ದರ್ಶನ್ ಬಟ್ಟೆ ಮೇಲೆ ರೇಣುಕಾ ಸ್ವಾಮಿ ರಕ್ತದ ಕಲೆ; ಪೊಲೀಸರಿಗೆ ಸಿಕ್ತು ದೊಡ್ಡ ಸಾಕ್ಷಿ
ಚಿತ್ರದುರ್ಗದ ರೇಣುಕಾ ಸ್ವಾಮಿ ಮರ್ಡರ್ ಪ್ರಕರಣದಲ್ಲಿ ಈ ಮೊದಲು ಸಿಸಿಟಿವಿ ದೃಶ್ಯಗಳು ಪ್ರಮುಖ ಸಾಕ್ಷಿಯಾಗಿ ಸಿಕ್ಕಿದ್ದವು. ಬಳಿಕ ಮೊಬೈಲ್ ಕರೆಗಳು ಮತ್ತು ಮೆಸೇಜ್ಗಳು ಇನ್ನಷ್ಟು ಸಾಕ್ಷಿ ಒದಗಿಸಿದವು. ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಒಂದು ಬಲವಾದ ಎವಿಡೆನ್ಸ್ ಈಗ ಪೊಲೀಸರ ಕೈ ಸೇರಿದೆ. ಅಂದು ದರ್ಶನ್ ಧರಿಸಿದ್ದ ಬಟ್ಟೆಗಳ ಮೇಲೆ ಪತ್ತೆಯಾದ ರಕ್ತದ ಕಲೆಗಳು ರೇಣುಕಾ ಸ್ವಾಮಿಯ ದೇಹದ್ದು ಎಂಬುದು ಖಚಿತವಾಗಿದೆ.
ಭಾರಿ ಸಂಚಲನ ಸೃಷ್ಟಿ ಮಾಡಿದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ವಿರುದ್ಧ ಅನೇಕ ಸಾಕ್ಷಿಗಳು ಸಿಕ್ಕಿವೆ. ಪೊಲೀಸರು ತನಿಖೆ ತೀವ್ರಗೊಳಿಸಿದಂತೆಲ್ಲ ಬಲವಾದ ಸಾಕ್ಷಿಗಳು ಸಿಗುತ್ತಿವೆ. ಈಗ ದರ್ಶನ್ ವಿರುದ್ಧ ಇನ್ನೊಂದು ಮಹತ್ವದ ಸಾಕ್ಷಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ವರದಿಯಲ್ಲಿ ಒಂದು ಭಯಾನಕ ಸತ್ಯ ಬಹಿರಂಗ ಆಗಿದೆ. ಪ್ರಕರಣ ನಡೆದ ದಿನ ದರ್ಶನ್ ಧರಿಸಿದ್ದ ಬಟ್ಟೆಗಳ ಮೇಲೆ ರೇಣುಕಾ ಸ್ವಾಮಿ ದೇಹದ ರಕ್ತದ ಕಲೆಗಳು ಇರುವುದು ಧೃಡಪಟ್ಟಿದೆ. ಇದರಿಂದ ದರ್ಶನ್ಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ.
ರೇಣುಕಾ ಸ್ವಾಮಿ ಮೃತದೇಹ ಪತ್ತೆ ಆದ ಬಂತರ ಬೆಂಗಳೂರು ಪೊಲೀಸರು ಬಹಳ ಚುರುಕಾಗಿ ತನಿಖೆ ಆರಂಭಿಸಿದ್ದರು. ಆರೋಪಿಗಳ ಮನೆಯಿಂದ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಎ2 ಆಗಿರುವ ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ರೌಂಡ್ ನೆಕ್ ಶರ್ಟ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.
ಎಫ್ಎಸ್ಎಲ್ ಪರಿಶೀಲನೆ ವೇಳೆ ದರ್ಶನ್ ಅವರ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇವುಗಳು ರೇಣುಕಾ ಸ್ವಾಮಿಯ ದೇಹದ ರಕ್ತ ಎಂಬುದು ವರದಿಯಲ್ಲಿ ಖಚಿತವಾಗಿದೆ. ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಭಾಗಿಯಾಗಿದ್ದರು ಎನ್ನುವುದಕ್ಕೆ ಇದು ಅತ್ಯಂತ ಮಹತ್ವಪೂರ್ಣ ಸಾಕ್ಷ್ಯ ಆಗುತ್ತಿದೆ. ಎಫ್ಎಸ್ಎಲ್ ತಂಡದವರು ಜಪ್ತಿ ಮಾಡಿದ್ದ ಇನ್ನೂ ಹಲವು ವಸ್ತುಗಳ ವರದಿ ಬರುವುದು ಬಾಕಿ ಇದೆ.
ಇದನ್ನೂ ಓದಿ: ದರ್ಶನ್ ಮನೆ ಸಿಸಿಟಿವಿಯಲ್ಲಿ ಶಾಕಿಂಗ್ ವಿಚಾರ ಬಯಲು; ಕೊಲೆ ಕೇಸ್ನಲ್ಲಿ ನಟನಿಗೆ ಹೆಚ್ಚಿತು ಸಂಕಷ್ಟ
ದರ್ಶನ್ ಸ್ನೇಹಿತೆಯಾದ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದ ಎಂಬ ಆರೋಪ ಇದೆ. ಆ ಕಾರಣದಿಂದಲೇ ಡಿ ಗ್ಯಾಂಗ್ನವರು ಆತನನ್ನು ಬೆಂಗಳೂರಿನಲ್ಲಿ ಥಳಿಸಿ, ಹತ್ಯೆ ಮಾಡಿದರು ಎಂಬ ಆರೋಪವಿದ್ದು, ತನಿಖೆಯಲ್ಲಿ ಅನೇಕ ವಿಚಾರಗಳು ಬಯಲಾಗುತ್ತಿವೆ. ದರ್ಶನ್ ಈ ಕೃತ್ಯ ಮಾಡಿರಲು ಸಾಧ್ಯವಿಲ್ಲ ಎಂಬುದು ಕೆಲವರ ಅಭಿಪ್ರಾಯ. ಆದರೆ ತನಿಖೆಯ ಪ್ರತಿ ಹಂತದಲ್ಲೂ ದರ್ಶನ್ ವಿರುದ್ಧ ಸಾಕ್ಷಿಗಳು ಸಿಗುತ್ತಿವೆ. ಇದರಿಂದ ನಟನಿಗೆ ಶಿಕ್ಷೆ ಆಗುವ ಸಾಧ್ಯತೆ ದಟ್ಟವಾಗಿದೆ. ದರ್ಶನ್ ಮಾತ್ರವಲ್ಲದೇ ಪವಿತ್ರಾ ಗೌಡ ಸೇರಿ ಒಟ್ಟು 17 ಮಂದಿ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.