ಮತ್ತೆ ಶುರುವಾಗಲಿದೆ ಮಹಾಭಾರತ; ವೀಕ್ಷಕರ ಬೇಡಿಕೆಗೆ ಸ್ಪಂದಿಸಿ ಎರಡೂವರೆ ತಾಸು ಪ್ರಸಾರ ಮಾಡಲು ನಿರ್ಧರಿಸಿದ ವಾಹಿನಿ

| Updated By: ಮದನ್​ ಕುಮಾರ್​

Updated on: May 13, 2021 | 9:24 AM

ವಾಹಿನಿ ಹೇಳಿರುವ ಪ್ರಕಾರ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6 ರಿಂದ 8.30ರ ತನಕ ಮಹಾಭಾರತ ಮನೆಮನೆಯಲ್ಲಿ ಮೊಳಗಲಿದೆ. ವಾಹಿನಿಯ ಈ ನಿರ್ಧಾರದಿಂದ ವೀಕ್ಷಕರು ಖುಷಿಗೊಂಡಿರುವರಾದರೂ ವಾರಾಂತ್ಯದ ಬದಲು ವಾರಪೂರ್ತಿ ಪ್ರಸಾರ ಮಾಡಿ ಎಂಬ ಬೇಡಿಕೆ ಇಡುವುದನ್ನು ಮಾತ್ರ ಮರೆತಿಲ್ಲ!

ಮತ್ತೆ ಶುರುವಾಗಲಿದೆ ಮಹಾಭಾರತ; ವೀಕ್ಷಕರ ಬೇಡಿಕೆಗೆ ಸ್ಪಂದಿಸಿ ಎರಡೂವರೆ ತಾಸು ಪ್ರಸಾರ ಮಾಡಲು ನಿರ್ಧರಿಸಿದ ವಾಹಿನಿ
ಮಹಾಭಾರತ ಧಾರಾವಾಹಿ
Follow us on

ಕಳೆದ ಬಾರಿ ಕೊರೊನಾ ಮೊದಲನೇ ಅಲೆಯಿಂದಾಗಿ ಲಾಕ್​ಡೌನ್​ ಆದಾಗ ಮನೆಯಲ್ಲಿ ದಿನಗಟ್ಟಲೆ ಹೇಗಪ್ಪಾ ಕೂರುವುದು ಎಂಬ ಚಿಂತೆ ಜನಸಾಮಾನ್ಯರಲ್ಲಿ ಶುರುವಾಗಿತ್ತು. ಚಿತ್ರೀಕರಣವನ್ನೂ ನಿಲ್ಲಿಸಿದ್ದ ಕಾರಣ ಇತ್ತ ಟಿವಿಯಲ್ಲಿ ಧಾರಾವಾಹಿ ನೋಡಿ ಸಮಯ ಕಳೆಯುತ್ತಿದ್ದವರಿಗೆ ಆ ಭಾಗ್ಯವೂ ಇಲ್ಲವಲ್ಲಾ ಎಂಬ ಬೇಸರ ತಲೆದೋರಿತ್ತು. ಹೊರಗಡೆ ಹೋದರೆ ಪೊಲೀಸರ ಲಾಠಿ ಏಟು, ಕೊರೊನಾ ಭಯ. ಒಳಗೇ ಇದ್ದು ಟಿವಿ, ಮೊಬೈಲ್​ ನೋಡಿ ಮನರಂಜನೆ ಪಡೆಯೋಣ ಎಂದರೆ ಅಲ್ಲಿಯೂ ತುಂಬಿ ತುಳುಕಾಡುತ್ತಿದ್ದ ಕೊರೊನಾ ಸುದ್ದಿ. ಇವೆಲ್ಲವೂ ಸೇರಿ ಸಮಯ ಕಳೆಯುವುದೇ ದೊಡ್ಡ ಸವಾಲಾಗಿತ್ತು. ಆದರೆ, ಈ ಸಂದರ್ಭದಲ್ಲಿ ಮೊದಲು ದೂರದರ್ಶನ ವಾಹಿನಿ ಹಲವು ವರ್ಷಗಳ ಹಿಂದಿನ ರಾಮಾಯಣ ಧಾರಾವಾಹಿ ಮರು ಪ್ರಸಾರ ಮಾಡುವುದಾಗಿ ಹೇಳಿ ಖುಷಿ ಮೂಡಿಸಿತ್ತು. ನಂತರ ಅದರ ಬೆನ್ನಲ್ಲೇ ಮಹಾಭಾರತವೂ ಬರಲಿದೆ ಎಂಬ ಸುದ್ದಿಯೂ ಹೊರಬಿತ್ತು. ಹಿಂದಿ ಅರ್ಥವಾಗುವವರು ಈ ಸುದ್ದಿಯಿಂದ ಕೂತಲ್ಲೇ ಕುಣಿದಾಡಿದರಾದರೂ ಕನ್ನಡ ಮಾತ್ರ ಅರ್ಥವಾಗುವವರು ನಮಗೂ ಇಂಥದ್ದೊಂದು ಧಾರಾವಾಹಿ ಬೇಕಿತ್ತು ಎಂದು ಹಳಹಳಿಸಿದ್ದರು.

