ಕನ್ನಡಿಗ ಎಂದು ಪ್ರಕಾಶ್ ರಾಜ್ರನ್ನು ಹೊರಗೆ ಇಡುತ್ತಿರುವ ಟಾಲಿವುಡ್; ‘ನಮ್ಮವನಲ್ಲ’ ಎಂದವರಿಗೆ ನಟನ ಉತ್ತರ ಏನು?
MAA Election: ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಕ್ಕೆ ನನಗೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಬಂದಿದೆ. ಈ ಯಾವುದೇ ವಿಚಾರಗಳಿಗೆ ನಾನು ಹೊರಗಿನವನು ಎಂಬುದು ಅಡ್ಡಬರಲಿಲ್ಲ. ಈಗ ಯಾಕೆ ಪ್ರಶ್ನೆ ಎದ್ದಿದೆ ಎಂದು ಪ್ರಕಾಶ್ ರಾಜ್ ಕೇಳಿದ್ದಾರೆ.
ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟ ಪ್ರಕಾಶ್ ರಾಜ್ (ಪ್ರಕಾಶ್ ರೈ) ಅವರು ಬಹುಭಾಷೆಯಲ್ಲಿ ಫೇಮಸ್. ಕನ್ನಡ ಮಾತ್ರವಲ್ಲದೆ ಹಿಂದಿ, ಮಲಯಾಳಂ, ತಮಿಳು, ತೆಲುಗಿನಲ್ಲಿಯೂ ಅವರು ನಟಿಸಿ ಗೆದ್ದಿದ್ದಾರೆ. ಅನೇಕ ವರ್ಷಗಳಿಂದ ಅವರು ಟಾಲಿವುಡ್ ಮಂದಿಗೆ ಚಿರಪರಿಚಿತರು. ಆದರೆ ಈಗ ಏಕಾಏಕಿ ತೆಲುಗು ಚಿತ್ರರಂಗದ ಕೆಲವರು ‘ಪ್ರಕಾಶ್ ರಾಜ್ ನಮ್ಮವನಲ್ಲ’ ಎಂದು ಬೊಬ್ಬೆ ಹೊಡೆಯಲು ಆರಂಭಿಸಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರುವುದು ಒಂದೇ ಒಂದು ಎಲೆಕ್ಷನ್!
ಟಾಲಿವುಡ್ನ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ (MAA) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪ್ರಕಾಶ್ ರಾಜ್ ತೀರ್ಮಾನಿಸಿದ್ದಾರೆ. ಆದರೆ ಅವರು ಈ ಚುನಾವಣೆಯಲ್ಲಿ ನಿಲ್ಲಬಾರದು ಎಂದು ಕೆಲವರು ಆಕ್ಷೇಪ ಎತ್ತಿದ್ದಾರೆ. ಪ್ರಕಾಶ್ ರಾಜ್ ಮೂಲತಃ ಕನ್ನಡದವರು. ಅವರ ಮಾತೃಭಾಷೆ ಕನ್ನಡ. ಹಾಗಾಗಿ ಅವರು ಎಂಎಎ ಎಲೆಕ್ಷನ್ನಲ್ಲಿ ಸ್ಪರ್ಧಿಸುವುದು ಸರಿಯಲ್ಲ ಎಂದು ತಕರಾರು ತೆಗೆದಿದ್ದಾರೆ. ಇದಕ್ಕೆ ಪ್ರಕಾಶ್ ರಾಜ್ ಖಡಕ್ ತಿರುಗೇಟು ನೀಡಿದ್ದಾರೆ.
‘ನಾನು ತೆಲಂಗಾಣದಲ್ಲಿ ಒಂದು ಹಳ್ಳಿಯನ್ನು ದತ್ತು ಪಡೆದುಕೊಂಡಾಗ ಯಾರೂ ಕೂಡ ನಾನು ಸ್ಥಳೀಯನಲ್ಲ ಎಂದು ಹೇಳಲಿಲ್ಲ. ನನ್ನ ಸಹಾಯಕರಿಗಾಗಿ ನಾನು ಹೈದರಾಬಾದ್ನಲ್ಲಿ ಮನೆ ಖರೀದಿಸಿದೆ. ನನ್ನ ಮಗ ಹೈದರಾಬಾದ್ನ ಶಾಲೆಗೆ ಹೋಗುತ್ತಾನೆ. ನನ್ನ ಆಧಾರ್ ವಿಳಾಸ ಕೂಡ ಹೈದರಾಬಾದ್ನದ್ದು. ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಕ್ಕೆ ನನಗೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಬಂದಿದೆ. ಈ ಯಾವುದೇ ವಿಚಾರಗಳಿಗೆ ನಾನು ಹೊರಗಿನವನು ಎಂಬುದು ಅಡ್ಡಬರಲಿಲ್ಲ. ಈಗ ಯಾಕೆ ಪ್ರಶ್ನೆ ಎದ್ದಿದೆ? ನಾನು ಸ್ಥಳೀಯನಲ್ಲ ಎಂದು ಕೇಳುವವರ ಸಂಕುಚಿತ ಮನೋಭಾವವನ್ನು ಇದು ತೋರಿಸುತ್ತದೆ’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಎಲೆಕ್ಷನ್ನಲ್ಲಿ ಸ್ಪರ್ಧಿಸಬೇಕು ಎಂದು ಪ್ರಕಾಶ್ ರಾಜ್ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದಲ್ಲ. ಒಂದು ವರ್ಷದಿಂದ ಈ ಬಗ್ಗೆ ಆಲೋಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ‘ಮೂರು ದಶಕಗಳಿಂದ ನಾನು ಈ ಚಿತ್ರರಂಗದಲ್ಲಿ ಇದ್ದೇನೆ. ಸದ್ಯದ ಬೆಳವಣಿಗೆಗಳ ಬಗ್ಗೆ ನನಗೆ ಸಮಾಧಾನವಿಲ್ಲ. ದೂಷಣೆ ಮಾಡುವುದು ಸುಲಭ. ಆದರೆ ಪರಿಹಾರ ಕಂಡುಕೊಳ್ಳುವುದು ಮುಖ್ಯ. ಅಧ್ಯಕ್ಷನಾಗಲು ನಾನು ಸೂಕ್ತ ಎಂದು ನನ್ನ ಸಹ-ಕಲಾವಿದರು ಹೇಳಿದರು. ಕಳೆದ ವರ್ಷದ ಘಟನೆಗಳನ್ನು ನೋಡಿದ ಬಳಿಕ ನಾನು ಈ ತೀರ್ಮಾನಕ್ಕೆ ಬಂದೆ’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಇದನ್ನೂ ಓದಿ:
ತಮಿಳು ಚಿತ್ರರಂಗದ ಕಾಮಿಡಿ ನಟ ವಿವೇಕ್ ಅಸ್ಥಿ ಹುಟ್ಟೂರಿನ ಸ್ಮಶಾನದ ಮರಗಳಿಗೆ ಗೊಬ್ಬರವಾಯ್ತು