ನಟ ಕಿಶೋರ್ ಹೊಸ ಸಿನಿಮಾ ‘ಆಪರೇಷನ್ ಕೊಂಬುಡಿಕ್ಕಿ’; ತೆರೆಹಿಂದೆ ನುರಿತ ತಂತ್ರಜ್ಞರು
ಎಂಥ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸಬಲ್ಲ ಕಲಾವಿದ ಕಿಶೋರ್ ಅವರು ಈಗ ‘ಆಪರೇಷನ್ ಕೊಂಬುಡಿಕ್ಕಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಎಸ್. ಮಹೇಂದರ್ ನಿರ್ದೇಶನದ ಈ ಚಿತ್ರವನ್ನು ಅನುಪ್ ಹನುಮಂತೇಗೌಡ ನಿರ್ಮಿಸುತ್ತಿದ್ದಾರೆ. ‘ಸಿಲ್ವರ್ ಸ್ಕ್ರೀನ್ ಸ್ಟುಡಿಯೋಸ್’ ಮೂಲಕ ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.
ಖ್ಯಾತ ನಟ ಕಿಶೋರ್ ಅವರು ಈಗಾಗಲೇ ಅನೇಕ ಬಗೆಯ ಪಾತ್ರಗಳನ್ನು ಮಾಡಿ ಜನಮನ ಗೆದ್ದಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಅವರು ಹೆಸರುವಾಸಿ ಆಗಿದ್ದಾರೆ. ಈಗ ಕನ್ನಡದಲ್ಲಿ ಅವರೊಂದು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಆಪರೇಷನ್ ಕೊಂಬುಡಿಕ್ಕಿ’ ಎಂಬುದು ಈ ಸಿನಿಮಾದ ಶೀರ್ಷಿಕೆ. ಇಂಥ ಡಿಫರೆಂಟ್ ಟೈಟಲ್ ಇಟ್ಟುಕೊಂಡಿರುವ ಕಾರಣದಿಂದ ಸಿನಿಮಾ ಬಗ್ಗೆ ಜನರಿಗೆ ಸಹಜವಾಗಿಯೇ ಕೌತುಕ ನಿರ್ಮಾಣ ಆಗಿದೆ. ಈ ಚಿತ್ರದ ತೆರೆ ಹಿಂದೆ ಖ್ಯಾತನಾಮರು ಕೆಲಸ ಮಾಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..
ನಿರ್ಮಾಪಕ ಅನುಪ್ ಹನುಮಂತೇಗೌಡ ಅವರು ‘ಆಪರೇಷನ್ ಕೊಂಬುಡಿಕ್ಕಿ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಮೊದಲು ಸೂಪರ್ ಹಿಟ್ ‘ಶಿವಾಜಿ ಸುರತ್ಕಲ್’ ಸರಣಿಯ ಎರಡು ಚಿತ್ರಗಳನ್ನು ನಿರ್ಮಾಣ ಮಾಡಿ ಯಶಸ್ಸು ಗಳಿಸಿದ್ದ ಅನುಪ್ ಅವರಿಗೆ ಇದು ಮೂರನೇ ಸಿನಿಮಾ. ಮತ್ತೊಂದು ಗೆಲುವು ಪಡೆಯುವ ಭರವಸೆಯೊಂದಿಗೆ ಅವರು ಈ ಸಿನಿಮಾದ ಕೆಲಸಗಳನ್ನು ಆರಂಭಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಕಿರಿಯ ಹಾಗೂ ಯಶಸ್ವಿ ನಿರ್ಮಾಪಕ ಎನಿಸಿಕೊಂಡ ಅವರು ‘ಸಿಲ್ವರ್ ಸ್ಕ್ರೀನ್ ಸ್ಟುಡಿಯೋಸ್’ ಸಂಸ್ಥೆಯನ್ನು ಆರಂಭಿಸಿ, ಅದರ ಮೂಲಕ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: ಗೆಳೆಯ ಡ್ಯಾನಿಯಲ್ಗೆ ವಿದಾಯ ಹೇಳಿದ ನಟ ಕಿಶೋರ್
‘ಆಪರೇಷನ್ ಕೊಂಬುಡಿಕ್ಕಿ’ ಸಿನಿಮಾಗೆ ಹಿರಿಯ ನಿರ್ದೇಶಕ ಎಸ್. ಮಹೇಂದರ್ ಅವರು ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡ ಅವರು ಈಗ ಹೊಸ ಕಥೆಯೊಂದಿಗೆ ಜನರನ್ನು ರಂಜಿಸಲು ತಯಾರಿ ಮಾಡಿಕೊಂಡಿದ್ದಾರೆ. ಕಿಶೋರ್ ಹೀರೋ ಆಗಿ ನಟಿಸುತ್ತಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಕಿಶೋರ್ ಅವರಿಗೆ ಪರಭಾಷೆಯಲ್ಲೂ ಅಭಿಮಾನಿಗಳು ಇದ್ದಾರೆ.
ಇದನ್ನೂ ಓದಿ: ಯುವತಿಯರ ಬೆತ್ತಲೆ ಮೆರವಣಿಗೆ ಪ್ರಕರಣ: ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರ ಕೂಗಿದ ನಟ ಕಿಶೋರ್
‘ಕೆ.ಜಿ.ಎಫ್: ಚಾಪ್ಟರ್ 2’, ‘ಸಲಾರ್’ ಸಿನಿಮಾಗಳ ಖ್ಯಾತಿಯ ರವಿ ಬಸ್ರೂರು ಅವರು ‘ಆಪರೇಷನ್ ಕೊಂಬುಡಿಕ್ಕಿ’ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ‘ಹೆಬ್ಬುಲಿ’, ‘ಕ್ರಾಂತಿ’ ಸಿನಿಮಾಗಳ ಖ್ಯಾತಿಯ ಛಾಯಾಗ್ರಾಹಕ ಕರುಣಾಕರ್ ಅವರು ಈ ಸಿನಿಮಾಗೆ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ದೀಪು ಎಸ್. ಕುಮಾರ್ ಅವರು ಸಂಕಲನ ಮಾಡಲಿದ್ದಾರೆ. ಇವರೆಲ್ಲರ ಸಂಗಮದಲ್ಲಿ ‘ಆಪರೇಷನ್ ಕೊಂಬುಡಿಕ್ಕಿ’ ಮೂಡಿಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.