ಶೂಟಿಂಗ್ ನಿಂತೋಯ್ತು; ಕನ್ನಡದ ಈ ಧಾರಾವಾಹಿಗಳ ಪ್ರಸಾರ ಶೀಘ್ರವೇ ಅಂತ್ಯ?
ಮೇ 24ರವರೆಗೆ ಯಾರೊಬ್ಬರೂ ಧಾರಾವಾಹಿ/ ರಿಯಾಲಿಟಿ ಶೋ ಶೂಟಿಂಗ್ ಮಾಡುವಂತಿಲ್ಲ ಎಂದು ಟೆಲಿವಿಷನ್ ಅಸೋಸಿಯೇಷನ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಒಂದೊಮ್ಮೆ ಈ ಆದೇಶ ಮೀರಿದರೆ ಶಿಕ್ಷೆ ನೀಡುವ ಎಚ್ಚರಿಕೆ ಕೂಡ ನೀಡಲಾಗಿದೆ.
ಕೊರೊನಾ ವೈರಸ್ ಎರಡನೇ ಅಲೆ ಮಿತಿ ಮೀರಿ ಹರಡುತ್ತಿದೆ. ಇದನ್ನು ನಿಯಂತ್ರಿಸೋಕೆ ಸರ್ಕಾರ 14 ದಿನಗಳ ಲಾಕ್ಡೌನ್ ಘೋಷಣೆ ಮಾಡಿದೆ. ಇದರಿಂದ ಸಿನಿಮಾ, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಶೂಟಿಂಗ್ಗಳು ಸ್ಥಗಿತಗೊಂಡಿದೆ. ಇದು ಧಾರಾವಾಹಿ ಪ್ರಸಾರದ ಮೇಲೆ ಪ್ರಭಾವ ಉಂಟು ಮಾಡಿದೆ. ಕೆಲವೇ ದಿನಗಳಲ್ಲಿ ಬಹುತೇಕ ಧಾರಾವಾಹಿಗಳ ಪ್ರಸಾರ ತಾತ್ಕಾಲಿಕವಾಗಿ ನಿಲ್ಲಲಿದೆ ಎನ್ನಲಾಗುತ್ತಿದೆ.
ಮೇ 24ರವರೆಗೆ ಯಾರೊಬ್ಬರೂ ಧಾರಾವಾಹಿ/ ರಿಯಾಲಿಟಿ ಶೋ ಶೂಟಿಂಗ್ ಮಾಡುವಂತಿಲ್ಲ ಎಂದು ಟೆಲಿವಿಷನ್ ಅಸೋಸಿಯೇಷನ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಒಂದೊಮ್ಮೆ ಈ ಆದೇಶ ಮೀರಿದರೆ ಶಿಕ್ಷೆ ನೀಡುವ ಎಚ್ಚರಿಕೆ ಕೂಡ ನೀಡಲಾಗಿದೆ. ಹೀಗಾಗಿ, ಬಿಗ್ ಬಾಸ್ ರಿಯಾಲಿಟಿ ಶೋ ಅರ್ಧಕ್ಕೆ ನಿಂತಿದೆ. ಧಾರಾವಾಹಿಗಳ ಚಿತ್ರೀಕರಣ ಕೂಡ ಸ್ಥಗಿತಗೊಂಡಿದೆ.
