‘ಅಹೋ ವಿಕ್ರಮಾರ್ಕ’ ಸಿನಿಮಾದಲ್ಲಿ ಹೀರೋ ಆದ ‘ಮಗಧೀರ’ ವಿಲನ್ ದೇವ್ ಗಿಲ್

|

Updated on: Aug 07, 2024 | 11:02 PM

ನಟ ದೇವ್​ ಗಿಲ್​ ಅವರು ‘ಅಹೋ ವಿಕ್ರಮಾರ್ಕ’ ಮೂಲಕ ಹೀರೋ ಆಗಿ ಜನರನ್ನು ರಂಜಿಸಲು ಬರುತ್ತಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಹಾಡಿನ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ರವಿ ಬಸ್ರೂರು ಅವರು ಸಾಂಗ್ ರಿಲೀಸ್ ಮಾಡಿ ಶುಭಕೋರಿದರು.

‘ಅಹೋ ವಿಕ್ರಮಾರ್ಕ’ ಸಿನಿಮಾದಲ್ಲಿ ಹೀರೋ ಆದ ‘ಮಗಧೀರ’ ವಿಲನ್ ದೇವ್ ಗಿಲ್
ದೇವ್​ ಗಿಲ್​
Follow us on

2009ರಲ್ಲಿ ಬಿಡುಗಡೆ ಆಗಿದ್ದ ‘ಮಗಧೀರ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಆ ಸಿನಿಮಾದಲ್ಲಿ ರಾಮ್​ ಚರಣ್​ ಅವರು ಹೀರೋ ಆಗಿ ಮಿಂಚಿದ್ದರೆ, ನಟ ದೇವ್​ ಗಿಲ್​ ಅವರು ವಿಲನ್​ ಪಾತ್ರ ಮಾಡಿ ಜನಮನ ಗೆದ್ದಿದ್ದರು. ಖಡಕ್​ ಖಳನಾಗಿ ಚಪ್ಪಾಳೆ ಗಿಟ್ಟಿಸಿದ್ದ ಅವರು ಈಗ ಹೀರೋ ಆಗಿದ್ದಾರೆ. ಆ ಮೂಲಕ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಅವರು ಹೀರೋ ಆಗಿ ನಟಿಸಿರುವ ಸಿನಿಮಾಗೆ ‘ಅಹೋ ವಿಕ್ರಮಾರ್ಕ’ ಎಂದು ಹೆಸರು ಇಡಲಾಗಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ.

‘ಅಹೋ ವಿಕ್ರಮಾರ್ಕ’ ಸಿನಿಮಾಗೆ ಬಿರುಸಿನ ಪ್ರಚಾರ ಮಾಡಲಾಗುತ್ತಿದೆ. ಆಗಸ್ಟ್ 30ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡದಲ್ಲಿಯೂ ಈ ಸಿನಿಮಾ ತೆರೆಕಾಣಲಿದೆ. ಹಾಗಾಗಿ ದೇವ್ ಗಿಲ್ ಅವರು ಚಿತ್ರತಂಡದ ಜೊತೆ ಬೆಂಗಳೂರಿಗೆ ಬಂದು ಪ್ರಚಾರ ಮಾಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ‘ಅಹೋ ವಿಕ್ರಮಾರ್ಕ’ ಸಿನಿಮಾದ ‘ಮೀನಾಕ್ಷಿ..’ ಸಾಂಗ್ ರಿಲೀಸ್ ಮಾಡಿದರು. ‘ದೇವ್ ಗಿಲ್ ಅವರನ್ನು ಸ್ಕ್ರೀನ್ ಮೇಲೆ ನೋಡಿದಾಗ ಭಯ ಆಗುತ್ತಿತ್ತು. ಆದರೆ ನಮ್ಮ ಮನೆಗೆ ಅವರು ಬಂದಾಗ ಸರಳತೆ ಮತ್ತು ವಿನಯ ನನಗೆ ಇಷ್ಟ ಆಯಿತು. ಸಿನಿಮಾ ಮೇಲೆ ಅವರಿಗೆ ತುಂಬಾ ಪ್ರೀತಿಯಿದೆ. ಚಿತ್ರಮಂದಿರದಲ್ಲಿ ‘ಅಹೋ ವಿಕ್ರಮಾರ್ಕ’ ಸಿನಿಮಾ ಭಿನ್ನ ಅನುಭವ ನೀಡಲಿದೆ’ ಎಂದು ರವಿ ಬಸ್ರೂರು ಹೇಳಿದರು.

‘ಅಹೋ ವಿಕ್ರಮಾರ್ಕ’ ಚಿತ್ರಕ್ಕೆ ನಿರ್ದೇಶಕ ತ್ರಿಕೋಟಿ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ತೇಜಸ್ವಿನಿ ಪಂಡಿತ್, ಪ್ರವೀಣ್ ತಾರ್ಡೆ, ಪೋಸಾನಿ ಮುರಳಿ ಕೃಷ್ಣ, ಸಯಾಜಿ ಶಿಂಧೆ, ವಿಕ್ರಮ್ ಶರ್ಮಾ, ಕಾಲಕೇಯ ಪ್ರಭಾಕರ್ ಮುಂತಾದವರು ಈ ಸಿನಿಮಾ ಪಾತ್ರವರ್ಗದಲ್ಲಿ ಇದ್ದಾರೆ. ಆರತಿ ದೇವಿಂದರ್ ಗಿಲ್, ಅಶ್ವಿನಿ ಕುಮಾರ್ ಮಿಶ್ರಾ, ಮೀಹಿರ್ ಕುಲಕರ್ಣಿ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಬಗ್ಗೆ ದೇವ್​ ಗಿಲ್​ ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕನ್ನಡದ ಸಿನಿಪ್ರಿಯರಿಂದ ಅವರು ಬೆಂಬಲ ಕೋರಿದ್ದಾರೆ.

ಇದನ್ನೂ ಓದಿ: ರಾಜಮೌಳಿ ಜೀವನದ ಅಪರೂಪದ ಮಾಹಿತಿ ತಿಳಿಸಿದ ಹೊಸ ಸಾಕ್ಷ್ಯಚಿತ್ರ

ಬಿಡುಗಡೆ ಆಗಿರುವ ಹೊಸ ಸಾಂಗ್​ನಲ್ಲಿ ದೇವ್​ ಗಿಲ್ ಮತ್ತು ನಟಿ ಚಿತ್ರಾ ಶುಕ್ಲಾ ಅವರು ಬಿಂದಾಸ್​ ಆಗಿ ಡ್ಯಾನ್ಸ್ ಮಾಡಿದ್ದಾರೆ. ಕನ್ನಡ ವರ್ಷನ್​ ಹಾಡಿಗೆ ವರದರಾಜ್​ ಚಿಕ್ಕಬಳ್ಳಾಪುರ ಅವರು ಸಾಹಿತ್ಯ ಬರೆದಿದ್ದಾರೆ. ರವಿ ಬಸ್ರೂರು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಮನೀಶ್ ದಿನಕರ್ ಅವರು ಈ ಗೀತೆಯನ್ನು ಹಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.