ಕೊರೊನಾ ವೈರಸ್ ಎರಡನೇ ಅಲೆಗೆ ದೇಶದ ಜನರು ತತ್ತರಿಸಿದ್ದಾರೆ. ಪ್ರಾಣ ಹೋಗುತ್ತಿದ್ದರೂ ಕೂಡ ಆಸ್ಪತ್ರೆಗಳಲ್ಲಿ ಬೆಡ್ ಸಿಗದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ವಾಕ್ಸಿನ್ ಬಂದಿದ್ದರೂ ಸಹ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಕೆಲವರು ತಪ್ಪು ಮಾಹಿತಿ ಹರಡುತ್ತಿರುವುದು ವಿಪರ್ಯಾಸ. ಅಂಥವರಲ್ಲಿ ಕೆಲವು ಸೆಲೆಬ್ರಿಟಿಗಳು ಕೂಡ ಸೇರಿಕೊಂಡಿದ್ದಾರೆ. ಕೊವಿಡ್ ವ್ಯಾಕ್ಸಿನ್ ಬಗ್ಗೆ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಕಾಲಿವುಡ್ ನಟ ಮನ್ಸೂರ್ ಅಲಿ ಖಾನ್ ಅವರಿಗೆ 2 ಲಕ್ಷ ರೂ. ದಂಡ ವಿಧಿಸಲಾಗಿದೆ.
ಕಳೆದ ತಿಂಗಳು ಕಾಲಿವುಡ್ ನಟ ವಿವೇಕ್ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಕೊವಿಡ್ ವ್ಯಾಕ್ಸಿನ್ ಪಡೆದುಕೊಂಡ ಮರುದಿನವೇ ಅವರಿಗೆ ಹೃದಯಾಘಾತ ಆಗಿದ್ದು ಕಾಕತಾಳೀಯ. ಆ ಘಟನೆಯನ್ನು ಉಲ್ಲೇಖವಾಗಿ ಇಟ್ಟುಕೊಂಡು ನಟ ಮನ್ಸೂರ್ ಅಲಿ ಖಾನ್ ಅವರು ಕೊರೊನಾ ವ್ಯಾಕ್ಸಿನ್ ಬಗ್ಗೆ ತಪ್ಪು ಮಾಹಿತಿ ಹರಡಿದ್ದರು ಎಂದು ದೂರು ದಾಖಲಿಸಲಾಗಿತ್ತು.
ವಿವೇಕ್ ಅವರ ಹೃದಯಾಘಾತಕ್ಕೆ ವ್ಯಾಕ್ಸಿನ್ ಕಾರಣ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಅವರ ವಿರುದ್ಧ ಆರೋಗ್ಯಾಧಿಕಾರಿಗಳು ದೂರು ದಾಖಲಿಸಿದ್ದರು. ವಡಪಳನಿ ಪೊಲೀಸರು ಮನ್ಸೂರ್ ಅಲಿ ಖಾನ್ ವಿರುದ್ಧ ಎಫ್ಐಆರ್ ಸಿದ್ಧಪಡಿಸಿದ್ದರು. ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಈಗ ತೀರ್ಪು ನೀಡಿದೆ. ತಮಿಳುನಾಡು ಆರೋಗ್ಯ ಇಲಾಖೆಗೆ 2 ಲಕ್ಷ ರೂ.ಗಳನ್ನು ದಂಡದ ರೂಪದಲ್ಲಿ ಮನ್ಸೂರ್ ಅಲಿ ಖಾನ್ ನೀಡಬೇಕು ಎಂದು ತೀರ್ಪಿನಲ್ಲಿ ಸೂಚಿಸಲಾಗಿದೆ.
ವ್ಯಾಕ್ಸಿನ್ ಬಗ್ಗೆ ತಪ್ಪು ಮಾಹಿತಿ ನೀಡುವುದು ನನ್ನ ಉದ್ದೇಶ ಆಗಿರಲಿಲ್ಲ. ವಿವೇಕ್ ನಿಧನದ ಬಳಿಕ ತೀವ್ರ ನೋವು ಉಂಟಾಗಿತ್ತು. ಆ ಭಾವುಕತೆಯ ಭರದಲ್ಲಿ ಹಾಗೆ ಮಾತನಾಡಿದ್ದೆ ಎಂದು ಕೋರ್ಟ್ನಲ್ಲಿ ಮನ್ಸೂರ್ ಅಲಿ ಖಾನ್ ಹೇಳಿಕೆ ನೀಡಿದ್ದಾರೆ ಎಂದು ವರದಿ ಆಗಿದೆ. ಏ.17ರಂದು ನಟ ವಿವೇಕ್ ನಿಧನರಾಗಿದ್ದರು. ಆ ಬಳಿಕ ಮನ್ಸೂರ್ ಅಲಿ ಖಾನ್ ಅವರು ಕೊರೊನಾ ವ್ಯಾಕ್ಸಿನ್ ಬಗ್ಗೆ ತಪ್ಪು ಮಾಹಿತಿ ಹರಡಿದ್ದರು.
ಇದನ್ನೂ ಓದಿ: ಕೊವಿಡ್ ಲಸಿಕೆ ಪಡೆದ ಮರುದಿನವೇ ನಟ ವಿವೇಕ್ಗೆ ಹೃದಯಾಘಾತ! ಆಸ್ಪತ್ರೆಗೆ ದಾಖಲು
Vivek: ತಮಿಳು ನಟ ವಿವೇಕ್ ನಿಧನಕ್ಕೆ ಕಂಬನಿ ಮಿಡಿದ ಪುನೀತ್, ರಜನಿಕಾಂತ್, ಪ್ರಕಾಶ್ ರೈ, ರೆಹಮಾನ್