ಚುನಾವಣೆಗೆ ನಿಂತ ಪ್ರಕಾಶ್ ರಾಜ್; ಮತಗಟ್ಟೆಗೆ ಬಂದು ವೋಟ್ ಮಾಡಿದ ಪವನ್ ಕಲ್ಯಾಣ್, ಚಿರಂಜೀವಿ
ತೆಲುಗಿನ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಚುನಾವಣೆ ಎಂಬುದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಪ್ರಕಾಶ್ ರಾಜ್ ಮತ್ತು ವಿಷ್ಣು ಮಂಚು ನಡುವೆ ಭಾರಿ ಹಣಾಹಣಿ ಏರ್ಪಟ್ಟಿದೆ.
ಭಾರಿ ಕೌತುಕ ಮೂಡಿಸಿರುವ ತೆಲುಗು ಚಿತ್ರರಂಗದ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ (MAA) ಚುನಾವಣೆ ಇಂದು (ಅ.10) ನಡೆದಿದೆ. ಮಾ ಅಧ್ಯಕ್ಷ ಸ್ಥಾನಕ್ಕಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ ಹಾಗೂ ವಿಷ್ಣು ಮಂಚು ಅವರು ಸ್ಪರ್ಧಿಸಿದ್ದಾರೆ. ಇಬ್ಬರಲ್ಲಿ ಯಾರಿಗೆ ಹೆಚ್ಚು ಮತ ಬಿದ್ದಿದೆ ಎಂಬುದನ್ನು ತಿಳಿದುಕೊಳ್ಳಲು ಇಡೀ ದಕ್ಷಿಣ ಭಾರತೀಯ ಚಿತ್ರರಂಗವೇ ಕಾದು ಕುಳಿತಿದೆ. ಟಾಲಿವುಡ್ನ ಘಟಾನುಘಟಿ ನಟರೆಲ್ಲ ಮತಗಟ್ಟೆಗೆ ಬಂದು ವೋಟ್ ಮಾಡಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್, ಮೋಹನ್ ಬಾಬು, ರಾಮ್ ಚರಣ್ ಮುಂತಾದವರು ಮತ ಚಲಾಯಿಸಿದ್ದಾರೆ.
ಮಾ ಚುನಾವಣೆ ಎಂಬುದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಪ್ರಕಾಶ್ ರಾಜ್ ಮತ್ತು ವಿಷ್ಣು ಮಂಚು ನಡುವೆ ಭಾರಿ ಹಣಾಹಣಿ ಏರ್ಪಟ್ಟಿದೆ. ಆದರೆ ಮತದಾನ ಪ್ರಕ್ರಿಯೆಯನ್ನು ಕೆಡಿಸಲು ಅಪರಿಚಿತ ವ್ಯಕ್ತಿಯೊಬ್ಬ ಪ್ರಯತ್ನಿಸಿದ್ದಾನೆ ಎಂಬ ಸುದ್ದಿ ಕೂಡ ಕೇಳಿಬಂದಿದೆ. ಆ ಕುರಿತು ಮೋಹನ್ ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರಾಜ್ ಮತ್ತು ವಿಷ್ಣು ಮಂಚು, ‘ಆತ ಯಾರು ಎಂಬುದು ನಮಗೆ ಗೊತ್ತಿಲ್ಲ. ಸದ್ಯ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.
ಮೂಲತಃ ಕನ್ನಡಿಗರಾದ ಪ್ರಕಾಶ್ ರಾಜ್ ಅವರಿಗೆ ಎಲ್ಲ ಭಾಷೆಯಲ್ಲೂ ಬೇಡಿಕೆ ಇದೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅಲ್ಲದೇ, ಅಲ್ಲಿನ ಕಲಾವಿದರ ಸಂಘದ ರಾಜಕೀಯದಲ್ಲೂ ಆಸಕ್ತಿ ತೋರಿಸುತ್ತಿದ್ದಾರೆ. ಟಾಲಿವುಡ್ನ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ.
ಮೂವೀ ಆರ್ಟಿಸ್ಟ್ ಅಸೋಸಿಯೇಷನ್ನಲ್ಲಿ ಅಂದಾಜು 900 ಸದಸ್ಯರು ಇದ್ದಾರೆ. ಈವರೆಗೂ ಇದಕ್ಕೆ ಹಿರಿಯ ನಟ ನರೇಶ್ ಅವರು ಅಧ್ಯಕ್ಷರಾಗಿದ್ದರು. ಅವರ ಅಧಿಕಾರದ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ (ಅ.10) ಎಲೆಕ್ಷನ್ ನಡೆದಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಇದರ ಚುನಾವಣೆ ನಡೆಯುತ್ತದೆ. ಸಂಘಕ್ಕೆ ಅಧ್ಯಕ್ಷ, ಕಾರ್ಯಕಾರಿ ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ ಮತ್ತು ಕಾರ್ಯಕಾರಿ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಪ್ರಕಾಶ್ ರಾಜ್ ಅವರು ಚುನಾವಣೆ ಕಣಕ್ಕೆ ಇಳಿದಿರುವ ಕಾರಣ ಈ ಬಾರಿ ಮಾ ಎಲೆಕ್ಷನ್ ಸಖತ್ ಹೈಪ್ ಪಡೆದುಕೊಂಡಿದೆ.
ಪ್ರಕಾಶ್ ರೈ ಅವರು ಮೂಲತಃ ತೆಲುಗು ನಟ ಅಲ್ಲ. ಹಾಗಾಗಿ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೆ ಹಲವು ಸ್ಟಾರ್ ಕಲಾವಿದರು ಪ್ರಕಾಶ್ ರಾಜ್ ಪರ ನಿಂತರು. ಕಡೆಗೂ ಎಲೆಕ್ಷನ್ನಲ್ಲಿ ಸ್ಪರ್ಧಿಸುವ ಅವಕಾಶ ಅವರಿಗೆ ಸಿಕ್ಕಿದೆ. ಸರಿಯಾದ ರೀತಿಯಲ್ಲಿ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಕೆಲಸ ಮಾಡುತ್ತಿಲ್ಲ ಎಂಬುದು ಪ್ರಕಾಶ್ ರಾಜ್ ವಾದ. ಹಾಗಾಗಿ ಅದರಲ್ಲಿ ದೊಡ್ಡ ಬದಲಾವಣೆ ತರಲು ಅವರು ನಿರ್ಧರಿಸಿದ್ದಾರೆ. ಆ ಕಾರಣಕ್ಕಾಗಿಯೇ ತಾವು ಅಧ್ಯಕ್ಷರಾಗಬೇಕು ಎಂದು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ:
ಕನ್ನಡಿಗ ಎಂದು ಪ್ರಕಾಶ್ ರಾಜ್ರನ್ನು ಹೊರಗೆ ಇಡುತ್ತಿರುವ ಟಾಲಿವುಡ್; ‘ನಮ್ಮವನಲ್ಲ’ ಎಂದವರಿಗೆ ನಟನ ಉತ್ತರ ಏನು?
Prakash Raj: ಮಕ್ಕಳ ಎದುರಲ್ಲೇ ಪ್ರಕಾಶ್ ರೈ ಮತ್ತೊಮ್ಮೆ ಮದುವೆ; ಇಲ್ಲಿವೆ ಖುಷಿಯ ಕ್ಷಣದ ಫೋಟೋಗಳು
Published On - 2:06 pm, Sun, 10 October 21