ಜನರ ಈ ಮನೋಭಾವವನ್ನು ಅರ್ಥ ಮಾಡಿಕೊಂಡ ಸ್ಟಾರ್ ಸುವರ್ಣ ವಾಹಿನಿ ತನ್ನದೇ ಜಾಲದ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಧಾರಾವಾಹಿಯನ್ನು ಡಬ್ ಮಾಡಿ ಪ್ರಸಾರ ಮಾಡುವುದಾಗಿ ಘೋಷಿಸಿತ್ತು. ಆದರೆ, ಆಗ ಡಬ್ಬಿಂಗ್​ಗೆ ಕೆಲ ಅಡಚಣೆಗಳು ಉಂಟಾದ ಕಾರಣ ಹೇಳಿದ ದಿನಾಂಕಕ್ಕೆ ಧಾರಾವಾಹಿ ಆರಂಭಿಸುವುದು ಕಷ್ಟವಾಗಿ. ಹೆಚ್ಚೂ ಕಡಿಮೆ ಒಂದು ತಿಂಗಳ ನಂತರ ಅಂತೂ ಮಹಾಭಾರತ ಕನ್ನಡಿಗರ ಮನದಂಗಳಕ್ಕೆ ಕಾಲಿಟ್ಟಿತು. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಚಿತ್ರೀಕರಿಸಲಾಗಿದ್ದ ಈ ಧಾರಾವಾಹಿಗೆ ಅಷ್ಟೇ ಗುಣಮಟ್ಟದ ಡಬ್ಬಿಂಗ್​ ಮಾಡಿದ ಫಲವಾಗಿ ಕನ್ನಡಿಗರು ಇದು ನಮ್ಮದೇ ಧಾರಾವಾಹಿ ಎಂಬಂತೆ ನೆಚ್ಚಿಕೊಂಡರು. ಅಲ್ಲಿನ ಕಲಾವಿದರನ್ನು ನಮ್ಮವರೇ ಎಂಬಷ್ಟರ ಮಟ್ಟಿಗೆ ಪ್ರೀತಿಸಿದರು.