ಸಾಮಾನ್ಯವಾಗಿ ಧಾರಾವಾಹಿಗಳ ತಂಡಗಳು ಒಂದು ವಾರಕ್ಕೆ ಸಾಕಾಗುವಷ್ಟು ಎಪಿಸೋಡ್ಗಳನ್ನು ಬ್ಯಾಂಕ್ ಮಾಡಿ ಇಟ್ಟುಕೊಂಡಿರುತ್ತವೆ. ಕೆಲ ಧಾರಾವಾಹಿ ತಂಡಗಳ ಬಳಿ ಎರಡು ವಾರಕ್ಕೆ ಸಾಕಾಗುವಷ್ಟು ದೃಶ್ಯಗಳೂ ಇರಬಹುದು. ಇವುಗಳನ್ನು ಈಗ ಟೆಲಿಕಾಸ್ಟ್ ಮಾಡಬಹುದು. ಹೊಸದಾಗಿ ಮತ್ತೆ ಶೂಟಿಂಗ್ ಮಾಡಬೇಕು ಎಂದರೆ ಲಾಕ್ಡೌನ್ ಮುಗಿಯುವವರೆಗೆ ಕಾಯಲೇಬೇಕು.
ಶೂಟ್ ಮಾಡಲಾದ ದೃಶ್ಯಗಳ ಪ್ರಸಾರ ಪೂರ್ಣಗೊಂಡ ನಂತರದಲ್ಲಿ ಧಾರಾವಾಹಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಗುತ್ತದೆ. ಮತ್ತೆ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ನಂತರೇ ಧಾರಾವಾಹಿಗಳ ಪ್ರಸಾರ ಆರಂಭವಾಗಲಿದೆ. ಅಲ್ಲಿಯವರೆಗೆ ಹಳೆಯ ಎಪಿಸೋಡ್ಗಳನ್ನು ಮರು ಪ್ರಸಾರ ಮಾಡುವ ಕಾರ್ಯದಲ್ಲಿ ವಾಹಿನಿಗಳು ತೊಡಗಬಹುದು.
ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ ಎಂದಾದರೆ 14 ದಿನಗಳ ಲಾಕ್ಡೌನ್ ವಿಸ್ತರಣೆ ಆಗಲಿದೆ. ಮತ್ತೆ 14 ದಿನ ಲಾಕ್ಡೌನ್ ವಿಸ್ತರಣೆ ಆದರೆ, ಅಲ್ಲಿಯವರೆಗೆ ಮತ್ತೆ ಶೂಟಿಂಗ್ಗೆ ಅವಕಾಶ ಇರುವುದಿಲ್ಲ. ಹೀಗಾಗಿ, ಕನ್ನಡದ ಬಹುತೇಕ ಧಾರಾವಾಹಿಗಳು ಶೀಘ್ರವೇ ತಾತ್ಕಾಲಿಕವಾಗಿ ನಿಲ್ಲಲಿವೆ.
ಕೊರೊನಾ ಮೊದಲನೇ ಅಲೆ ಕಾಣಿಸಿಕೊಂಡಾಗ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಆಗಲೂ ಧಾರಾವಾಹಿಗಳಿಗೆ ಇದೇ ತೊಂದರೆ ಉಂಟಾಗಿತ್ತು. ಕೆಲ ಧಾರಾವಾಹಿಗಳನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಇನ್ನೂ ಕೆಲ ಧಾರಾವಾಹಿ ತಂಡಗಳು, ಎಲ್ಲವೂ ಸಹಜ ಸ್ಥಿತಿಗೆ ಬಂದ ನಂತರದಲ್ಲಿ ಶೂಟಿಂಗ್ ಆರಂಭಿಸಿದ್ದವು. ಈ ಬಾರಿಯ ಲಾಕ್ಡೌನ್ನಲ್ಲಿ ಎಷ್ಟು ಧಾರಾವಾಹಿಗಳು ಅರ್ಧಕ್ಕೆ ನಿಲ್ಲುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: BBK8: ರಘು ಗೌಡ ಬಿಗ್ ಬಾಸ್ನಿಂದ ಹೊರಬಂದಾಗ ಹೆಂಡತಿ ಮನೆಯೊಳಗೆ ಸೇರಿಸೋದು ಅನುಮಾನ
Bigg Boss Kannada: ಕೊರೊನಾ ವಿಷಯ ಗೊತ್ತಾಗಿ ಕಣ್ಣೀರು ಹಾಕುತ್ತ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳು