಿಮವಾಗಿ ಚುನಾವಣೆಯಲ್ಲಿ ವಿಷ್ಣು ಮಂಚು ವಿರುದ್ಧ ಪ್ರಕಾಶ್ ರಾಜ್ ಸೋತಿದ್ದಾರೆ. ಮೂವೀ ಆರ್ಟಿಸ್ಟ್ ಅಸೋಸಿಯೇಷನ್ನಲ್ಲಿ ಅಂದಾಜು 900 ಸದಸ್ಯರು ಇದ್ದಾರೆ. ದೊಡ್ಡ ಅಂತರದಿಂದ ಗೆದ್ದಿದ್ದಾರೆ ವಿಷ್ಣು.
ಈವರೆಗೂ ಇದಕ್ಕೆ ಹಿರಿಯ ನಟ ನರೇಶ್ ಅವರು ಅಧ್ಯಕ್ಷರಾಗಿದ್ದರು. ಅವರ ಅಧಿಕಾರದ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ (ಅ.10) ಎಲೆಕ್ಷನ್ ನಡೆದಿತ್ತು. ಇದೇ ಮೊದಲ ಬಾರಿಗೆ ಪ್ರಕಾಶ್ ರಾಜ್ ಅವರು ಚುನಾವಣೆ ಕಣಕ್ಕೆ ಇಳಿದ ಕಾರಣ ಈ ಬಾರಿ ಮಾ ಎಲೆಕ್ಷನ್ ಸಖತ್ ಹೈಪ್ ಪಡೆದುಕೊಂಡಿತ್ತು. ಅಂತಿಮವಾಗಿ ವಿಷ್ಣು ಮಂಚು ಗೆದ್ದಿದ್ದಾರೆ.
ಪ್ರಕಾಶ್ ರೈ ಅವರು ಮೂಲತಃ ತೆಲುಗು ನಟ ಅಲ್ಲ. ಹಾಗಾಗಿ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೆ ಹಲವು ಸ್ಟಾರ್ ಕಲಾವಿದರು ಪ್ರಕಾಶ್ ರಾಜ್ ಪರ ನಿಂತರು. ಕಡೆಗೂ ಎಲೆಕ್ಷನ್ನಲ್ಲಿ ಸ್ಪರ್ಧಿಸುವ ಅವಕಾಶ ಅವರಿಗೆ ಸಿಕ್ಕಿದೆ. ಸರಿಯಾದ ರೀತಿಯಲ್ಲಿ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಕೆಲಸ ಮಾಡುತ್ತಿಲ್ಲ ಎಂಬುದು ಪ್ರಕಾಶ್ ರಾಜ್ ವಾದ. ಹಾಗಾಗಿ ಅದರಲ್ಲಿ ದೊಡ್ಡ ಬದಲಾವಣೆ ತರಲು ಅವರು ನಿರ್ಧರಿಸಿದ್ದಾರೆ. ಆ ಕಾರಣಕ್ಕಾಗಿಯೇ ತಾವು ಅಧ್ಯಕ್ಷರಾಗಬೇಕು ಎಂದು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಅವರಿಗೆ ಸೋಲಾಗಿದೆ.
ಇದನ್ನೂ ಓದಿ: ಮತ್ತೊಮ್ಮೆ ಮದುವೆಯಾದ ನಟ ಪ್ರಕಾಶ್ ರಾಜ್ !-ಎಲ್ಲವೂ ಮಗನಿಗಾಗಿಯಂತೆ
ಚುನಾವಣೆಗೆ ನಿಂತ ಪ್ರಕಾಶ್ ರಾಜ್; ಮತಗಟ್ಟೆಗೆ ಬಂದು ವೋಟ್ ಮಾಡಿದ ಪವನ್ ಕಲ್ಯಾಣ್, ಚಿರಂಜೀವಿ
Published On - 9:08 pm, Sun, 10 October 21