ಅನೇಕ ವರ್ಷಗಳ ಹಿಂದೆ ಕಿರುತೆರೆಯಲ್ಲಿ ಮೆರೆದು ಇತಿಹಾಸ ಸೃಷ್ಟಿಸಿ ನಂತರ ಕೊಂಚ ಮಂಕಾಗಿದ್ದ ಸ್ಟಾರ್ ಸುವರ್ಣ ವಾಹಿನಿಗೆ ಮಹಾಭಾರತ ಅಕ್ಷರಶಃ ಸಂಜೀವಿನಿಯಾಗಿ ಪರಿಣಮಿಸಿತು. ಕನ್ನಡಿಗರು ಅದ್ಯಾವ ಮಟ್ಟಿಗೆ ಈ ಧಾರಾವಾಹಿಯನ್ನು ನೆಚ್ಚಿಕೊಂಡರೆಂದರೆ ರಾತ್ರಿಯಾಗುತ್ತಿದ್ದಂತೆಯೇ ಎಲ್ಲರ ಮನೆಯಲ್ಲೂ ಮಹಾಭಾರತ ಎಂಬಂತಾಯ್ತು. ಅಷ್ಟೇ ಅಲ್ಲದೇ ಧಾರಾವಾಹಿಯ ಶೀರ್ಷಿಕೆ ಗೀತೆಯೂ ಅಪಾರ ಅಭಿಮಾನಿ ವರ್ಗವನ್ನು ಸಂಪಾದಿಸಿ ವಾಹಿನಿಗೆ ಹೊಸ ಜೀವಕಳೆಯನ್ನೇ ತಂದಿಟ್ಟಿತು.

ಇಂದಿಗೂ ಕೂಡ ಮಹಾಭಾರತದ ಪಾತ್ರಧಾರಿಗಳ ಮಾತು, ಹೇಳಿಕೆ, ಧಾರಾವಾಹಿಯ ತುಣುಕು ಸಂದರ್ಭಕ್ಕನುಗುಣವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ. ವಿಪರ್ಯಾಸವೆಂದರೆ ಈಗ ಕೊರೊನಾ ಎರಡನೇ ಅಲೆಯಿಂದ ಮತ್ತೆ ಲಾಕ್​ಡೌನ್ ಜಾರಿಯಾಗಿ ಕಳೆದ ವರ್ಷ ಎದುರಿಸಿದಂತಹ ಪರಿಸ್ಥಿತಿಯ ಸುಳಿಗೆ ಮರಳಿ ಬಂದಿದ್ದೇವೆ. ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಥಗಿತವಾಗಿರುವ ಕಾರಣ ಹೊಸ ಸಂಚಿಕೆಗಳ ಪ್ರಸಾರಕ್ಕೆ ಕತ್ತರಿ ಬಿದ್ದಿದೆ. ಎಲ್ಲಕ್ಕೂ ಮೇಲಾಗಿ ಜನರಿಗೆ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ತುಸು ಹಗುರಾಗಲು ಏನಾದರೊಂದು ದಾರಿ ಬೇಕಿದೆ. ಇದನ್ನರಿತ ಸ್ಟಾರ್ ಸುವರ್ಣ ವಾಹಿನಿ ಮತ್ತೆ ಮಹಾಭಾರತ ಧಾರಾವಾಹಿ ಪ್ರಸಾರ ಮಾಡುವ ನಿರ್ಧಾರಕ್ಕೆ ಬಂದಿದ್ದು, ವಾರಾಂತ್ಯದ ವೇಳೆಗೆ ಪ್ರಸಾರ ಮಾಡುವುದಾಗಿ ತಿಳಿಸಿದೆ.

ಸದ್ಯ ವಾಹಿನಿ ಹೇಳಿರುವ ಪ್ರಕಾರ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6 ರಿಂದ 8.30ರ ತನಕ ಮಹಾಭಾರತ ಮನೆಮನೆಯಲ್ಲಿ ಮೊಳಗಲಿದೆ. ವಾಹಿನಿಯ ಈ ನಿರ್ಧಾರದಿಂದ ವೀಕ್ಷಕರು ಖುಷಿಗೊಂಡಿರುವರಾದರೂ ವಾರಾಂತ್ಯದ ಬದಲು ವಾರಪೂರ್ತಿ ಪ್ರಸಾರ ಮಾಡಿ ಎಂಬ ಬೇಡಿಕೆ ಇಡುವುದನ್ನು ಮಾತ್ರ ಮರೆತಿಲ್ಲ!

ಇದನ್ನೂ ಓದಿ:
ಶೂಟಿಂಗ್​ ನಿಂತೋಯ್ತು; ಕನ್ನಡದ ಈ ಧಾರಾವಾಹಿಗಳ ಪ್ರಸಾರ ಶೀಘ್ರವೇ ಅಂತ್ಯ?